ಮೋದಿ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಬೆಂಬಲ

ಹುಳಿಯಾರು:

      ಎರಡನೇ ನೇ ಹಂತದ ಕೃಷಿ ಸಮ್ಮಾನ್ ಯೋಜನೆಯ ಉದ್ಘಾಟನೆ ಆಗಮಿಸಲಿರುವ ಪ್ರಧಾನಿ ಮೋದಿಯ ರೈತ ವಿರೋಧಿ ಧೋರಣೆ ಖಂಡಿಸಿ ಕೋಡಿಹಳ್ಳಿ ಚಂದ್ರಶೇಖರ್ ನಿರ್ಧರಿಸಿರುವ ಕಪ್ಪು ಬಟ್ಟೆ ಪ್ರದರ್ಶನಕ್ಕೆ ನಮ್ಮ ಬಣದ ರೈತ ಸಂಘದಿಂದ ಬೆಂಬಲ ಸೂಚಿಸಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದರು.

     ಹುಳಿಯಾರಿನ ರಾಮಗೋಪಾಲ್ ಸರ್ಕಲ್ ಬಳಿಯ ರೈತ ಸಂಘದ ಕಛೇರಿಯಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಅವರು ಮೋದಿಯವರು ಭಾಷಣದಲ್ಲಿ ರೈತ ಪರವಾಗಿರುವುದಾಗಿ ಹೇಳುತ್ತಾರೆ. ಆದರೆ ಆಡಳಿತದಲ್ಲಿ ರೈತ ವಿರೋಧಿ ಧೋರಣೆ ತೆಗೆದುಕೊಳ್ಳುತ್ತಾರೆ. ಇದಕ್ಕೆ ರಾಜ್ಯದ ಮಹದಾಯಿ ಯೋಜನೆ, ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ, ರೈತರ ಸಾಲ ಮನ್ನ ವಿಚಾರ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮುಂತಾದವು ಸ್ಪಷ್ಟ ನಿದರ್ಶನವಾಗಿದೆ ಎಂದು ಹೇಳಿದರು.

     ಮೊದಲ ಹಂತದ ಕೃಷಿ ಸಮ್ಮಾನ್ ಯೋಜನೆಯು ನೂರಕ್ಕೆ ನೂರರಷ್ಟು ಜಾರಿಯಾಗಿಲ್ಲ. ಕೆಲವರಿಗೆ ಒಂದು ಕಂತಿನ 2 ಸಾವಿರ ರೂ. ಬಂದಿದ್ದರೆ ಕೆಲವರಿಗೆ ಮೂರು ಕಂತುಗಳ 6 ಸಾವಿರ ರೂ. ಬಂದಿದೆ. ಕೆಲವರಿಗೆ ಆನ್ ಲೈನ್‍ನಲ್ಲಿ ಹಣ ಹಾಕಿರುವುದಾಗಿ ಬಂದಿದ್ದರೂ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಆಗಿಲ್ಲ. ಹಾಗಾಗಿ ಮೊದಲ ಹಂತವನ್ನು ವ್ಯವಸ್ಥಿತವಾಗಿ ಜಾರಿ ಮಾಡದೆ 2 ನೇ ಹಂತಕ್ಕೆ ಚಾಲನೆ ನೀಡಲು ಹೊರಟಿರುವುದು ಪ್ರಚಾರದ ದೃಷ್ಢಿಯಿಂದ ವಿನಃ ರೈತರ ಕಾಳಜಿಯಿಂದಲ್ಲ ಎಂದರಲ್ಲದೆ ರೈತರ ಪರ ನೈಜ ಕಾಳಜಿಯಿದ್ದರೆ ಮೊದಲು ರೈತರ ಭೂ-ದಾಖಲೆಗಳನ್ನು ಸರಿಪಡಿಸಿ ಎಲ್ಲಾ ರೈತರಿಗೂ ಹಣ ತಲುಪುವ ವ್ಯವಸ್ಥೆ ಮಾಡಲಿ ಎಂದರು.

      ದೇಶದಲ್ಲಿ ರೈತರು ಮತ್ತು ಕಾರ್ಮಿಕರು ಅತೀ ಹೆಚ್ಚಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರನ್ನು ಬಿಟ್ಟು ಉದ್ದಿಮೆದಾರರ ಪರ ಇರುತ್ತವೆ. ಇದಕ್ಕೆ ರೈತರು ಮತ್ತು ಕಾರ್ಮಿಕರಲ್ಲಿ ಒಗ್ಗಟ್ಟು ಇಲ್ಲದಿರುವುದು ಮುಖ್ಯವಾಗಿದೆ. ರೈತರು ಒಗ್ಗಟ್ಟು ಆಗುವವರೆವಿಗೂ ರಾಜಕಾರಣಿಗಳು ರೈತರ ಪರ ನಿಲ್ಲುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕಿದೆ. ಹಾಗಾಗಿ ರೈತ ಸಂಘಟನೆಗಳೂ ರೈತರ ವಿಚಾರವಾಗಿ ಒಗ್ಗಟ್ಟಾಗಿವೆ ಎನ್ನುವ ಸಚಿದೇಶ ಕೊಡುವ ಸಲುವಾಗಿ ಕೋಡಿಹಳ್ಳಿ ಚಂದ್ರಶೇಖರ್ ಕರೆ ಕೊಟ್ಟಿರುವ ಮೋದಿ ವಿರುದ್ಧ ಪ್ರತಿಭಟನೆ ನಮ್ಮ ಸಂಘಟನೆಯಿಂದ ಬೆಂಬಲ ಸೂಚಿಸಿರುವುದಾಗಿ ಅವರು ತಿಳಿಸಿದರು.ಈ ಪತ್ರಿಕಾ ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ, ನೀರಾಈರಣ್ಣ, ಹೊನ್ನಪ್ಪ, ಶಿವಣ್ಣ, ಶ್ರೀನಿವಾಸ್, ಕರಿಯಪ್ಪ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link