ಕೂಡ್ಲಿಗಿ:
ಹುಲಿಯ ಪಳಗಿಸಿ, ಅದರ ಬಾಯಿಯಲ್ಲಿ ಕೈ ಹಾಕುವುದು ಬಳ್ಳಾರಿ ಜನತೆಗೆ ಗೊತ್ತು. ಹುಲಿಯನ್ನು ಎದುರಿಸಿ ರಾಜಕಾರಣ ಮಾಡುವುದು ನಮಗೂ ಗೊತ್ತು ಎಂದು ಚಿಕ್ಕಮಂಗಳೂರು ಶಾಸಕ ಸಿ.ಟಿ. ರವಿ ಹೇಳಿದರು.
ಬಳ್ಳಾರಿ ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಪಟ್ಟಣದಲ್ಲಿ ಬಿಜೆಪಿ ಕೂಡ್ಲಿಗಿ ಮಂಡಲದಿಂದ ಏರ್ಪಡಿಸಿದ್ದ ಕಾರ್ಯಕಾರಣಿ ಹಾಗೂ ಪೂರ್ವಬಾವಿ ಸಭೆಯಲ್ಲಿ ಮಾತನಾಡುತ್ತ, ಭಾನುವಾರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್. ಆಂಜನೇಯುಲು ನೀಡಿದ್ದ ಹೇಳಿಕೆ ತಿರುಗೇಟು ನೀಡಿದ ಅವರು, ಈ ಚುನಾವಣೆ ದೊಡ್ಡ ಮಟ್ಟದಲ್ಲಿ ಯಾವ ಬದಲಾವಣೆಯನ್ನು ತರಲಾರದು. ಆದರೆ ರಾಜಕೀಯ ಸಂದೇಶವನ್ನು ನೀಡಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಲಪಡಿಸಲು ಈ ಚುನಾವಣೆಯನು ಗೆಲ್ಲಲೇ ಬೇಕು ಎಂದರು.
ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಹಾಗೂ ದೇಶದಲ್ಲಿ ಕಾಂಗ್ರೆಸ್‍ಗೆ ಮಾತ್ರ ಮೋದಿ ಪ್ರಧಾನಿಯಾಗುವುದು ಬೇಡವಾಗಿದೆ. ರಾಜ್ಯದಲ್ಲಿ ಜನಾದೇಶದ ವಿರುದ್ದವಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದ್ದು, ಉಳಿಸುವುದಾಗಲಿ, ಉರುಳಿಸುವುದಾಗಲಿ ನಮ್ಮ ಕೆಲಸವಲ್ಲ. ಆದರೆ ಸರ್ಕಾರ ಪತನವಾಗಲು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳು ಕಾರಣವಾಗಲಿವೆ ಎಂದರು.
ಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ಮರಣ ನಂತರವೂ ರಾಜಕೀಯ ಮಾಡಿ ದೆಹಲಿಯಲ್ಲಿ ಜಾಗ ನೀಡದೆ ದಲಿತರನ್ನು ಅವಮಾನ ಮಾಡಿದವರು ಇಂದು ಬಿಜೆಪಿಯನ್ನು ದಲಿತರ ವಿರೋಧಿ ಎಂದು ಕರೆಯುತ್ತಾರೆ. ಇಂತವರಿಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಮಾತನಾಡಿ, ಮಂಡ್ಯ, ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ. ಆದರೆ ಬಳ್ಳಾರಿಯಲ್ಲಿ ಇಡೀ ಸರ್ಕಾರವೇ ಬಂದು ಚುನಾವಣೆ ಮಾಡುತ್ತದೆ. ಈ ಚುನಾವಣೆಗೆ ತೋರುವ ಆಸಕ್ತಿಯನ್ನು ಜಿಲ್ಲೆಯ ಅಭಿವೃದ್ಧಿಗೆ ತೋರಲಿ. ಭ್ರಷ್ಟಚಾರದ ವಿರುದ್ದ ಬೆಂಗಳೂರಿನಿಂದ ಬಳ್ಳಾರಿಯರೆಗೂ ಪಾದಯಾತ್ರೆ ಮಾಡಿದವರ ಮನೆಯಲ್ಲಿಯೇ ದೊಡ್ಡ ಮಟ್ಟದಲ್ಲಿ ಅಕ್ರಮ ಹಣ ಪತ್ತೆಯಾಗಿದೆ. ಬೆಳಗಾವಿಯಲ್ಲಿ ರಾಜಕೀಯ ಮಾಡಲು ಹೋಗಿ ವಿಫಲವಾದವರು, ಬಳ್ಳಾರಿಯಲ್ಲಿ ರಾಜಕೀಯ ಮಾಡಲು ಬರುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಡಿ.ಕೆ. ಶಿವಕುಮರ್ ವಿರುದ್ದ ಗುಡುಗಿದರು.
ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಕೂಡ್ಲಿಗಿ ಮಂಡಲ ಅಧ್ಯಕ್ಷ ಕೆ.ಎಚ್. ವೀರನಗೌಡ ಮಾತನಾಡಿದರು.
ಮುಖಂಡರಾದ ಮೃತ್ಯಂಜಯ ಜಿನಗಾ, ಸೂರ್ಯಪಾಪಣ್ಣ, ಟಿ.ಜಿ. ಮಾಲ್ಲಿಕಾರ್ಜುನ ಗೌಡ, ರಾಮಲಿಂಗಪ್ಪ, ಮಂಜುನಾಥ, ಚನ್ನಪ್ಪ, ಎಸ್.ಪಿ. ಪ್ರಕಾಶ, ಶ್ರಿನಿವಾಸ ರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ರೇವಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವಂಕಟೇಶ್ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ, ಸದಸ್ಯರಾದ ಚಿನ್ನಾಪ್ರಪ್ಪ, ಪಾಪನಾಯಕ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಗಾರು ಹನುಮಂತು ಮರಳಿ ಬಿಜೆಪಿಗೆ ಸೇರ್ಪಡೆಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ