ರಸ್ತೆ ಯಾವುದಯ್ಯಾ… ಈ ಬಡಾವಣೆಗೆ ಹೋಗಲು..?

ತುಮಕೂರು

    ಈ ಭಾಗದಲ್ಲಿ ವಾಸಿಸುತ್ತಿರುವ ಬಹುತೇಕರು ಎಚ್‍ಎಂಟಿ ನಿವೃತ್ತ ಉದ್ಯೋಗಿಗಳು. ಒಂದು ಕಾಲದಲ್ಲಿ ಈ ಬಡಾವಣೆಗೆ ಹೋಗಿ ಮನೆ ಕಟ್ಟಿಕೊಳ್ಳಲು ಹೆದರುತ್ತಿದ್ದ ಕಾಲವಿತ್ತು. ದಿನೆ ದಿನೆ ಬಡಾವಣೆ ಬೆಳೆದು ದೊಡ್ಡದಾಗಿದೆ. ಆದರೆ ಅಷ್ಟೇ ಸಮಸ್ಯೆಗಳು ತಾಂಡವವಾಡುತ್ತಿದೆ.

     ನಗರದ 32ನೇ ವಾರ್ಡ್ ಗೋಕುಲ ಬಡಾವಣೆಯಲ್ಲಿ ಒಮ್ಮೆ ಸುತ್ತಿ ಬಂದರೆ ಕಳೆದ 10-15 ವರ್ಷಗಳಲ್ಲಿ ಎಷ್ಟೆಲ್ಲ ಮನೆಗಳು ನಿರ್ಮಾಣಗೊಂಡಿವೆ? ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಎಂಬುದು ತಿಳಿಯುತ್ತದೆ. ಬಹುತೇಕ ಈ ಭಾಗದ ರಸ್ತೆಗಳು ಕಚ್ಛಾ ರಸ್ತೆಗಳಾಗಿವೆ. ಇತ್ತೀಚೆಗಷ್ಟೆ ಡಾಂಬರೀಕರಣ ಕಾಣುತ್ತಿವೆ. ಇನ್ನೂ ಕೆಲವು ಜಲ್ಲಿ ರಸ್ತೆಗಳಾಗಿಯೇ ಉಳಿದಿವೆ.

      ಬಡಾವಣೆಯಲ್ಲಿ ಹಲವು ಪಾರ್ಕ್‍ಗಳು ಉತ್ತಮ ಸ್ಥಿತಿಯಲ್ಲಿದ್ದು, ಮತ್ತೆ ಕೆಲವು ಅವನತಿಯ ಅಂಚಿನಲ್ಲಿವೆ. ಖಾಲಿ ಜಾಗದ ಪ್ರದೇಶದಲ್ಲಿ ಗಿಡಗೆಂಟೆಗಳು ಬೆಳೆದಿದ್ದು, ಅಲ್ಲೆಲ್ಲ ಹಂದಿ, ನಾಯಿಗಳು ಸೇರಿಕೊಳ್ಳುತ್ತಿವೆ. ಕೆಲವು ಕಡೆ ಮಕ್ಕಳು ಓಡಾಡಲು ಭಯದ ವಾತಾವರಣವೂ ಇದೆ. ನಾಯಿಗಳು ಕಚ್ಚಿರುವ ಉದಾಹರಣೆ ಜೊತೆಗೆ ಹಂದಿಗಳ ಹಾವಳಿ ಕೆಲವರ ನಿದ್ರೆಗೆಡಿಸಿದೆ.

     ಇಲ್ಲಿನ ನಾಗರಿಕ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಕೆಲವು ಉದ್ಯಾನವನಗಳು ಅಭಿವೃದ್ಧಿ ಕಂಡಿವೆ. ಜಿ.ಎಸ್.ಶಿವರುದ್ರಪ್ಪ ಉದ್ಯಾನವನ ಸೇರಿದಂತೆ ಇನ್ನೂ ಕೆಲವು ಪಾರ್ಕ್‍ಗಳು ಸುಸ್ಥಿತಿಯಲ್ಲಿವೆ. ಇತ್ತೀಚೆಗೆ ಕೆಲವು ಪಾರ್ಕ್‍ಗಳನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಂದುಕೊಂಡಂತೆ ಎಲ್ಲವೂ ಪಾರದರ್ಶಕವಾಗಿ ನಡೆದರೆ ಈ ಬಡಾವಣೆ ಹಲವು ಇಲ್ಲವುಗಳಿಂದ ಮುಕ್ತವಾಗುತ್ತದೆ. ಉತ್ತಮ ಬಡಾವಣೆಯಾಗಿ ರೂಪುಗೊಳ್ಳುತ್ತದೆ. ಹೀಗೆ ಈ ಬಡಾವಣೆ ಒಂದು ಮಾದರಿ ಬಡಾವಣೆಯಾಗಲಿ ಎಂಬುದು ಆ ಭಾಗದ ಹಲವರು ಕನಸು.

       ಇದೇ ಬಡಾವಣೆಯಲ್ಲಿ ಗೂಬೆಹಳ್ಳ ಪಾರ್ಕ್ ಇದೆ. ನಗರ ಪಾಲಿಕೆ ಲೆಕ್ಕಾಚಾರದ ಪ್ರಕಾರ ಇದು 2 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ದಿನ ಕಳೆದಂತೆ ಒತ್ತುವರಿಯಾಗಿ ಈ ಪಾರ್ಕ್ ಒಂದು ಉದ್ಯಾನವನದ ಅರ್ಥವನ್ನೇ ಕಳೆದುಕೊಂಡಿದೆ. ಇದರ ಸಂರಕ್ಷಣೆಗೆ ನಾಗರಿಕರು ಏಕೆ ಮುಂದಾಗಿಲ್ಲ ಎಂಬುದೆ ಯಕ್ಷಪ್ರಶ್ನೆಯಾಗಿದೆ. ಹಾಳು ಉದ್ಯಾನವನದಂತೆ ಕಂಡು ಬರುವ ವಿಶಾಲವಾದ ಜಾಗದಲ್ಲಿ ಅಲ್ಲಲ್ಲಿ ಮರಗಿಡಗಳಿವೆ. ಇಲ್ಲೆಲ್ಲ ಹಂದಿಗಳು ಸೇರಿಕೊಳ್ಳುತ್ತಿವೆ. ಕುಡುಕರ ಹಾವಳಿಯೂ ಹೆಚ್ಚಿದೆ. ರಾತ್ರಿ ವೇಳೆ ಈ ಪಾರ್ಕ್‍ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವ ವ್ಯಾಪಕ ದೂರುಗಳಿವೆ. ಈ ದೂರು ನಗರ ಪಾಲಿಕೆವರೆಗೂ ವ್ಯಾಪಿಸಿದೆ.

       ಜೂನ್ 18 ರಂದು ಪರಿಸರ ದಿನಾಚರಣೆ ಅಂಗವಾಗಿ ಕನಕಾಂಬರ ರಸ್ತೆ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ವೊಂದರಲ್ಲಿ ಆಯುಕ್ತರೆ ಈ ಮಾತುಗಳನ್ನಾಡಿದ್ದಾರೆ. ಎಲ್ಲವನ್ನೂ ಮಹಾನಗರ ಪಾಲಿಕೆಯೆ ಮಾಡಲು ಸಾಧ್ಯವಿಲ್ಲ, ಇದರ ಸಂರಕ್ಷಣೆಗೆ ಜನರೂ ಮುಂದಾಗಬೇಕು ಎಂಬುದನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ಪಾರ್ಕ್‍ನಲ್ಲಿ ಟ್ರೀ ಪಾರ್ಕ್, ಮಕ್ಕಳ ಆಟದ ಮೈದಾನ, ಜಿಮ್, ಪಾಂಡ್ ನಿರ್ಮಾಣ ಮಾಡುವ ಯೋಜನೆಯನ್ನು ವ್ಯಕ್ತಪಡಿಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಇದೊಂದು ಅತ್ಯಾಕರ್ಷಕ ಉದ್ಯಾನವನವಾಗಿ ರೂಪುಗೊಳ್ಳಲಿದೆ.

      ಗೋಕುಲ ಬಡಾವಣೆ ಹಾಗೂ ಮಂಜುನಾಥನಗರಕ್ಕೆ ಹೊಂದಿಕೊಂಡಂತೆ ಇರುವ ಬಹಳಷ್ಟು ಜನರ ಸಮಸ್ಯೆ ಏನೆಂದರೆ, ಈ ಭಾಗದಲ್ಲಿ ಉತ್ತಮ, ಸುವ್ಯವಸ್ಥಿತ ರಸ್ತೆ ವ್ಯವಸ್ಥೆ ಇಲ್ಲದಿರುವುದು. ಅಗ್ನಿಶಾಮಕ ಠಾಣೆಯ ಬದಿಯಿಂದ ಬರುವ ರಸ್ತೆ ಮೂಲಕ ರೈಲು ಹಳಿ ದಾಟಿ ಗೋಕುಲ ಬಡಾವಣೆಗೆ ಪ್ರವೇಶಿಸಬೇಕು. ಇಲ್ಲಿಯೂ ಸಹ ರಸ್ತೆ ಅತಿಕ್ರಮಣವಾಗಿರುವ ಆರೋಪಗಳಿವೆ.

      ರೈಲ್ವೆ ಹಳಿ ದಾಟಿ ಬಲ ಭಾಗಕ್ಕೆ ತಿರುಗಿದರೆ 60 ಅಡಿ ರಸ್ತೆ ಇದೆ. ಈ ರಸ್ತೆ ಉಪ್ಪಾರಹಳ್ಳಿ ರಸ್ತೆಯನ್ನು ಸಂಪರ್ಕಿಸಿ ಭದ್ರಮ್ಮ ವೃತ್ತದ ಮೂಲಕ ಸಂಪರ್ಕ ಕಲ್ಪಿಸುವ ಮಾರ್ಗ. ಆದರೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದು, ಈ ರಸ್ತೆಯನ್ನು ಒಂದು ಉತ್ತಮ ರಸ್ತೆಯನ್ನಾಗಿಸುವ ಕನಸು, ಕನಸಾಗಿಯೇ ಉಳಿದಿದೆ. ಗೋಕುಲ ಬಡಾವಣೆಯಿಂದ ಆರಂಭವಾಗಿ ಮಾರುತಿನಗರದ ಮೂಲಕ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಆಳವಾಗಿ ಯೋಚಿಸಿ ನಿರ್ಧಾರ ಕೈಗೊಂಡರೆ ಬಹಳ ಜನರಿಗೆ ಉಪಯುಕ್ತವಾಗುವ ರಸ್ತೆಯಾಗಿ ಮಾರ್ಪಡುತ್ತದೆ.

       ಗೋಕುಲ ರೈಲ್ವೆ ಗೇಟ್‍ನಿಂದ ಎಡ ಭಾಗಕ್ಕೆ ತಿರುಗಿದರೆ ಕ್ಯಾತ್ಸಂದ್ರ ಕಡೆಗೆ ಹೋಗುವ 40 ಅಡಿ ಸರ್ವೀಸ್ ರಸ್ತೆ ಇದೆ. ಚಿಕ್ಕದಾದ ಈ ರಸ್ತೆ ಈಗ ಹೆಚ್ಚು ಬಳಕೆಯಾಗುತ್ತಿದೆ. ಆ ಭಾಗದಲ್ಲಿ ಬರುವ ಸಣ್ಣಪುಟ್ಟ ವಾಹನಗಳಿಂದ ಹಿಡಿದು ದೊಡ್ಡ ವಾಹನಗಳೆಲ್ಲವೂ ಈ ರಸ್ತೆಯಲ್ಲಿಯೇ ಸಾಗಿ ಶ್ರೀನಗರ ಫ್ಲೈ ಓವರ್ ಮೂಲಕ ಹಾದು ಹೋಗುತ್ತವೆ. ಹೀಗಾಗಿ ರಸ್ತೆಯೂ ಅವ್ಯವಸ್ಥೆಯಿಂದ ಕೂಡಿದ್ದು, ಗುಂಡಿ ಗುದ್ದರಗಳು ಕಾಣಿಸುತ್ತವೆ. ಈ ರಸ್ತೆ ಅಭಿವೃದ್ಧಿಪಡಿಸಬೇಕಿದೆ. ಇಲ್ಲಿ ಹೋಗುವಾಗ ಹಾಗೂ ಇಲ್ಲಿ ವಾಸಿಸುವ ನಿವಾಸಿಗಳಿಗೆ ಹಂದಿ, ನಾಯಿಗಳ ಉಪಟಳ ಹೆಚ್ಚು.

       ನಗರದಲ್ಲಿ ಹಂದಿ ಹಾವಳಿ ತಡೆಗಟ್ಟಲು ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದ 40 ಎಕರೆ ಜಾಗದಲ್ಲಿ ಹಂದಿ ಮೇಯಿಸಲು ನಾಲ್ಕು ಎಕರೆ ಜಾಗ ನೀಡಲು ನಗರ ಪಾಲಿಕೆ ಈಗಾಗಲೆ ಒಪ್ಪಿಗೆ ನೀಡಿದೆ. ಈ ಸಂಬಂಧ ಹಂದಿ ಸಾಕಾಣಿಕೆದಾರರ ಜೊತೆ ಒಂದು ಸುತ್ತಿನ ಸಭೆಯೂ ನಡೆದಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆದರೆ ಹಂದಿ ಸಾಕಾಣಿಕೆ ಅಜ್ಜಗೊಂಡನಹಳ್ಳಿಗೆ ಸ್ಥಳಾಂತರಗೊಂಡರೆ ಗೋಕುಲ ಬಡಾವಣೆ ಮಾತ್ರವಲ್ಲ, ಇಡೀ ನಗರ ಹಂದಿಗಳ ಅನೈರ್ಮಲ್ಯದಿಂದ ಮುಕ್ತವಾಗಬಹುದು ಎಂಬ ಅನಿಸಿಕೆ ಹಲವರದ್ದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link