ಬೆಂಗಳೂರು
ಕರ್ನಾಟಕ ಪ್ರದೇಶ ಕುರುಬರ ಸಂಘದಲ್ಲಿ ಯಾವುದೇ ಬಣಗಳು ಹಾಗೂ ಬಿನ್ನಭಿಪ್ರಾಯಗಳಿಲ್ಲ. ಸಮಾಜದ ಏಳಿಗೆಗಾಗಿ ಆನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕುರುಬರ ಸಂಘದ ನೂತನ ಅಧ್ಯಕ್ಷ ಜಿ.ಕೃಷ್ಣ ತಿಳಿಸಿದ್ದಾರೆ.
ನಗರದ ಕುರುಬರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಉಪಾಧ್ಯಕ್ಷರು ಸಂಘಟನಾ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಸೇರಿದಂತೆ ಒಟ್ಟು ಮೂವತ್ತೈದು ಮಂದಿ ಪದಾಧಿಕಾರಿಗಳು ಚುನಾಯಿತರಾಗಿದ್ದೇವೆ. ತಮ್ಮ ಅಧಿಕಾರಾವಧಿ ಎರಡುವರೆ ವರ್ಷ ಇರಲಿದ್ದು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಎಲ್ಲ ನಾಯಕರ ಸಹಕಾರದೊಂದಿಗೆ ಸಮಾಜದ ಅಭಿವೃದ್ಧಿಗೊಸ್ಕರ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಕುರುಬ ಸಮಾಜದ ಆಸ್ತಿ, ಶಾಲೆ, ಕಾಲೇಜುಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ತೆರಳಿ ಸಂಘ ಕಾಳಜಿ ವಹಿಸಲಿದೆ. ನೂರ ಹದಿನೆಂಟು ನಿರ್ದೇಶಕರು ಅಭಿವೃದ್ಧಿ ದಿಕ್ಕಿನಲ್ಲಿ ಮುನ್ನಡೆಯಲಿದ್ದಾರೆ. ಸಮಾಜ ಒಕ್ಕೊರಲಿನಿಂದ ಕನಕ ರಾಯಣ್ಣರ ಸ್ಪೂರ್ತಿಯಿಂದ ಕೆಲಸ ಮಾಡಲಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ ಮಾತನಾಡಿ, ಚುನಾವಣೆ ನಡೆಯುವವರೆಗೂ ಯಾವುದೇ ಸಂಘದಲ್ಲಿ ಬಣಗಳು ಇರುವುದು ಸಹಜ. ಸಮಾಜ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಇನ್ನಷ್ಟು ಮುಂದುವರೆಯುವ ಆಗತ್ಯವಿದ್ದು, ಈಗ ನಾವು ಯಾವುದೇ ರೀತಿಯ ಗುಂಪುಗಾರಿಕೆ ನಡೆಸುವುದಿಲ್ಲ. ಸಮಾಜದ ಒಳಿತಿಗಾಗಿ ಒಳ್ಳೆಯ ಕೆಲಸ ಕಾರ್ಯಗಳಿಗೆ ಎಲ್ಲರ ಬೆಂಬಲ ಅಗತ್ಯವಿದೆ. ಸಮಾಜದ ಎಲ್ಲ ಹಿರಿಯ ರಾಜಕೀಯ ನಾಯಕರುಗಳ ಸಹಕಾರ ಅಗತ್ಯ ಎಂದು ಪ್ರತಿಪಾದಿಸಿದರು.
ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ನಾಲ್ಕು ಕುಲಗುರುಗಳನ್ನು ಒಳಗೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಂಸದ ಹೆಚ್. ವಿಶ್ವನಾಥ್, ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ ರೇವಣ್ಣ, ಎಂಟಿಬಿ ನಾಗರಾಜ್, ಸಚಿವರಾದ ಬೈರತಿ ಬಸವರಾಜ್,ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ವರ್ತೂರು ಪ್ರಕಾಶ್ ಇನ್ನಿತರ ನಾಯಕರ ಸಹಕಾರದೊಂದಿಗೆ ಸಮಾಜದ ಅಭ್ಯುದಯಕ್ಕೆ ಒತ್ತು ನೀಡಲಾಗುವುದು ಎಂದರು.
ಮಾಜಿ ಕಾರ್ಯಾಧ್ಯಕ್ಷ ಶಾಂತಪ್ಪ ಮಾತನಾಡಿ, ಸಿದ್ದರಾಮಯ್ಯ ಈಶ್ವರಪ್ಪ ಸೇರಿದಂತೆ ನಮ್ಮ ಸಮಾಜದ ಹಿರಿಯ ಮುಖಂಡರು ಕುರುಬ ಸಮಾಜ ಒಂದು ಪಕ್ಷಕ್ಕೆ ಸೀಮಿತಗೊಳ್ಳದೆ ಎಲ್ಲಾ ಪಕ್ಷದ ಸಮನ್ವಯತೆ ಕಾಪಾಡುವ ಕೆಲಸ ಮಾಡಲಿದೆ. ರಾಜ್ಯದಲ್ಲಿರುವ ಸಣ್ಣಪುಟ್ಟ ಸಮಾಜಗಳನ್ನು ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಲಿದೆ. ಕುರುಬ ಸಮಾಜ ಇನ್ನಿತರ ಸಣ್ಣ ಜಾತಿಗಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಕಾರ್ಯನಿರ್ವಹಿಸಲಿದೆ ಎಂದರು.
ನಿನ್ನೆ ನಡೆದ ಚುನಾವಣೆಯಲ್ಲಿ ಮಹಿಳಾ ಕೋಟದಾಡಿ ಹಿರಿಯ ಉಪಾಧ್ಯಕ್ಷರಾಗಿ ರೇಖಾ ಹುಲಿಯಪ್ಪಗೌಡ, ಎಂ.ವಿ.ರೇಖಾ ಪ್ರಿಯದರ್ಶಿನಿ, ಡಾ.ಸೌಮ್ಯ ಸಿ.ಆರ್. ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಶೋಭ ಎಂ, ಸಾವಿತ್ರಮ್ಮ ಆಯ್ಕೆಯಾಗಿದ್ದಾರೆ.ಈ ಸಂಧರ್ಭದಲ್ಲಿ ನೂತನ ಕಾರ್ಯಾಧ್ಯಕ್ಷರಾದ ಬಿ. ಸುಬ್ರಮಣ್ಯ, ಖಜಾಂಚಿ ದೇವರಾಜ ಸುಬ್ಬರಾಯಪ್ಪ, ಹಿರಿಯ ಉಪಾಧ್ಯಕ್ಷ ಕೃಷ್ಣಕುಮಾರ್, ಮಾಜಿ ಸಂಘದ ಕಾರ್ಯಧ್ಯಕ್ಷ ಕೆ.ಬಿ ಶಾಂತಪ್ಪ ಮುಖಂಡರಾದ ರಾಮಕೃಷ್ಣಪ್ಪ, ರಾಮಾಂಜಿ, ಕೃಷ್ಣಮೂರ್ತಿ ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








