ದಾವಣಗೆರೆ
ಬೇರೆಯವರ ವರ್ಚಸ್ಸಿನ ಮೇಲೆಯೇ ಮೂರು ಬಾರಿ ಗೆದ್ದಿರುವ ಸಂಸದ ಜಿ.ಎಂ.ಸಿದ್ದೇಶ್ವರರ ಸ್ವಂತ ಸಾಧನೆ ಏನು? ಹಾಗೂ ಅವರು ಜಿಲ್ಲೆಗೆ ವೈಯಕ್ತಿಕ ಕೊಡುಗೆ ಏನು ನೀಡಿದ್ದಾರೆಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ.ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆ ಅನುಕಂಪದ ಆಧಾರದ ಮೇಲೆ, ಇನ್ನೊಮ್ಮೆ ಸ್ವಾಮೀಜಿಗಳ ಆಶೀರ್ವಾದಿಂದ ಹಾಗೂ ಮಗದೊಮ್ಮೆ ಮೋದಿ ಅಲೆಯಿಂದ ಗೆದ್ದಿರುವ ಜಿ.ಎಂ.ಸಿದ್ದೇಶ್ವರ್‍ರ ಕೊಡುಗೆ ಈ ಜಿಲ್ಲೆಗೆ ಏನಿದೆ ಎಂದು ಪ್ರಶ್ನಿಸಿದರು.
ಸ್ಥಳೀಯರಲ್ಲಿ ಗಂಡಸರಿಲ್ಲವೇ?:
ನಮ್ಮ ಜನರಿಗೂ ಸಹ ಬುದ್ಧಿ ಇಲ್ಲ. ಬೇರೆ ಕ್ಷೇತ್ರದವರನ್ನು ಕರೆ ತಂದು ಇಲ್ಲಿ ನಿಲ್ಲಿಸುತ್ತಿದ್ದಾರೆ. ನಮ್ಮ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸ್ಥಳೀಯ ಬಿಜೆಪಿಯಲ್ಲಿ ಗಂಡಸು ಯಾರೂ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಸಿದ್ದೇಶ್ವರ್ ಮೋದಿ ಹೆಸರನ್ನೇ ಹೇಳಿಕೊಂಡು ತಿರಗಬೇಕಷ್ಟೇ? ವೈಯಕ್ತಿಕ ಸಾಧನೆ, ಕೊಡುಗೆ ಝೀರೋ ಅಷ್ಟೇ ಎಂದರು.
ನಾಯಿಯೂ ಮೂಸಲ್ಲ:
ನಾನು ಒಂದೇವೊಂದು ಬಾರಿ ಕೇಕೆ ಹಾಕಿದರೆ ಸಾಕು, ಸಾವಿರಾರು ಕಾರ್ಯಕರ್ತರು, ಜನರು ಅಭಿಮಾನದಿಂದ ಬರುತ್ತಾರೆ. ಸಿದ್ದೇಶ್ವರ್ ಕೇಕೆ ಹೊಡೆಯಲಿ ನೋಡೋಣ. ಎಷ್ಟು ಜನ ಸೇರುತ್ತಾರೆಂಬುದನ್ನು, ಅವರನ್ನು ನಾಯಿಯೂ ಮೂಸಿ ನೋಡಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಫಂಥಾಹ್ವಾನ:
ವೈಯಕ್ತಿಕವಾಗಿ ನನ್ನ ಬಗ್ಗೆ ಮಾತನಾಡುವವನು ಗಾಂಧಿ ಸರ್ಕಲ್‍ಗೋ ಅಥವಾ ಹೈಸ್ಕೂಲ್ ಮೈದಾನಕ್ಕೋ ಬರಲಿ ನೋಡೋಣ? ನಾನು ಬರುತ್ತೇನೆ. ಮಾತನಾಡಿದವರೂ ಬರಲಿ. ನನ್ನೆದುರು ಬಂದು ಮಾತನಾಡಲಿ, 1998ರಿಂದ ಈವರೆಗಿನ ನಾವು ಮಾಡಿರುವ ಅಭಿವೃದ್ಧಿ ಪಟ್ಟಿ ಸಮೇತ ಮಾಹಿತಿ ನೀಡುತ್ತೇವೆ. ಸಿದ್ದೇಶ್ವರ ಸಹ ಬರಲಿ. ವೈಯಕ್ತಿಕ ಕೆಲಸ ಯಾರು ಮಾಡಿಕೊಂಡಿದ್ದಾರೆ. ಯಾರು ಮಾಡಿಕೊಂಡಿಲ್ಲವೆಂಬುದು ಗೊತ್ತಾಗಲಿ ಎಂದು ಅವರು ಸವಾಲು ಎಸೆದರು.
ಬಿಜೆಪಿಯವರು ವೈಯಕ್ತಿಕವಾಗಿ ಮಾತನಾಡಿದರೆ ನಾವೂ ಮಾತನಾಡಬೇಕಾಗುತ್ತದೆ. ನನ್ನ ವೈಯಕ್ತಿಕ ಬ್ಯಾಲೆನ್ಸ್ ಶೀಟ್ ತೆಗೆಯಲಿ, ಸಿದ್ದೇಶ್ವರ ಬ್ಯಾಲೆನ್ಸ್ ಶೀಟ್ ತೆಗೆಯಲಿ. ಆಗ ಸಿದ್ದೇಶ್ವರ ಆಸ್ತಿ ಎಷ್ಟಿತ್ತು? ಯಾವ ಮೈನ್ಸ್ ನಲ್ಲಿ ಎಷ್ಟು ಇತ್ತು? ಅಡಿಕೆ, ಗುಟ್ಕಾ ವ್ಯವಹಾರ, ನಂಬರ್ 2 ವ್ಯವಹಾರದ್ದೂ ಲೆಕ್ಕ ಕೊಡಲಿ. ಇಬ್ಬರ ಮನೆ ಕಚೇರಿ ಮೇಲೂ ಐಟಿ ದಾಳಿಯಾಗಿದೆ. ಅವನದೂ ಕೊಡಲಿ, ನನ್ನದೂ ಕೊಡ್ತೀನಿ. ನಮ್ಮಿಬ್ಬರ ವಿಚಾರದಲ್ಲಿ ಅಣ್ಣ-ತಮ್ಮಗಳ ಮೇಲೆ, ಕುಟುಂಬದವರ ಮೇಲೆ ಹಾಕುವುದು ಬೇಡ ಎಂದರು.
ಯಾವ ಅನುದಾನ ತಂದಿಲ್ಲ:
ದಾವಣಗೆರೆ ಅಭಿವೃದ್ಧಿಗೆ ಸಿದ್ದೇಶ್ವರ ಯಾವ ಅನುದಾನವನ್ನೂ ತಂದಿಲ್ಲ. ಸ್ಮಾರ್ಟ್ ಸಿಟಿ ಅಂತಾರಲ್ಲ. ಆ ಯೋಜನೆಗೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಷ್ಟ್ರಮಟ್ಟದಲ್ಲಿ ಸ್ಮಾರ್ಟ್ ಸಿಟಿಗಳ ಪೈಕಿ 9ನೇ ಸ್ಥಾನದಲ್ಲಿ ನಮ್ಮ ಊರು ಬರುವುದಕ್ಕೆ ಕಾಂಗ್ರೆಸ್ ಕಾರಣವೆಂಬುದನ್ನು ಮರೆಯಬಾರದು ಎಂದರು.
ಅಡಿಕೆ ಲೆಕ್ಕ ಬರೆದಂಗಲ್ಲ:
ಅಡಿಕೆ ಅಂಗಡಿ ಲೆಕ್ಕ ಬರೆದಂಗಲ್ಲ, ಚಾಕಿ ಮಾಡಿದಂತೆ, ಲೆಕ್ಕ ಮಾಡಿದಂಗೆ ಅಲ್ಲ, ಗುಟ್ಕಾ ವ್ಯವಹಾರ, ದೋ ನಂಬರ್ ವ್ಯವಹಾರ ಮಾಡಿದಂತಲ್ಲ ಅಭಿವೃದ್ದಿ ಕೆಲಸವೆಂದರೆ, ಸ್ಮಾರ್ಟ್ ಸಿಟಿಯಡಿ ಊರಿನ ವರಮಾನ ಹೇಗಿವೆ? ಬ್ಯಾಲೆನ್ಸ್ ಶೀಟ್ ಪ್ರಕಾರ ಯಾವ ಪಾಲಿಕೆ ವರಮಾನ ಹೆಚ್ಚಾಗಿದೆಯೆಂಬುದನ್ನೆಲ್ಲಾ ಗುರುತಿಸಿ, ಅಭಿವೃದ್ಧಿ ಆಗಿವೆ ಅಂತಾ ಗುರುತಿಸಿ ದಾವಣಗೆರೆಗೆ ರಾಷ್ಟ್ರ ಮಟ್ಟದಲ್ಲಿ 9ನೇ ಸ್ಥಾನ ನೀಡಲಾಗಿದೆ. ಆ ನಂತರ ಯಾವುದೇ ಸ್ಮಾರ್ಟ್ ಸಿಟಿಗಳೂ ದಾವಣಗೆರೆಯಷ್ಟು ತ್ವರಿತವಾಗಿ ಇಷ್ಟೊಂದು ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆಗೆ 10 ಸಾವಿರ ಕೋಟಿ ಅನುದಾನ ತಂದಿದ್ದೇನೆಂಬ ಸಿದ್ದೇಶ್ವರ್ ಅದರಲ್ಲಿ ಏನು ಕೆಲಸ ಮಾಡಿದ್ದಾರೆಂಬುದನ್ನು ಸ್ಪಷ್ಟಪಡಿಸಲಿ. ಎಲ್ಲೆಲ್ಲಿಂದ ಎಷ್ಟು ಅನುದಾನ ಬಂದಿದೆ? ಎಂಬುದರ ಮಾಹಿತಿ ನೀಡಲಿ ಎಂದ ಅವರು, ದಾವಣಗೆರೆ ತುಂಬಾ ನಮ್ಮ ಹೆಸರನ್ನೇ ಇಟ್ಟುಕೊಂಡಿದ್ದೇವೆಂದು ಯಶವಂತರಾವ್ ಹೇಳಿದ್ದಾನೆ. ಸಾರಾಯಿ ಮಾರೋರೆಲ್ಲಾ ಬಂದ್ರೆ ಹೀಗೇ ಆಗೋದು. ಅವನು ಇನ್ನೊಬ್ಬ ನಾಗರಾಜಗೆ ರಾಜಕೀಯದ ಗಂಧವೇ ಗೊತ್ತಿಲ್ಲ. ಹಿಂದೆ ದಿವಂಗತ ಎಚ್.ಶಿವಪ್ಪ ಒಳ್ಳೆಯ ಹೆಸರು ಮಾಡಿದ್ದರು. ಶಿವಪ್ಪನವರ ಮೇಲಿನ ಅಭಿಮಾನದಿಂದ ಹೋಗಲಿ ಅಂತಾ ಸುಮ್ಮನಿದ್ದೆವು. ವೈಯಕ್ತಿಕವಾಗಿ ಬಂದರೆ ನಾನೂ ಬರುತ್ತೇನೆ. ಅವ್ರೂ ಬರಲಿ. ಏನೈತೋ ನಿಂತ್ಕೊಂಡು ನೋಡೇ ಬಿಡೋಣ ಎಂದು ಸವಾಲು ಹಾಕಿದರು.
ಶಿವಮೊಗ್ಗದ ಆಯನೂರು ಮಂಜುನಾಥ ಎಲ್ಲಾ ಪಕ್ಷಗಳಿಗೂ ಹೋಗಿ ಈಗ ಬಿಜೆಪಿಗೆ ವಾಪಾಸ್ಸು ಬಂದಿದ್ದಾನೆ. ಅವನಿಗೇನು ಗೊತ್ತು ದಾವಣಗೆರೆ ವಿಚಾರ ಎಂದು ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.