ಹೊನ್ನಾಳಿ:
ಶಕ್ತಿ ದೇವಿಯ ಆರಾಧನೆಯಿಂದ ಬದುಕಿನಲ್ಲಿ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠ ಗ್ರಾಮದ ವ್ಯಾಪ್ತಿಯ, ಎಪಿಎಂಸಿ ಸಮೀಪದ ಶ್ರೀ ಗಡಿ ಚೌಡೇಶ್ವರಿ ದೇವಿ ದೇವಾಲಯದ ಪ್ರವೇಶ, ಶಿಲಾಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೇವಿಯ ಆರಾಧನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ. ಆದ್ದರಿಂದ, ಎಲ್ಲರೂ ದೇವಿಯ ಪೂಜೆ, ಸದ್ವಿಚಾರಗಳನ್ನು ಆಲಿಸುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಸತ್ಯ ಶುದ್ಧ ಕಾಯಕ ಮಾಡುತ್ತಾ ಮೋಕ್ಷ ಹೊಂದಲು ದೇವಿಯ ನಾಮ ಸ್ಮರಣೆ ಮಾಡಬೇಕು ಎಂದು ತಿಳಿಸಿದರು.
ಧರ್ಮ ಮತ್ತು ಕೀರ್ತಿ ಸ್ಥಿರವಾದವುಗಳು. ಧರ್ಮದಿಂದಲೇ ಸುಖ, ಧರ್ಮ ಸತ್ಯವಾದುದು. ಹಾಗಾಗಿ, ಧರ್ಮ ಮಾರ್ಗದಲ್ಲಿ ಬದುಕಿಗೆ ಅಗತ್ಯವಾದ ಸಂಪತ್ತು ಗಳಿಸಿ ಜನೋಪಯೋಗಿ ಕೆಲಸಗಳನ್ನು ಮಾಡಬೇಕು ಎಂದು ನುಡಿದರು.
ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಶಕ್ತಿ ಸ್ವರೂಪಿಣಿಯಾಗಿರುವ ಮಾತೆಯು ಚೌಡೇಶ್ವರಿ, ಚಾಮುಂಡೇಶ್ವರಿ ಇತ್ಯಾದಿ ವಿವಿಧ ನಾಮಗಳಿಂದ ಪ್ರಸಿದ್ಧಿಯಾಗಿದ್ದಾಳೆ. ಹೊನ್ನಾಳಿ ಪಟ್ಟಣದ ಹಿರೇಮಠ ಗ್ರಾಮದ ವ್ಯಾಪ್ತಿಯ, ಎಪಿಎಂಸಿ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಡಿ ಚೌಡೇಶ್ವರಿ ದೇವಿ ದೇವಸ್ಥಾನವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಶುದ್ಧ ಮನಸ್ಸಿನಿಂದ ದೇವಿಯನ್ನು ಆರಾಧಿಸಬೇಕು. ಮನಸ್ಸನ್ನು ಸದಾ ಶಾಂತವಾಗಿ ಇಟ್ಟುಕೊಳ್ಳಬೇಕು. ಮನಸ್ಸಿಗೆ ಉತ್ತಮ ಸಂಸ್ಕಾರ ನೀಡಬೇಕು. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳಿಗೆ ನೀಡಬೇಕು. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯತೆ ಇಂದು ಅತಿ ಹೆಚ್ಚಾಗಿದೆ ಎಂದು ವಿವರಿಸಿದರು.
ಪರಮಾತ್ಮನ ಸಾನಿಧ್ಯ ಹೊಂದಲು ಅತಿ ಹತ್ತಿರದ ಮಾರ್ಗ ಭಕ್ತಿ ಮಾರ್ಗವಾಗಿದೆ. ನೀನು ಎಲ್ಲಿ ವಾಸ ಮಾಡುತ್ತೀಯ? ಎಂದು ಪಾರ್ವತಿ ಪರಮೇಶ್ವರನನ್ನು ಕೇಳಿದಾಗ, ಭಕ್ತರು ಪ್ರೀತಿಯಿಂದ ಎಲ್ಲಿ ನನ್ನನ್ನು ಭಜಿಸುತ್ತಾರೆಯೋ ಅಲ್ಲಿಯೇ ನಾನು ನೆಲೆಸಿರುತ್ತೇನೆ ಎಂದು ಪರಮೇಶ್ವರ ಉತ್ತರಿಸುತ್ತಾನೆ. ಆದ್ದರಿಂದ, ಪರಶಿವನ ಸಾಕ್ಷಾತ್ಕಾರಕ್ಕೆ ಪೂಜೆ, ಭಜನೆ ಇತ್ಯಾದಿಗಳೇ ಸಾಧನಗಳಾಗಿವೆ. ಅವುಗಳನ್ನು ಮನುಷ್ಯರು ಬಳಸಿಕೊಂಡು ಮೋಕ್ಷ ಪಡೆದುಕೊಳ್ಳಬೇಕು. ಗುರುವಿನ ಸೇವೆಯಿಂದ ಜನ್ಮ ಜನ್ಮಾಂತರಗಳ ಪಾಪದಿಂದ ಮುಕ್ತಿ ಸಾಧ್ಯ ಎಂದು ತಿಳಿಸಿದರು.
ನ.15ರ ಗುರುವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾ ಪೂಜೆ, ಗೋ ಪೂಜೆಯೊಂದಿಗೆ ಅಗ್ರೋದಕ ತರುವುದು, ದೇವಾಲಯ ಪ್ರವೇಶ, ವಾಸ್ತು ಶಾಂತಿ, ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಮಹಾಗಣಪತಿ ಪೂಜೆ, ಉಮಾ ಮಹೇಶ್ವರ, ವರುಣ ವಾಸ್ತು, ಗಣ ಹೋಮ, ವಾಸ್ತು ಶಾಂತಿ ಹೋಮ, ದುರ್ಗಾ ಹೋಮ, ನವಗ್ರಹ ಹೋಮಗಳ ಬಳಿಕ ಶ್ರೀ ಅಮ್ಮನವರ ಪೀಠಾರೋಹಣ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನೆರವೇರಿದವು. 16ರಂದು ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.ಆಗಮಿಸಿದ ಎಲ್ಲಾ ಭಕ್ತರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಎಚ್. ಕಡದಕಟ್ಟೆ ಗ್ರಾಮ ಹಾಗೂ ಹೊನ್ನಾಳಿ ಪಟ್ಟಣದ ನೂರಾರು ಭಕ್ತರು ತಮ್ಮ ಸೇವೆ ಸಲ್ಲಿಸಿದರು. ಹೊನ್ನಾಳಿಯ ಶ್ರುತಿ ಸ್ಟೋರ್ಸ್ ಮಾಲೀಕ ಈರಣ್ಣ, ಶ್ರೀಶಾಸ್ತ ಭಾರತ್ ಗ್ಯಾಸ್ ಮಾಲೀಕ ಶಿವಕುಮಾರ್, ಹಿರೇಮಠದ ಕಂಟ್ರ್ಯಾಕ್ಟರ್ ಡಾಲರ್ ಹಳದಪ್ಪ, ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್, ಹೊನ್ನಾಳಿಯ ನಿಂಗಪ್ಪ, ವೆಂಕಟೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ