ಬಳ್ಳಾರಿ
ಬಯೋತ್ಪಾದನೆ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದ್ದು ಕೇಂದ್ರ ಸರ್ಕಾರ ಕೈಗೊಳ್ಳುವ ಭಯೋತ್ಪಾದನೆಯ ಮೂಲೋತ್ಪಾಟನೆಗೆ ಭಾರತೀಯರೆಲ್ಲರೂ ಸಹಕರಿಸಬೇಕಿದೆ ಎಂದು ಬ್ರಾಹ್ಮಣ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಾ.ಬಿಕೆ ಸುಂದರ್ ಹೇಳಿದರು.
ಇಲ್ಲಿನ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದರು. 42 ಯೋಧರನ್ನು ಮತ್ತು ವಿವಿಧ ಉಗ್ರ ದಾಳಿಯಲ್ಲಿ ಹಲವು ಯೋಧರನ್ನು ಹತ್ಯೆಗೈದ ಉಗ್ರರ ದಮನ ಹಿಂದೆಂದಿಗಿಂತಲೂ ಈಗ ಅಗತ್ಯವಿದೆ.
ಕೇಂದ್ರ ಸರ್ಕಾರ ಆಪರೇಷನ್ ಆಲ್ ಔಟ್ ಹೆಸರಿನಲ್ಲಿ ಉಗ್ರರ ಸರ್ವನಾಶಕ್ಕೆ ಅಡಿ ಇಟ್ಟಿರುವುದನ್ನು ಶ್ಲಾಘಿಸಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರದ ಹೋರಾಟಕ್ಕೆ ಬೆಂಬಲಿಸೋಣ ಎಂದರು. ಅದೇರೀತಿ ಭಯೋತ್ಪಾದನೆಯ ಮೂಲೋತ್ಪಾಟನೆಗೆ ಬೇಕಾದ ಎಲ್ಲ ರೀತಿಯ ತ್ಯಾಗಕ್ಕೂ ದೇಶವಾಸಿಗಳು ಸಿದ್ಧರಾಗೋಣ ಎಂದ ಅವರು, ಉಗ್ರರ ದಾಳಿಗೆ ಸಿಲುಕಿ ಮಡಿದ ಹುತಾತ್ಮ ಯೋಧರ ಕುಟುಂಬಗಳಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು.
ಇದೇವೇಳೆ ಒಕ್ಕೂಟದ ಎಲ್ಲ ಸದಸ್ಯರು ಮೇಣದ ಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ನಡೆಸಿ, ಮೃತ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದರು.ಸಭೆಯಲ್ಲಿ ಹಿರಿಯ ವೈದ್ಯರಾದ ಡಾ.ಶ್ರೀಕಾಂತ್ ಗದ್ವಾಲಕರ್, ಹಿರಿಯ ವಕೀಲರಾದ ಸತ್ಯಮೂರ್ತಿ, ಸಿಕೆ ನಾಗರಾಜ್, ಡಾ.ಶ್ರೀನಿವಾಸ್, ಅನಿಲ್ ಕುಮಾರ್, ಜಯಸಿಂಹ, ವಿಜಯಲಕ್ಷ್ಮಿ, ನೇಮಕಲ್ ರಾವ್, ಸಿಮೆಂಟ್ ಗಿರಿ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ