ಹರಪನಹಳ್ಳಿ
ಸರ್ಕಾರ ಜಯಂತಿಗಳನ್ನು ಆಚರಿಸುತ್ತಿರುವುದು ಕಾಟಚಾರಕ್ಕಾ ಪೂರ್ವಭಾವಿ ಸಭೆಗೂ ಹಾಜರಾಗದ ತಾಲ್ಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ ಹೆಚ್ಚಾಗುತ್ತಿರುವುದುಕ್ಕೆ ಯಾರು ಹೊಣೆ ? ಜವಾಬ್ದಾರಿ ಯಾರಿಗಿದೆ ? ಎಂದು ಅಧಿಕಾರಿಗಳ ಕುರಿತು ಕುರಬ ಸಮಾಜದ ಅಧ್ಯಕ್ಷ ವೈ.ಕೆ.ಬಿ.ದುರುಗಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಹಶೀಲ್ದಾರ ಡಾ.ಮಧು ಅಧ್ಯಕ್ಷತೆಯಲ್ಲಿ ಕನಕ ಜಯಂತಿ ಪ್ರಯುಕ್ತ ಮಂಗಳವಾರ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲೂ ಅಧಿಕಾರಿಗಳ ಗೈರು ಹಾಜರಾತಿ ಬಗ್ಗೆ ಚರ್ಚೆಯಾಗಿತ್ತು ಇಂದು ಮತ್ತೆ ಅದೇ ರೀತಿಯ ವರ್ತನೆಗಳು ಮುಂದುವರಿಯುತ್ತಿವೆ ಹೀಗಾದರೆ ಅಧಿಕಾರಿಗಳು ಮಾಹತ್ಮರ ಜಯಂತಿಗಳನ್ನು ಸರ್ಕಾರ ಏಕೆ ಆಚರಿಸಬೇಕೆಂದು ದೂರಿದರು.
ತಹಶೀಲ್ದಾರ ಡಾ.ಮಧು ಮಾತನಾಡಿ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಪ್ರತಿ ವರ್ಷದಂತೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಕನಕ ದಾಸರ ಭಾವಚಿತ್ರದ ಮೆರವಣಿಗೆ ಮೂಲಕ ಜಯಂತಿ ಆಚರಣೆ ಪ್ರಾರಂಭವಾಗಲಿದೆ. ವೇದಿಕೆ ಕಾರ್ಯಕ್ರಮ ಸರ್ಕಾರಿ ಜೂನಿಯರ್ ಕಾಲೇಜ್ ಅವರಣದಲ್ಲಿ ನಡೆಯಲಿದೆ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಕಛೇರಿಗಳಲ್ಲಿ, ಶಾಲಾ ಹಾಗೂ ಕಾಲೇಜುಗಳಲ್ಲಿ ಕನಕ ಜಯಂತಿ ಆಚರಿಸುವಂತೆ ಸಲಹೆ ನೀಡಿದರು.
ಸಮಾಜದ ಮುಖಂಡರಾದ ಬಿ.ಹೆಚ್.ಬಸವರಾಜಪ್ಪ, ಶಿಕಾರಿ ಬಾಲಪ್ಪ, ಶ್ರೀಕಾಂತ, ಹರೀಶ, ದುರಗಪ್ರಸಾದ, ಮೋಹನ್, ಆನಂದ, ಬಸವರಾಜ, ಸಿಪಿಐ ದುರುಗಪ್ಪ, ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ್, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಪ್ರಸಾದ ಶಾಸ್ತ್ರೀ, ತೋಟಗಾರಿಕೆ ಇಲಾಖೆಯ ಶಶಿಕಲಾ, ಹೋಂ ಗಾರ್ಡ್ ವಾಗೀಶ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
