ಬಿಡದಿ : ವಿದ್ಯುತ್​​ ಉತ್ಪಾದನಾ ಘಟಕದಲ್ಲಿ ಬಾಯ್ಲರ್​ ಸ್ಪೋಟ ಪ್ರಕರಣ

ಬಿಡದಿ

   ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ನಿರ್ಮಿಸಲಾಗಿರುವ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸ್ಥಾವರದಲ್ಲಿ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ ಐವರು ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಘಟನೆ ಕುರಿತು ತಾಂತ್ರಿಕ ತನಿಖೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಮಂಗಳವಾರ ಹೇಳಿದೆ.

   ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಉಮೇಶ್ ಎಂದು ಗುರ್ತಿಸಲಾಗಿದೆ. ಉಳಿದ ಗಾಯಾಳುಗಳನ್ನು ಅಮಲೇಶ್ (31), ಸಂತುನ್ (31), ತರುಣ್ (29) ಮತ್ತು ಲಖನ್ (28) ಎಂದು ಗುರುತಿಸಲಾಗಿದೆ.ಪ್ರಾಥಮಿಕ ಪೊಲೀಸ್ ವರದಿಗಳ ಪ್ರಕಾರ, ಬೆಳಿಗ್ಗೆ 4.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

   ಕೆಲಸ ಮಾಡುವುದನ್ನು ನಿಲ್ಲಿಸಿದ ಇಂಧನ ಉತ್ಪಾದಿಸುವ ಯಂತ್ರವನ್ನು ಸರಿಪಡಿಸಲು ಕಾರ್ಮಿಕರು ಪ್ರಯತ್ನಿಸಿದ್ದರು. ಈ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಮೇಶ್ ಮಂಗಳವಾರ ಮೃತಪಟ್ಟಿದ್ದಾರೆ. ಘಟನೆ ಸಂಬಂಂಧ ನಿರ್ವಾಹಕನ ವಿರುದ್ಧ ಪೊಲೀಸರು ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದಾರೆ.

   ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ (ಕೆಪಿಸಿಎಲ್) ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸೋಮವಾರದಿಂದ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಕಾರ್ಮಿಕರೂ ಕೆಲಸ ಮಾಡುತ್ತಿಲ್ಲ. ಗುರುವಾರದಿಂದ ಮರಳಿ ಕಾರ್ಯಾಚರಣೆ ಆರಂಭಿಸುವ ಚಿಂತನೆಗಳಿವೆ ಎಂದು ಹೇಳಿದ್ದಾರೆ.

   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗಿನ ಒಪ್ಪಂದದಂತೆ ಪ್ರತ್ಯೇಕಗೊಳಿಸಿದ ಉತ್ತಮ ಗುಣಮಟ್ಟದ ಒಣ ತ್ಯಾಜ್ಯವನ್ನು ವಿದ್ಯುತ್ ಉತ್ಪಾದನೆಗೆ ಘಟಕಕ್ಕೆ ಕಳುಹಿಸಬೇಕು. ಆದರೆ. ತ್ಯಾಜ್ಯದಲ್ಲಿ ಪಿನ್ಗಳು ಮತ್ತು ಇತರ ಲೋಹದ ತುಣುಕುಗಳು ಯಂತ್ರ ಪ್ರವೇಶಿಸಿದ್ದು, ಯಂತ್ರ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಈ ವೇಳೆ ಕಾರ್ಮಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಪೈಪ್‌ ಓಪನ್ ಮಾಡಿರುವುದರಿಂದ ಏಕಾಏಕಿ ಬಿಸಿ ಬೂದಿ ಸಿಡಿದು ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ತಾಂತ್ರಿಕ ತನಿಖೆಗೆ ಆದೇಶ ನೀಡಿದ್ದಾರೆ.

   ಘಟಕಕ್ಕೆ ಭೇಟಿ ನೀಡಿದ ಅವರು, ಸಮಸ್ಯೆಯು ತಾಂತ್ರಿಕವಾಗಿದ್ದು, ತನಿಖೆ ಪೂರ್ಣಗೊಂಡ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಕಾರ್ಮಿಕರು ಬೂದಿಯನ್ನು ಸಾಗಿಸುವ ಪೈಪ್ ಅನ್ನು ತೆಗೆದಿದ್ದು, ಇದರಿಂದ ಸ್ಫೋಟ ಸಂಭವಿಸಿದೆ. ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

   ಹಿಟಾಚಿಯು ಸ್ಥಾವರದ ತಂತ್ರಜ್ಞಾನ ಪಾಲುದಾರ ಸಂಸ್ಥೆಯಾಗಿದ್ದು, ಐಎಸ್‌ಜಿಇಸಿ ಕಂಪನಿಯು ಸ್ಥಾವರ ಸ್ಥಾಪಿಸಿ ನಿರ್ವಹಿಸುತ್ತಿದೆ. ಸ್ಥಾವರ ಇನ್ನೂ ಕೆಪಿಸಿಎಲ್ ಹಸ್ತಾಂತರವಾಗಿಲ್ಲ. ಇದೀಗ ಘಟಕದ ಪರಿಶೀಲನೆ ಹಂತದಲ್ಲಿ ದುರ್ಘಟನೆ ನಡೆದಿದ್ದು, ಎಲ್ಲವನ್ನೂ ಸರಿಪಡಿಸಿಕೊಂಡು ಉದ್ಘಾಟನೆ ಮಾಡಲಾಗುವುದು.

   ಸ್ಥಾವರದ ಉದ್ದೇಶ ಕೇವಲ ವಿದ್ಯುತ್ ಉತ್ಪಾದನೆಯಷ್ಟೇ ಅಲ್ಲ. ರಾಜಧಾನಿ ಬೆಂಗಳೂರಿನಲ್ಲಿ ತಲೆದೋರಿರುವ ತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವುದು ಸಹ ಆಗಿದೆ. ಈ ಸ್ಥಾವರದಲ್ಲಿ ನಿತ್ಯ 600 ಮೆಟ್ರಿಕ್ ಟನ್ ತ್ಯಾಜ್ಯ ಬಳಸಿ 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇಲ್ಲಿಗೆ ಬೆಂಗಳೂರಿನಿಂದ ಒಣಕಸ ಮಾತ್ರ ತಂದು ವಿದ್ಯುತ್ ಉತ್ಪಾದಿಸಲಾಗುವುದು. ಹಾಗಾಗಿ, ಘಟಕದ ಸುತ್ತ ದುರ್ನಾತ ಬರುವುದಿಲ್ಲ ಎಂದು ತಿಳಿಸಿದರು.

Recent Articles

spot_img

Related Stories

Share via
Copy link