ಹೊನ್ನಾಳಿ:
ಮಡಿವಾಳ ಮಾಚಿದೇವ ಸಮಾಜ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಜಾಗೃತಗೊಳ್ಳಬೇಕು ಎಂದು ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ ಸ್ಥಾಪನೆಗೊಂಡು 20 ವರ್ಷಗಳಾದ ಹಾಗೂ ತಾವು ಮಠಕ್ಕೆ ಸ್ವಾಮೀಜಿ ಆಗಿ ನೇಮಕಗೊಂಡ ದಶಮಾನೋತ್ಸವ ವರ್ಷಾಚರಣೆ ಪ್ರಯುಕ್ತ ಹೊನ್ನಾಳಿಯಲ್ಲಿ ಸೋಮವಾರ ನಡೆದ ತಾಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಮಾಜ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗದ ಹೊರತು ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ಆದ್ದರಿಂದ, ಎಲ್ಲರೂ ತಮ್ಮೊಳಗಿನ ವೈಯಕ್ತಿಕ ಭಿನ್ನಾಭಿಪ್ರಾಯ, ದ್ವೇಷ, ಅಸೂಯೆಗಳನ್ನು ಮರೆತು ಸಮಾಜದ ಅಭಿವೃದ್ಧಿಗಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಡಿವಾಳ ಸಮಾಜ ಅತಿ ಸಣ್ಣ ಸಮಾಜವಾಗಿರುವ ಕಾರಣ ಧ್ವನಿ ಇಲ್ಲದ ಹಾಗೂ ಶತಮಾನಗಳಿಂದಲೂ ನಿರಂತರವಾಗಿ ಶೋಷಣೆಗೊಳಗಾದ ಸಮಾಜವಾಗಿದೆ. ಸಮಾಜದ ಶೇ.99ರಷ್ಟು ಜನರು ಕುಲ ಕಸುಬನ್ನು ಮತ್ತು ಕೂಲಿ-ನಾಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸಮಾಜದ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಜನರು ಮಾತ್ರ ಸಣ್ಣ-ಪುಟ್ಟ ನೌಕರಿ ಇಲ್ಲವೇ ಜಮೀನು ಅವಲಂಬಿಸಿ ಜೀವಿಸುತ್ತಿದ್ದಾರೆ. ಹಾಗಾಗಿ, ಸಮಾಜದ ಜನರ ಜೀವನ ಅಭದ್ರತೆಯಿಂದ ಕೂಡಿದೆ. ಈ ಕಾರಣಕ್ಕೆ ನಮ್ಮ ಸಮಾಜದ ಜನರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಹಾಗಾಗಿ, ನಮ್ಮ ಸಮಾಜದ ಬಲವರ್ಧನೆಗೆ ಸರಕಾರ ವಿಧಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ದೇಶದ 18 ರಾಜ್ಯಗಳಲ್ಲಿ ಮಡಿವಾಳ ಸಮಾಜವನ್ನು ಎಸ್‍ಟಿ ಮೀಸಲು ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದ್ದರಿಂದ, ಕರ್ನಾಟಕದಲ್ಲೂ ನಮ್ಮ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರ್ಪಡೆಗೊಳಿಸಬೇಕು. ಮಡಿವಾಳ ಜನಾಂಗದ ಸರ್ವತೋಮುಖ ಅಭಿವೃಧ್ಧಿಗೆ ಅನುವಾಗುವ ಉದ್ದೇಶದಿಂದ ಮಡಿವಾಳ ಅಭಿವೃದ್ಧಿ ನಿಗಮವನ್ನು ರಚಿಸಬೇಕು. ರಾಜ್ಯದ ಪ್ರಮುಖ ನಗರಗಳು, ಪಟ್ಟಣಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮಡಿವಾಳ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸರಕಾರ ಹಾಸ್ಟೆಲ್‍ಗಳನ್ನು ಸ್ಥಾಪಿಸಬೇಕು ಎಂದು ಕೋರಿದರು.
ಕುಲ ಕಸುಬನ್ನು ಅವಲಂಬಿಸಿರುವ ಮಡಿವಾಳ ಜನಾಂಗದವರು ತೀವ್ರ ಬಡತನದ ಬೇಗೆಯಲ್ಲಿ ಬೆಂದು-ನೊಂದಿದ್ದಾರೆ. ಆದ್ದರಿಂದ, ಮಡಿವಾಳ ಜನಾಂಗದವರಿಗೆ ಉಚಿತ ವಿದ್ಯುತ್ ನೀಡಬೇಕು. ಇಸ್ತ್ರಿಪೆಟ್ಟಿಗೆ ಸೇರಿದಂತೆ ವಿವಿಧ ಉಪಕರಣಗಳನ್ನು ಸರಕಾರದ ವತಿಯಿಂದ ಉಚಿತವಾಗಿ ವಿತರಿಸಬೇಕು. ಮಡಿವಾಳರ ವೃತ್ತಿಗೆ ಅನುಕೂಲವಾಗುವಂತೆ ಕುಟೀರಗಳನ್ನು ನಿರ್ಮಿಸಿ, ವಿತರಿಸಬೇಕು ಎಂದು ವಿನಂತಿಸಿದರು.
2019ರ ಜನವರಿ 5 ಮತ್ತು 6ರಂದು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅವರ ದಶಮಾನೋತ್ಸವ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಇತರ ಸಚಿವರು, ನಾಡಿನ ವಿವಿಧ ಮಠಾಧೀಶರು, ಮಡಿವಾಳ ಸಮಾಜಕ್ಕೆ ಸೇರಿದ ಕೇಂದ್ರದ ನಾಲ್ವರು ಮಂತ್ರಿಗಳು, ಇಬ್ಬರು ಸಂಸದರು, 14 ಶಾಸಕರು ಆಗಮಿಸಲಿದ್ದಾರೆ. ಹಾಗಾಗಿ, ನಾಡಿನ ಎಲ್ಲರೂ ಸಮಾರಂಭಕ್ಕೆ ಆಗಮಿಸಬೇಕು. ಎಲ್ಲಾ ರೀತಿಯ ಸಹಾಯ, ಸಹಕಾರಗಳನ್ನು ನೀಡಬೇಕು ಎಂದು ವಿನಂತಿಸಿದರು. ಜ.6ರಂದು ನಮ್ಮ ಸಮಾಜದ ಎಲ್ಲಾ ಬಾಂಧವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಸಮಾರಂಭದಲ್ಲಿ ಭಾಗವಹಿಸಬೇಕು ಎಂದರು.
ದಶಮಾನೋತ್ಸವದ ಬಗ್ಗೆ ಜನರನ್ನು ಜಾಗೃತಿಗೊಳಿಸಲು ಮತ್ತು ಸಂಪನ್ಮೂಲ ಕ್ರೋಡೀಕರಿಸಲು ರಾಜ್ಯಾದ್ಯಂತ ತಾವು ಪ್ರವಾಸ ಮಾಡುತ್ತಿದ್ದು, ಸೋಮವಾರದ ಇಂದು ಈಗ ಹೊನ್ನಾಳಿಯ ಪ್ರವಾಸ ನಡೆದಿದೆ. ಚನ್ನಗಿರಿ, ಭದ್ರಾವತಿ, ತರೀಕೆರೆ, ಅರಸೀಕೆರೆ ತಾಲೂಕುಗಳಲ್ಲಿಯೂ ಇಂದೇ ಸಭೆಗಳನ್ನು ನಡೆಸುವುದಾಗಿ ತಿಳಿಸಿದರು. ದಶಮಾನೋತ್ಸವ ಸಮಾರಂಭದ ದಾಸೋಹಕ್ಕೆ ಅಗತ್ಯವಾದ ಸುಮಾರು 5 ಕ್ವಿಂಟಾಲ್‍ಗಳಷ್ಟು ಖಾರದ ಪುಡಿಯನ್ನು ಬ್ಯಾಡಗಿ ತಾಲೂಕಿನವರು ನೀಡಲು ಮುಂದೆ ಬಂದಿದ್ದಾರೆ. 100 ಕ್ವಿಂಟಾಲ್‍ಗಳಷ್ಟು ಅಕ್ಕಿಯನ್ನು ನೀಡಲು ತುರುವೇಕೆರೆ ತಾಲೂಕಿನವರು ಮುಂದೆ ಬಂದಿದ್ದಾರೆ. ಇದೇ ರೀತಿ ಎಲ್ಲರೂ ಸಹಾಯ ಮಾಡಬೇಕು ಎಂದು ಹೇಳಿದರು.
ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ಮಡಿವಾಳ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸ್ವಾಮೀಜಿ ಶ್ರಮಿಸುತ್ತಿದ್ದಾರೆ.
ಸಮಾಜ ಬಾಂಧವರು ಅವರಿಗೆ ಶಕ್ತಿ ತುಂಬಬೇಕು. ಎಲ್ಲರೂ ಸ್ವಾಭಿಮಾನಿಗಳಾಗಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ತಾಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಳಗಟ್ಟೆ ಕೆ.ಎಂ. ನಾಗರಾಜಪ್ಪ ಮಾತನಾಡಿ, ಸ್ವಾಮೀಜಿ ನಾಡಿನ ಎಲ್ಲಾ ಭಾಗಗಳಲ್ಲೂ ಮಿಂಚಿನ ಸಂಚಾರ ಮಾಡುವ ಮೂಲಕ ಸಮಾಜವನ್ನು ಸಂಘಟಿಸುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಸ್ವಾಮೀಜಿ ಸುಮಾರು 10 ಲಕ್ಷ ಕಿಮೀ.ಗಳಷ್ಟು ದೂರದ ಪ್ರಯಾಣ ಮಾಡುವ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದರು.ಸಮಾಜದ ಮುಖಂಡ ಕೋಟೆಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಂಘದ ಗೌರವಾಧ್ಯಕ್ಷ ದೊಡ್ಡೇರಿ ರವಿಕುಮಾರ್, ಉಪಾಧ್ಯಕ್ಷ ಕತ್ತಿಗೆ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಆರ್. ಮಹಾಂತೇಶ್, ಯುವ ಘಟಕದ ಅಧ್ಯಕ್ಷ ಎಂ.ಕೆ. ರವಿಕುಮಾರ್, ಕಾರ್ಯದರ್ಶಿ ಭೋಜರಾಜ್, ಸಹಕಾರ ಸಂಘಗಳ ಉಪ ನಿಬಂಧಕ ಸತೀಶ್, ಮುಖಂಡರಾದ ಚಂದ್ರಪ್ಪ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಡಿವಾಳ ಸಮಾಜದವರು ಆಗಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
