ಬೆಂಗಳೂರು
ಕನ್ನಡಿಗರಾಗಿರುವ ನಾವು ಸದ್ಯದ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ನಾವು ಬ್ರಿಟಿಷ್ ಪ್ರಜೆ ಗಳಾಗಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಏರ್ಪಡಿಸಿದ್ದ, ಬಿ.ಪುಟ್ಟ ಸ್ವಾಮಯ್ಯ ಅವರ ಬದುಕು-ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ಇಂಗ್ಲೀಷ್ ಮೋಹ ನಮ್ಮನ್ನು ಮಾನಸಿಕವಾಗಿ ಬ್ರಿಟೀಷ್ ಪ್ರಜೆಗಳಾಗುವಂತೆ ಮಾಡಿದೆ ಎಂದರು.
ಮೆಕಾಲೆ ಅವರು ಶೈಕ್ಷಣಿಕ ಕ್ರಾಂತಿ ಹುಟ್ಟುಹಾಕಿದಲ್ಲದೆ, ದಲಿತರು ಸೇರಿದಂತೆ ಎಲ್ಲಾ ವರ್ಗಕ್ಕೂ ಸಮಾನ ಮತ್ತು ಗುಣ ಮಟ್ಟದ ಶಿಕ್ಷಣ ನೀಡಿದರು.ಆದರೆ, ಇದರಿಂದ ನಾವು ನಮ್ಮಲ್ಲಿನ ಆಸ್ಮಿತೆ ಮರೆತ್ತಿದ್ದು, ಇಂದಿಗೂ ಇಂಗ್ಲಿಷ್ ನಲ್ಲಿ ಮುಳುಗಿ ಕೊಂಡಿದ್ದೇವೆ ಎಂದು ನುಡಿದರು.
ಬಿ.ಪುಟ್ಟ ಸ್ವಾಮಯ್ಯ ಅವರನ್ನು ನಾವು ಮರೆಯುತ್ತಿದ್ದೇವೆ.ಒಂದು ಕಡೆಯಲ್ಲಿ ಅವರಿಗೆ ಸೂಕ್ತ ಪ್ರಸಿದ್ಧಿ ದೊರೆಯಲಿಲ್ಲ ಎನ್ನುವ ಅಭಿಪ್ರಾಯ ಬರುತ್ತದೆ.ಆದರೆ, ಅವರಿಗೆ ರಂಗಭೂಮಿ ಕುರಿತು ಅಪಾರ ಆಸಕ್ತಿ ಇತ್ತು. ಅಲ್ಲದೆ, ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ನಾಟಕ, ಪ್ರಮುಖ ಸಂವಹನ ಪಾತ್ರ ವಹಿಸಿತ್ತು.ಇನ್ನೂ, ನಾಟಕದಲ್ಲಿನ ರಾವಣ ದಾಟಿಯನ್ನ ಬ್ರಿಟಿಷರು ಎಂದು ಪುಟ್ಟಸ್ವಾಮಯ್ಯ ಬಿಂಬಿಸುತ್ತಿದ್ದರು ಎಂದು ಸ್ಮರಿಸಿದರು.
ವಿಚಾರ ಸಂಕಿರಣ
ಕನ್ನಡ ನಾಡಿನ ಬಹುಮುಖ ಪ್ರತಿಭೆ, ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಅವರ ಸಾಧನೆ, ರಂಗಭೂಮಿಗೆ ನೀಡಿರುವ ಸೇವೆ ಕುರಿತು ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯಬೇಕು. ಈ ನಿಟ್ಟಿನಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ವಿಚಾರಸಂಕಿರಣ ಏರ್ಪಡಿಸಿ ಎಂದು ವೇದಿಕೆಯಲ್ಲಿ ಹಾಜರಿದ್ದ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಕಾರ್ಯದರ್ಶಿ ಆರ್.ವೆಂಕರಾಜು ಅವರಿಗೆ ಕಂಬಾರರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಳಗೆ, ಸಂಗೀತ-ನಾಟಕ ಅಕಾಡೆಮಿಗಳಿವೆ.ಇದರ ವ್ಯಾಪ್ತಿ, ಕಾರ್ಯ ವೈಖರಿ ಹೆಚ್ಚಾಗಬೇಕು.ಅದೇರೀತಿ ಹಿರಿಯ ನಾಟಕ ರಾಜರಾದ ಮಾಸ್ಟರ್ ಹಿರಣ್ಣಯ್ಯ, ಗುಬ್ಬಿ ವೀರಣ್ಣ ಸೇರಿದಂತೆ ಪ್ರಮುಖರ ಪರಂಪರೆ ಅನ್ನು ಬೆಳೆಸಿಕೊಂಡು ಚರ್ಚಿಸಬೇಕು ಎಂದರು.
ಚಿರಪರಿಚಿತ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, ನಾಟಕ, ರಂಗಭೂಮಿ ಕ್ಷೇತ್ರದಲ್ಲಿ ಪುಟ್ಟಸ್ವಾಮಯ್ಯ ಅವರು ಚಿರಪರಿಚಿತರು.ಅವರ, ಪರಂಪರೆ ಉಳಿಸಿಕೊಳ್ಳಲು ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಅಧ್ಯಕ್ಷತೆವಹಸಿ ಮಾತನಾಡಿದ ಸಿನಿಮಾ ನಿರ್ದೇಶಕ ಟಿ.ಎಸ್.ನಾಗಾಭರಣ, ಮುಂದಿನ ಹತ್ತನೇ ದಿನಕ್ಕೆ ಪುಟ್ಟಸ್ವಾಮಯ್ಯ ಅವರಿಗೆ 122 ವರ್ಷ ತುಂಬಲಿದೆ. ಈ ಸಂದರ್ಭದಲ್ಲಿ ನಾವು ಅವರನ್ನು ಮರು ನಾಮಕರಣ ಮಾಡುವ ಜೊತೆಗೆ ಮರು ಚಿಂತನೆ ಹುಟ್ಟು ಹಾಕಬೇಕು ಎಂದು ತಿಳಿಸಿದರು.ವಿಚಾರ ಸಂಕಿರಣದಲ್ಲಿ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಎಲ್.ಎನ್.ಮುಕುಂದರಾಜ್,ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಕಾರ್ಯದರ್ಶಿ ಆರ್.ವೆಂಕರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.