ಷಟ್‍ಪಥ ಕಾಮಗಾರಿ ಮಾಡಲು ಬಿಡಲ್ಲ

ದಾವಣಗೆರೆ:

     ತಾಲೂಕಿನ ಲಕ್ಕಮುತ್ತೇನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಎಚ್.ಕಲ್ಪನಹಳ್ಳಿ ಹಾಗೂ ಆವರಗೆರೆ ಕ್ರಾಸ್ ಬಳಿ 12 ಮೀಟರ್ ಎತ್ತರದ ಕೆಳ ಸೇತುವೆ ನಿರ್ಮಿಸುವ ವರೆಗೂ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಷಟ್‍ಪಥ ಕಾಮಗಾರಿ ಮಾಡಲು ಬಿಡುವುದೇ ಇಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಪಟ್ಟು ಹಿಡಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಹೆದ್ದಾರಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನ ಹಾಗೂ ಜನರು ಸಂಚರಿಸಲು, ಒಟ್ಟು 11 ಕೆಳ ಸೇತುವೆ ನಿರ್ಮಿಸುವಂತೆ ಹೆದ್ದಾರಿ ಪ್ರಾಧಿಕಾರದಲ್ಲಿ ಕೋರಿಕೊಳ್ಳಲಾಗಿತ್ತು. ಆದರೆ, ಈ ಪೈಕಿ 7 ಕೆಳ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಇನ್ನುಳಿದ ನಾಲ್ಕು ಕೆಳ ಸೇತುವೆಗೆ ಮಂಜೂರಾತಿ ದೊರೆತಿಲ್ಲ. ಇವುಗಳನ್ನು ನಿರ್ಮಿಸುವ ವರೆಗೂ ಷಟ್‍ಪಥ ರಸ್ತೆ ಅಭಿವೃದ್ಧಿ ಕಾಮಗಾರಿಯೇ ಮಾಡಬೇಡಿ ಎಂದು ತಾಕೀತು ಮಾಡಿದರು.

     ಇದಕ್ಕೆ ಪ್ರತಿಕ್ರಯಿಸಿದ ಪ್ರಾಧಿಕಾರದ ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಈ ಕೆಳ ಸೇತುವೆಗಳನ್ನು ನಿರ್ಮಿಸಲು ಸರ್ಕಾರದ ಬಳಿ ಹಣದ ಕೊರತೆ ಇದೆ ಎನ್ನುತ್ತಿದ್ದಂತೆ, ಕೋಪಗೊಂಡ ಸಂಸದ ಸಿದ್ದೇಶ್ವರ ಹಣ ಇಲ್ಲದಿದ್ದರೆ, ನಾಲ್ಕು ಪಥದಲ್ಲಿದ್ದ ಹೆದ್ದಾರಿಯನ್ನು ಷಟ್‍ಪಥಕ್ಕೆ ಏಕೆ ಮೇಲ್ದರ್ಜೆಗೆ ಏರಿಸಬೇಕಿತ್ತು. ಸ್ಥಳೀಯರಿಗೆ ಅನುಕೂಲ ಇಲ್ಲದ ಮೇಲೆ ನಿಮ್ಮ ರಸ್ತೆ ಯಾರಿಗೆ ಬೇಕು? ನೀವು ಹೀಗೆ ಮಾಡಿದರೆ, ಜನ ನಿಮ್ಮನ್ನು ಹಿಡ್ಕೊಂದು ಒದಿತಾರೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

     ಮುಂದುವರೆದು ಮಾತನಾಡಿದ ಪ್ರಾಧಿಕಾರದ ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಬಂದು ನೀವು ಸೂಚಿಸಿದ್ದ 11 ಕಡೆಗಳಲ್ಲೂ ಸ್ಥಳ ಪರಿಶೀಲನೆ ನಡೆಸಿ, 2 ಕಿ.ಮೀ.ಗೆ ಒಂದರಂತೆ ಕೆಳ ಸೇತುವೆ ನಿರ್ಮಿಸಲು ನಿಯಮ ಇರುವುದರಿಂದ ಎರಡು ಕಿ.ಮೀ. ಒಳಗೆ ಬರುವ ಕೆಳ ಸೇತುವೆ ಪ್ರಸ್ತಾಪವನ್ನು ಕೈಬಿಟ್ಟಿದ್ದಾರೆ.

     ಎನ್ನುತ್ತಿದ್ದಂತೆ ಕೆಂಡಮಂಡಲವಾದ ಸಿದ್ದೇಶ್ವರ್, ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ದೆಹಲಿಯಿಂದ ಬಂದು ಸ್ಥಳೀಯ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ತಮಗಾಗಲೀ, ಶಾಸಕರಿಗಾಗಲೀ, ಜಿಲ್ಲಾಧಿಕಾರಿಗಳಿಗಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಮಾಹಿತಿ ನೀಡಿದ್ದರೆ ಅವರಿಗೆ ಕೆಳ ಸೇತುವೆಯ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿತ್ತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿಮಗೆ ಬೇಕಾದಾಗ ಬೇಕಾದ ರೀತಿಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದೀರಿ. ನೀವೇ ರಾಜರೇನು? ಎಂದು ಖಾರವಾಗಿ ಪ್ರಶ್ನಿಸಿದರು.

     ಹೆದ್ದಾರಿ ಪ್ರಾಧಿಕಾರ ಷಟ್‍ಪತ ಕಾಮಗಾರಿ ಮುಂದುವರೆಸಬೇಕಾದರೆ, ಇನ್ನೊಮ್ಮೆ ಈ ನಾಲ್ಕು ಕೆಲ ಸೇತುವೆ ಅವಶ್ಯಕತೆಯ ಬಗ್ಗೆ ರೈಲ್ವೆ ಕೇಂದ್ರ ಸಚಿವರಿಗೆ ಪತ್ರ ಬರೆಯಿರಿ, ನಾನು ಮಾತನಾಡಿ ಮಾಡಿಸಿಕೊಂಡು ಬರುತ್ತೇನೆ ಎಂದು ಸಿದ್ದೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.ಬಾಡ ಹಾಗೂ ಸಿರಿಗೆರೆ ಕ್ರಾಸ್‍ಗಳು ಮತ್ತು ಹರಿಹರದ ಬಳಿಯ ಅಂಡರ್‍ಪಾಸ್ ಸೇರಿದಂತೆ ಹಲವೆಡೆ ಮಳೆ ನೀರು ನಿಂತು, ಸಾಕಷ್ಟು ರಸ್ತೆ ಅಪಘಾತ ಸಂಭವಿಸುತ್ತಿವೆ. ಹೀಗಾಗಿ ಜನರು ನಮ್ಮನ್ನು ಶಪಿಸುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

      ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಶಿರಮಗೊಂನಡಹಳ್ಳಿ ಬಳಿ ಹೆದ್ದಾರಿ ನಿರ್ಮಿಸುವಾಗ ಆಂಜನೇಯ ಹಾಗೂ ವಿನಾಯಕ ದೇವಸ್ಥಾನಗಳು ಮತ್ತು ಅಂಗನವಾಡಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದ್ದರಿಂದ ಹೆದ್ದಾರಿ ಪ್ರಾಧಿಕಾರದವರೇ ಇವುಗಳನ್ನು ನಿರ್ಮಿಸಿಕೊಡಬೇಕೆಂದು ಸಲಹೆ ನೀಡಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು, ಪ್ರಾಧಿಕಾರದ ವತಿಯಿಂದ ಹಣ ಮಾತ್ರ ಕೊಡಿಸಲಾಗುವುದು. ನಾವೇ ಕಟ್ಟಡ ನಿರ್ಮಿಸಿಕೊಡಲು ಅವಕಾಶವಿಲ್ಲ ಎಂದರು.ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾಡಳಿತಕ್ಕೆ ಹಣ ನೀಡಿದಲ್ಲಿ ಪರ್ಯಾಯವಾಗಿ ದೇವಸ್ಥಾನ ಹಾಗೂ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದು ಎಂದು

    ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದಾವಣಗೆರೆ ನಗರದಲ್ಲಿ 10 ಲಕ್ಷದಷ್ಟು ಜನಸಂಖ್ಯೆ ಇದೆ. ಸ್ಮಾರ್ಟ್ ಸಿಟಿ ಆಗಿದೆ. ಆದರೆ, ರಾಣೇಬೆನ್ನೂರು ಹಾಗೂ ಹಾವೇರಿಗಳಿಗೆ ಇರುವ ರೀತಿಯ ಹೆದ್ದಾರಿ ಪ್ರವೇಶ ದಾವಗೆರೆಗೆ ಏಕೆ ಸಿಕ್ಕಿಲ್ಲ? ಎಂದು ಪ್ರಶ್ನಿಸಿದರು.

    ಇದಕ್ಕೆ ಉತ್ತರಿಸಿದ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು, ಹೆದ್ದಾರಿ ಯೋಜನೆ ರೂಪಿಸುವಾಗ ಆ ಎರಡು ನಗರಗಳಿಗೆ ಪ್ರವೇಶದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ದಾವಣಗೆರೆಯಲ್ಲಿ ಆ ಪ್ರಸ್ತಾವನೆ ಇರಲಿಲ್ಲ ಎಂದು ಹೇಳಿದರು.
ಇದರಿಂದ ಸಿಡಿಮಿಡಿಗೊಂಡ ಸಿದ್ದೇಶ್ವರ, ಯೋಜನೆ ರೂಪಿಸುವುದು ನೀವೋ, ನಾವೋ ಪ್ರವೇಶ ಕಲ್ಪಿಸದಿದ್ದರೆ ಒಪ್ಪುವುದಿಲ್ಲ. ಈಗಲಾದರೂ ಭವ್ಯ ಪ್ರವೇಶ ದೊರೆಯುವಂತೆ ಮಾಡಿ ಎಂದರು.

     ಸರ್ವೀಸ್ ರಸ್ತೆಯಲ್ಲಿರುವ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು ಸಿಂಗಲ್ ಪೋಲ್ ವಿದ್ಯುತ್ ಮಾರ್ಗವಾಗಿ ಬದಲಿಸುವುದು ವಿಳಂಬವಾಗುತ್ತಿರುವುದು ಸರಿಯಲ್ಲ ಎನ್ನುತ್ತಿದ್ದಂತೆ, ಪ್ರಾಧಿಕಾರದ ಅಧಿಕಾರಿಗಳು ಭೂಸ್ವಾಧೀನ ವಿಳಂಬದ ಕಾರಣ ಈ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದರು.

     ಆಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೂಸ್ವಾಧೀನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಇನ್ನೂ ಎರಡು ತಿಂಗಳಲ್ಲಿ ಭೂಸ್ವಾಧೀನ ಪಡಿಸಿಕೊಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ತಹಶೀಲ್ದಾರ್ ಸಂತೋಷಕುಮಾರ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link