ಸುಪ್ರೀಂ ತೀರ್ಪಿಗೆ ನಾವು ಬದ್ಧ : ರಾಮ್ ವಿಲಾಸ್ ಪಾಸ್ವಾನ್

ಬೆಂಗಳೂರು

       ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ನಮ್ಮ ಪಕ್ಷ ಬದ್ಧವಾಗಿದ್ದು, ಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ಹೊರಡಿಸುವ ಅಗತ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

           ತುರ್ತಾಗಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಆರ್.ಎಸ್.ಎಸ್., ಭಜರಂಗದಳ, ವಿಶ್ವಹಿಂದೂ ಪರಿಷತ್ ನಂತಹ ಕೆಲ ಹಿಂದೂಪರ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಸುಗ್ರಿವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಒತ್ತಾಯಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ತೀರ್ಪಿಗಾಗಿ ಕಾಯುವುದು ಅನಿವಾರ್ಯ ಎಂದರು.

         ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಹಲವು ಭರವಸೆಗಳನ್ನು ನೀಡುತ್ತದೆ. ಅದೇ ರೀತಿ ಬಿಜೆಪಿ ಮಂದಿರ ನಿರ್ಮಿಸುವ ವಾಗ್ದಾನ ಕೊಟ್ಟಿದೆ. ಹಾಗಾಗಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಮೇಲೆ ಒತ್ತಡ ಇರಬಹುದು. ಆದರೆ ಈ ವಿಚಾರದಲ್ಲಿ ಪ್ರಧಾನಿ ಅವರ ಹೇಳಿಕೆಯನ್ನು ಮೈತ್ರಿಕೂಟದ ಅಂಗವಾಗಿ ನಮ್ಮ ಲೋಕಜನಶಕ್ತಿ ಪಕ್ಷ ಸಹ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

          ಪ್ರಸ್ತುತ ಸನ್ನಿವೇಶದಲ್ಲಿ ದೇಶದ ಜನತೆ ಸದೃಢ ನಾಯಕತ್ವ ಹಾಗೂ ಸಮರ್ಥ ಸರ್ಕಾರವನ್ನು ಅಪೇಕ್ಷಿಸುತ್ತಿದ್ದು ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ರಾಮ್ ವಿಲಾಸ್ ಪಾಸ್ವಾನ್ ವಿಶ್ವಾಸ ವ್ಯಕ್ತಪಡಿಸಿದರು.

         ದೇಶದ ಸುತ್ತ ಮುತ್ತ ವಿರೋಧಿಗಳನ್ನು ದಿಟ್ಟವಾಗಿ ಎದುರಿಸಲು ಸಮರ್ಥ ನಾಯಕತ್ವ ಬೇಕು. ಜನರು ಸಹ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಬಂದ ಸಮೀಕ್ಷೆಗಳು ಎನ್ ಡಿಎ ಗೆ ಹೆಚ್ಚಿನ ಸ್ಥಾನ ಲಭಿಸಲಿದೆ ಎಂದು ತಿಳಿಸಿದೆ. ಆಡಳಿತಾರೂಢ ನಮ್ಮ ಮೈತ್ರಿಕೂಟಕ್ಕೆ ಎಷ್ಟು ಸ್ಥಾನಗಳು ಬರಲಿವೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಅದು ಜನರಿಗೆ ಬಿಟ್ಟ ವಿಚಾರ. ಆದರೆ ಪ್ರಧಾನಿ ಹುದ್ದೆ ಮಾತ್ರ ಖಾಲಿಯಿಲ್ಲ ಎಂಬುದನ್ನು ಪ್ರತಿಪಕ್ಷಗಳು ಮನಗಾಣಬೇಕು ಎಂದರು.

          28 ಪಕ್ಷಗಳು ಸೇರಿ ಮಹಾ ಘಟಬಂಧನ ರಚಿಸಿಕೊಂಡಿವೆ. ಆದರೆ ಅವರಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಆಗಬೇಕು ಎನ್ನುವುದೇ ಅಂತಿಮಗೊಂಡಿಲ್ಲ. ಹೀಗಾಗಿ ಅವರಲ್ಲಿ ಅನಿಶ್ಚಿತತೆ ಮುಂದುವರೆದಿದೆ, ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎನ್ನುವುದನ್ನು ಎಷ್ಟು ಜನ ಒಪ್ಪುತ್ತಾರೆ ?. ಮಹಾ ಘಟಬಂಧನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಬಿಟ್ಟು 2024 ರ ಚುನಾವಣೆ ಕುರಿತು ವಿಚಾರ ಮಾಡುವುದು ಒಳಿತು ಎಂದರು.

          ಪ್ರಿಯಾಂಕ ಗಾಂಧಿ ಅವರು ರಾಜಕೀಯ ಪ್ರವೇಶಿಸಿರುವುದರಿಂದ ಬಿಜೆಪಿ ನಾಯಕರು ಭಯಭೀತರಾಗಿದ್ದಾರೆಯೇ ಎನ್ನುವ ಪ್ರಶ್ನೆಗೆ, ಇದು ಕಾಂಗ್ರೆಸ್ ನ ಆಂತರಿಕ ವಿಚಾರ. ಈ ಬೆಳವಣಿಗೆಯಿಂದ ಬಿಜೆಪಿಯವರು ಯಾಕೆ ಅಧೀರರಾಗಬೇಕು. ಕಾಂಗ್ರೆಸ್ ಅವರು ಪ್ರಿಯಾಂಕ ಗಾಂಧಿ ಅವರನ್ನು ಪಕ್ಷಕ್ಕೆ ಕರೆ ತಂದಿದ್ದರೆ ಬಿಜೆಪಿಯಲ್ಲಿ ಮೇನಕಾ ಗಾಂಧಿ ಇದ್ದಾರೆ. ಆದರೆ ಪ್ರಿಯಾಂಕ ಗಾಂಧಿ ಅವರಿಗೆ ರಾಜಕೀಯ ಭವಿಷ್ಯ ಇದೆಯೋ ಇಲ್ಲವೋ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸಾಮ್ ವಿಲಾಸ್ ಪಾಸ್ವಾನ್ ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap