ಕಂಪ್ಲಿ
ಕೆಲ ಯುವಕರು ಭ್ರಮೆಯಲ್ಲಿ ಮುಳುಗಿ ಯೋಚಿಸದೆ ಮೋದಿಯೆ ದೇವರ ಅವತಾರ ಎಂಬಂತೆ ಕನವರಿಸುತ್ತಿದ್ದಾರೆ. ಇತಿಹಾಸ ಗೊತ್ತಿಲ್ಲದ ಇಂಥ ಯುವಕರಿಂದ ದೇಶಕ್ಕೆ ಭವಿಷತ್ ಇಲ್ಲ. ಇದಕ್ಕೆ ಪೂರಕ ಎಂಬಂತೆ ಈವತ್ತಿನ ಕೆಲ ಎಲೆಕ್ಟ್ರಾನಿಕ್ ಮೀಡಿಯಾ ಯುವಕರನ್ನು ದಾರಿ ತಪ್ಪಿಸಿ ಪ್ರಜಾಪ್ರಬುತ್ವವನ್ನು ಕಾರ್ಪೊರೇಟ್ ಅಡಿಯಲ್ಲಿ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾವೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ನಟರಾಜ ಕಲಾ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಪರ ನಡೆಸಿದ ಪ್ರಚಾರ ಹಾಗೂ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಐದು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿಯ ನರೇಂದ್ರ ಮೋದಿ ದೇಶಕ್ಕೆ ತಾವು ನೀಡಿದ ಕೊಡುಗೆ ಏನು ಎನ್ನುವುದನ್ನು ಜನರ ಮುಂದೆ ಇಡುತ್ತಿಲ್ಲ.
ಕೇವಲ ಹಿಂದುತ್ವ ಅಜೆಂಡಾವನ್ನೆ ಮುಂದಿಟ್ಟುಕೊಂಡು ಬಾಷಣ ಮಾಡುತ್ತಿರುವ ಮೋದಿ ತಾನು ಮಾಡಿದ ತಪ್ಪುಗಳ ಮತ್ತು ಒಪ್ಪುಗಳ ಲೆಕ್ಕ ಕೊಡುತ್ತಿಲ್ಲ. ಜನಪರವಾದ ಕೆಲಸದ ಬಗ್ಗೆ ಬಿಜೆಪಿ ನಾಯಕರ್ಯಾರು ಕೂಡ ಮಾತಾಡುತ್ತಿಲ್ಲ. ದೇಶದಲ್ಲಾದ ಅಭಿವೃದ್ದಿ ಏನು ಎಂಬುದರ ಬಗ್ಗೆ ಮಾತಾನಾಡುವುದು ಬಿಟ್ಟು ಅವರು ಕೇವಲ ಮೋದಿಯ ಜಾತ್ರೆಯನ್ನ ಮಾಡುತ್ತಿದ್ದಾರೆ.
ಕಳೆದ 5 ವರ್ಷಗಳಲ್ಲಿ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ದೇಶದ ರೈತರ ಸಾಲ ಮನ್ನಾ ಮಾಡುವುದರ ಬದಲು ಕೆಲವೇ ಉದ್ಯಮಿಗಳಿಗೆ ಬೆಂಗಾವಲಾಗಿ ನಿಂತು ಕೆಲಸ ಮಾಡಿರುವುದನ್ನೇ ಬುದ್ದಿವಂತಿಕೆ ಅಂದುಕೊಂಡಿರುವ ಮೋದಿ ಕೇವಲ ಮಾದ್ಯಮಗಳ ಮೂಲಕ ಹೀರೊನಂತೆ ವರ್ತಿಸುತ್ತಿದ್ದಾರೆ. ನರೇಂದ್ರ ಮೋದಿಯವರು ದೇಶದ ಕೃಷಿಕರಿಗೆ ಯಾವ ಅಭಿವೃದ್ದಿ ಪಡಿಸಿದ್ದಾರೆ ಎನ್ನುವುದನ್ನು ರೈತರು ಗಮನಿಸಬೇಕಿದೆ.
ದೇಶಕ್ಕೆ ಮೇಕಿನ್ ಇಂಡಿಯಾ ಎಲ್ಲಿ ಬಂತು. ಬುಲೇಟ್ ಟ್ರೈನ್ ಎಲ್ಲಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಸೃಷ್ಠಿಯಾಯಿತು. ವಿದ್ಯಾವಂತ ನಿರುದ್ಯೋಗಿಗಳಿಗೆ ಪಕೋಡ ಮಾರಲು ಉಪದೇಶಿಸಿದ ಮೋದಿ ಕಳೆದ ಐದು ವರ್ಷದಲ್ಲಿ ಮಾಡಿದ ಸಾದನೆ ಏನು. ಯುಪಿಎ ಸರ್ಕಾರ ಇದ್ದಾಗ ದೇಶದ ಡಾಲಾರ್ ಬೇಲೆ 41% ಇತ್ತು. ಆದರೆ ಮೋದಿ ಬಂದಾದ ಮೇಲೆ ಅದು 71% ಗೆ ಬಂದು ನಿಂತಿದೆ. ಇವ್ಯಾವನ್ನು ಮಾದ್ಯಮಗಳು ಟೀಕಿಸುತ್ತಿಲ್ಲ.
ಅವು ಸುಖಾಸುಮ್ಮನೆ ಮೋದಿಯನ್ನು ಪ್ರಚಾರ ಮಾಡುತ್ತಿವೆ. ಉದ್ಯಮಿಗಳ ಪರವಾಗಿ ಕೆಲಸ ಮಾಡುವ ಮೋದಿಯನ್ನು ಈ ಬಾರಿ ರೈತರು, ಕಾರ್ಮಿಕರು ತಿರಸ್ಕಾರ ಮಾಡುವುದರ ಜೊತೆಗೆ ಜಿಲ್ಲೆಯ ಜನರು ಬಿಜೆಪಿಯನ್ನು ದೂರವಿಟ್ಟು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನಿಗೆ ಮತ ನೀಡಿ ಗೆಲ್ಲಿಸಿ ಕಳುಹಿಸಬೇಕು ಎಂದು ಸಂತೋಷ ಲಾಡ್ ಮಾಧ್ಯಮ ಮೂಲಕ ಮತದಾರರನ್ನು ವಿನಂತಿಸಿದರು. ಇದೆ 18ರಂದು ಕುರುಗೋಡುನಲ್ಲಿ ಆಯೋೀಜಿಸಿದ ಕಾಂಗ್ರೇಸ್ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬರಲಿದ್ದು ಈಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಮುಖಂಡರಾದ ಮಂಜುನಾಥ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ರಾಜುನಾಯ್ಕ್, ಜಿ.ಪಂ ಸದಸ್ಯ ಕೆ.ಶ್ರೀನಿವಾಸ್ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್ ಹನುಮಂತ, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಸದಸ್ಯರಾದ ರಾಜೇಶ್, ಎ. ರೇಣುಕಪ್ಪ, ಹಬೀಬ್ ರೆಹಮಾನ್, ಕೆ,ತಿಮ್ಮಯ್ಯ, ನಾಗೇಶ್ವರ ರಾವ್, ಗೋಪಾಲ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.