2 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ: ಸಿದ್ದೇಶ್ವರ್

ದಾವಣಗೆರೆ:

     ಕೇಂದ್ರ ಸರ್ಕಾರ ದೇಶಾದ್ಯಂತ ಆರಂಭಿಸಿರುವ 610 ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ 2020ರ ವೇಳೆಗೆ 2 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

      ನಗರದ ಭಗೀರಥ ವೃತ್ತದಲ್ಲಿರುವ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, ಕೌಶಲ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿರುದ್ಯೋಗ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ದೇಶದಾದ್ಯಂತ ಆರಂಭಿಸಿರುವ ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ದೇಶದ ಜನಸಂಖ್ಯೆಯ ಶೇ.65 ರಷ್ಟಿರುವ 18 ರಿಂದ 35 ವರ್ಷ ವಯೋಮಾನದೊಳಗಿನ ಯುವಜನರನ್ನು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ತರಬೇತಿ ನೀಡಿ ಪ್ರೇರೇಪಿಸಿಲಾಗುತ್ತಿದೆ ಎಂದು ಹೇಳಿದರು.

      ರೂಮನ್ ಟಕ್ನಾಲಜಿ ಮೂಲಕ 2018ರಲ್ಲಿ ನಗರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಆರಂಭಿಸಲಾಯಿತು. ಆರಂಭದಲ್ಲಿ 100 ಜನರಿಗೆ ಮಾತ್ರ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಕೇಂದ್ರದಲ್ಲಿ 4200 ಜನರಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಈ ಕೇಂದ್ರದಲ್ಲಿ 1300 ಜನರು ತರಬೇತಿ ಪಡೆದಿದ್ದು, 610 ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಉಳಿದವರು ಸ್ವಂತ ಉದ್ಯೋಗ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.

      ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಗಾರ್ಮೆಂಟ್ಸ್ ಆರಂಭಿಸುವವರಿಗೆ ಉತ್ತೇಜನ ನೀಡಲು ಪ್ರಯತ್ನಿಸಲಾಗುತ್ತಿದೆ. ಈ ಕೇಂದ್ರಕ್ಕೆ ತರಬೇತಿಗೆ ಬರುವ ಅಭ್ಯರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದಿರುವುದು ತಮ್ಮ ಗಮನಕ್ಕೆ ಬಂದಿದ್ದು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನದಲ್ಲಿ ಯುವಕ ಯುವತಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

      ರೂಮನ್ ಟೆಕ್ನಾಲಜಿಯ ನಿರ್ದೇಶಕ ಟಿ.ಆರ್.ಕುಲಕರ್ಣಿ ಮಾತನಾಡಿ, ಉದ್ಯೊಗದ ಅವಶ್ಯಕತೆ ಇರುವವರಿಗೆ ಇಲ್ಲಿ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಆರ್ಥಿಕ ಸ್ವಾವಲಂಭಿಗಳನ್ನಾಗಿ ಮಾಡಲಾಗುವುದು ಎಂದು ಹೇಳಿದರು.

     ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ್ ಮಾತನಾಡಿ, ಈ ತರಬೇತಿ ಕೇಂದ್ರದಲ್ಲಿ 350 ವಿವಿಧ ಬಗೆಯ ವೃತ್ತಿ ಕೈಗೊಳ್ಳುವವರಿಗೆ ತರಬೇತಿ ನೀಡಲಾಗುತ್ತಿದೆ. ದಾವಣಗೆರೆ ಕೇಂದ್ರ ಇಡೀ ರಾಜ್ಯಕ್ಕೆ ಮಾದರಿ ಕೇಂದ್ರವಾಗಿದ್ದು, ಇಲ್ಲಿ ಅಷ್ಟು ಉತ್ತಮವಾದ ತರಬೇತಿ ಮತ್ತು ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಮಾತನಾಡಿ, ಉಚಿತವಾಗಿ ಕೌಶಲ್ಯ ತರಬೇತಿ ನೀಡುತ್ತಿರುವ ಈ ಕೇಂದ್ರದ ಸದುಪಯೋಗವನ್ನು ನಿರುದ್ಯೋಗಿ ಯುವಕ-ಯವತಿಯರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap