ಬೆಂಗಳೂರು
ನಿಜವಾಗಿಯೂ ಯಾರು ಸ್ವಾತಂತ್ರ್ಯ ಹೋರಾಟಗಾರರೆಂಬ ಆಡಳಿತಾರೂಢ ಮತ್ತು ವಿಪಕ್ಷ ಸದಸ್ಯರ ನಡುವೆ ಬಿರುಸಿನ ಚರ್ಚೆಗೆ ಗ್ರಾಸವಾದ ಘಟನೆ ಮೇಲ್ಮನೆಯಲ್ಲಿಂದು ನಡೆಯಿತು.
ಬಿಜೆಪಿ ಸಾವರ್ಕರ್ ಅನ್ನು ನಿಜವಾದ ದೇಶದ ಹೋರಾಟಗಾರ ಎಂದು ಬಿಂಬಿಸಲೆತ್ನಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ದೊರೆಸ್ವಾಮಿ ಬಗ್ಗೆ ತಮ್ಮ ನಿಲುವನ್ನು ಪ್ರತಿಪಾದಿಸಿದರು.ಬುಧವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಸನಗೌಡ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಮತ್ತು ಸರ್ಕಾರದ ಕ್ಷಮೆಗೆ ಒತ್ತಾಯಿಸಿ ಕಳೆದೆರಡು ದಿನಗಳಿಂದ ನಡೆಸುತ್ತಿರುವ ಧರಣಿಯನ್ನು ಮುಂದುವರೆಸಿದರು.
ಜೆಡಿಎಸ್ ಹಿರಿಯ ಸದಸ್ಯ ಹೊರಟ್ಟಿ ಮಾತನಾಡಿ, ಧರಣಿಗೆ ತಾರ್ಕಿಕ ಅಂತ್ಯ ಹಾಡಬೇಕು. ಸದನ ವ್ಯವಸ್ಥಿತವಾಗಿ ನಡೆಯಬೇಕು.
ಬಸನಗೌಡ ಪಾಟೀಲ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಿ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಆ ಬಗ್ಗೆ ಚರ್ಚೆ ಆಗಲಿ. ಬಿಜೆಪಿ ಒಂದು ತೀರ್ಮಾನಕ್ಕೆ ಬರಲಿ ಎಂದು ಸಲಹೆ ನೀಡಿದರು.
ಆಗ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸದನ ಸರಿಯಾಗಿ ನಡೆಯಲಿ. ಶಾಸಕರಿಂದ ಸ್ಪಷ್ಟೀಕರಣ ಕೊಡಿಸೋಣ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ. ಪ್ರಶ್ನೋತ್ತರ ನಡೆಯಲಿ ಎಂದರು.ಕೆಲವು ಬಾರಿ ಶಾಸಕರು ವೈಯಕ್ತಿಕವಾಗಿ ಹೇಳಿಕೆ ಕೊಡುತ್ತಾರೆ. ಆಗ ಶಾಸಕರಿಗೆ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿ ಎನ್ನಬಹುದೇ ವಿನಃ ಹೀಗೆಯೇ ನಡೆದುಕೊಳ್ಳಿ ಎನ್ನಲು ಸಾಧ್ಯವಿಲ್ಲ ಎಂದರು.
ಸಭಾನಾಯಕರ ಉತ್ತರದಿಂದ ತೃಪ್ತರಾಗದ ಹೊರಟ್ಟಿ ಮತ್ತೆ ಮಾತನಾಡಿ, ಸರ್ಕಾರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಲಿ ಸಾಕು. ಒಂದು ವಿಷಾದ ವ್ಯಕ್ತಪಡಿಸಿದರೆ ಆಕಾಶ ಕಳಚಿ ಬೀಳುವುದಿಲ್ಲ. ಸ್ಪಷ್ಟೀಕರಣ ಕೊಡಿಸುತ್ತೇವೆ ಎನ್ನುವುದು ಸರಿಯಾದ ಪರಿಹಾರವಲ್ಲ. ನಾವು ರವಿಕುಮಾರ್ ಅವರ ಬಗ್ಗೆ ಹೇಗೆ ಬೇಕಾದರೂ ಹೇಳಬಹುದು. ಹೀಗೆಯೇ ನಡೆದುಕೊಳ್ಳಿ ಎಂದು ಹೇಳಲಿಲ್ಲ ಎಂದು ತಿರುಗೇಟು ನೀಡಿದರು. ಆಗ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಸ್ಪಷ್ಟೀಕರಣ ಕೊಡುತ್ತೇವೆ ಎಂದರು.
ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ದೊರೆಸ್ವಾಮಿ ಕೊಲೆಪಾತಕರು ಅವರಿಗೆ ನಾಚಿಕೆಯಾಗಬೇಕು ಎಂದು ರವಿಕುಮಾರ್ ಹೇಳಿದ್ದು ಸಹ ಸರಿಯಲ್ಲ. ಕಡತದಲ್ಲಿ ಇದು ದಾಖಲಾಗಿದೆ. ಹೊರಟ್ಟಿಯವರು ಅಮೂಲ್ಯವಾದ ಸಲಹೆಯನ್ನೇ ನೀಡಿದ್ದಾರೆ ಎಂದಾಗ ಬಿಜೆಪಿಯ ಅರುಣ್ ಶಹಾಪೂರ್ ಮಧ್ಯಪ್ರವೇಶಿಸಿ, ಕಡತದಲ್ಲಿ ಇಲ್ಲದನ್ನು ಸಭಾನಾಯಕರು ಹೇಳುತ್ತಿದ್ದಾರೆ ಎಂದರು. ಮತ್ತೆ ಮಾತು ಮುಂದುವರೆಸಿದ ಎಸ್.ಆರ್.ಪಾಟೀಲ್, ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಕ್ಷಮೆ ಕೇಳಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿದು ಬಿಡುತ್ತವೆ. ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಇಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸುವುದನ್ನು ಬಿಟ್ಟು ಬಿಜೆಪಿಗರು ಮತ್ತೆ ಮತ್ತೆ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗಬೇಕು. ಅದಕ್ಕೂ ಅವಕಾಶ ಕೊಡುತ್ತೇವೆ. ಹೀಗಾಗಿ ಸರ್ಕಾರ ಯತ್ನಾಳ್ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟು ವಿಷಾದ ವ್ಯಕ್ತಪಡಿಸಲಿ ಎಂದರು.
ಬಳಿಕ ರವಿಕುಮಾರ್ ಅವರಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಲು ಅವಕಾಶ ನೀಡಿದರು. ಸಾವರ್ಕರ್ ಸ್ವಾತಂತ್ರ್ಯ ಆಂದೋಲನದ ಕೇಂದ್ರಬಿಂದು ಎಂದು ಸಾವರ್ಕರ್ ಬಗ್ಗೆ ವಿವರವನ್ನು ಬಿಚ್ಚಿಡಲು ಮುಂದಾದಾಗ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ದೊರೆಸ್ವಾಮಿ ಬಗ್ಗೆ ಚರ್ಚೆಯಾಗಲಿ ಅದನ್ನು ಬಿಟ್ಟು ಸಾವರ್ಕರ್ ಬಗ್ಗೆ ಮಾತನಾಡಿ ಸದನದ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.
ಆಗ ಬಿಜೆಪಿಯ ಸುನೀಲ್ ಕುಮಾರ್, ಅವರು ಮಾತನಾಡುವಾಗ ನಾವು ಸುಮ್ಮನಿದ್ದೆವು. ಈಗ ಸಾವರ್ಕರ್ ಬಗ್ಗೆ ನಾವು ಮಾತನಾಡುವಾಗ ಸುಮ್ಮನಿರಲಿ ಎಂದರು. ಈ ಸಂದರ್ಭದಲ್ಲಿ ಸದನದಲ್ಲಿ ಸಣ್ಣ ಗದ್ದಲವುಂಟಾಯಿತು.ಬಸವರಾಜ ಹೊರಟ್ಟಿ ಮಾತನಾಡಿ, ಸಾವರ್ಕರ್ ಬಗ್ಗೆ ನಮಗೂ ಗೌರವವಿದೆ. ಆದರೆ ಅವರ ಬಗ್ಗೆ ಈಗ ಚರ್ಚೆ ಅಗತ್ಯವಿಲ್ಲ. ಎಚ್.ಎಸ್. ದೊರೆಸ್ವಾಮಿ ವಿಚಾರ ಪ್ರಸ್ತಾಪವಾದ್ದರಿಂದ ಆ ಬಗ್ಗೆ ಚರ್ಚೆಯಾಗಬೇಕು. ತಪ್ಪು ಎಲ್ಲರಿಂದಲೂ ಆಗುತ್ತದೆ. ಹೀಗಾಗಿ ಸರ್ಕಾರ ಸ್ಪಷ್ಟನೆ ನೀಡಿ ವಿಷಾದ ವ್ಯಕ್ತಪಡಿಸಲಿ ಎಂದು ಸದನಕ್ಕೆ ತಿಳಿಸಿದರು.
ಆಗ ಜೆಡಿಎಸ್‌ನ ಶ್ರೀಕಂಠೇಗೌಡ, ಕ್ರಿಯಾಲೋಪದ ವಿಚಾರ ಪ್ರಸ್ತಾಪಿಸಿದರು. ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಾತನಾಡುತ್ತಿದ್ದಾಗ ಬಿಜೆಪಿಯ ರವಿಕುಮಾರ್ ದೊರೆಸ್ವಾಮಿಗೆ ಧಿಕ್ಕಾರ ಎಂದಿರುವುದು ಸರಿಯಾ ? ಲೋಪವಲ್ಲವೇ? ಕ್ರಿಯಾಲೋಪಕ್ಕೆ ರೂಲಿಂಗ್ ನೀಡಿ ಎಂದರು.ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದರು.
ಕ್ರಿಯಾಲೋಪಕ್ಕೆ ಅವಕಾಶ ಮಾಡಿಕೊಟ್ಟಾಗ ರವಿಕುಮಾರ್ ಸ್ಪಷ್ಟನೆಗೆ ಮುಂದಾದರು. ಸಾವರ್ಕರ್ ಬ್ಯಾರಿಸ್ಟರ್ ಪದವಿ ಪಡೆದವರು. ಅವರ ಇಡೀ ಕುಟುಂಬ ಸ್ವಾತಂತ್ರ್ಯರ ಹೋರಾಟಕ್ಕೆ ಆಹುತಿಯಾಗಿದ್ದಾರೆ. ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಮಹಾತ್ಮಾ ಗಾಂಧೀಜಿ ಹಾಗೂ ಸಾವರ್ಕರ್ ಲಂಡನ್ ನಲ್ಲಿ ಹೋರಾಟ ಆರಂಭಿಸಿದವರು ಎನ್ನುತ್ತಿದ್ದಾಗ ಬಿಜೆಪಿ ಸದನದ ದಿಕ್ಕು ತಪ್ಪಿಸಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ಸಭಾಪತಿ ಪೀಠದ ಮುಂಭಾಗದಲ್ಲಿ ಧರಣಿ ನಿರತರಾಗಿದ್ದ ಕಾಂಗ್ರೆಸಿನ ಐವಾನ್ ಡಿಸೋಜಾ ಆರೋಪಿಸಿದರು.
ಇದಕ್ಕೆ ಬಿಜೆಪಿಯ ಪ್ರಾಣೇಶ್ ಹಾಗೂ ಇತರರು ಧರಣಿಯಲ್ಲಿದ್ದವರು ಚರ್ಚೆಯ ಮಧ್ಯೆ ಪ್ರವೇಶಿಸುವುದು ಸರಿಯಲ್ಲ ಎಂದರು. ಇದಕ್ಕೆ ಜೆಡಿಎಸ್‌ನ ಭೋಜೇಗೌಡ ಹಾಗೂ ಶ್ರೀಕಂಠೇಗೌಡ ಕಿಡಿಕಾರಿ ,ನಮಗೆ ಪಾಠ, ಇತಿಹಾಸ ಬೇಕಾಗಿಲ್ಲ. ಆಡಿದ ಮಾತುಗಳಿಗೆ ಸ್ಪಷ್ಟೀಕರಣ ಸಿಗಲಿ. ಪಾಠ ಮಾಡಲು ಅವರು ಹೆಡ್‌ಮೇಷ್ಟ್ರೂ ಅಲ್ಲ, ನಾವು ಮಕ್ಕಳೂ ಅಲ್ಲ ಎಂದರು.
ಈ ಸಂದರ್ಭದಲ್ಲಿ ಸದನದಲ್ಲಿ ವಾಕ್ಸಮರ, ಗದ್ದಲ ಉಂಟಾದಾಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ರವಿಕುಮಾರ್ ಸ್ಪಷ್ಟೀಕರಣ ನೀಡಿ ಎಂದರು.
ಆಗಲೂ ರವಿಕುಮಾರ್ ಸ್ಪಷ್ಟೀಕರಣ ನೀಡಲು ಮುಂದಾಗದೇ ತಮ್ಮ ದಾಟಿಯನ್ನೇ ಮುಂದುವರೆಸಿದರು. ಈ ವೇಳೆ ವಿಪಕ್ಷ ಸದಸ್ಯರು ಧಿಕ್ಕಾರ ಕೂಗಲಾರಂಭಿಸಿದರು. ಇದಕ್ಕೂ ಬಗ್ಗದ ರವಿಕುಮಾರ್ ವಿ.ಡಿ.ಸಾವರ್ಕರ್ ಬಗ್ಗೆ ಮಾತನ್ನೇ ಮುಂದುವರೆಸಿದರು.
ಮಧ್ಯಪ್ರವೇಶ ಮಾಡಿದ ಕೋಟಾ ಶ್ರೀನಿವಾಸ ಪೂಜಾರಿ, ರವಿಕುಮಾರ್ ಸುಮ್ಮನೆ ಮಾತನಾಡುತ್ತಿಲ್ಲ. ಸಭಾಪತಿಗಳಿಂದ ಅನುಮತಿ ಪಡೆದು ಮಾತನಾಡುತ್ತಿದ್ದಾರೆ ಎಂದಾಗ ವಿಪಕ್ಷ ಸದಸ್ಯರು ಮತ್ತಷ್ಟು ಆಕ್ರೋಶಗೊಂಡರು. ನ್ಯಾಯಬೇಕು ಎಂದು ಧಿಕ್ಕಾರ ಕೂಗಲಾರಂಭಿಸಿದರು. ಆಗ ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಹುಲಿ ಎಂದರು. ಮತ್ತೆ ನ್ಯಾಯಕ್ಕಾಗಿ ಜೆಡಿಎಸ್ ಕಾಂಗ್ರೆಸ್ ಒತ್ತಾಯಿಸಿ ಧರಣಿ ತೀವ್ರಗೊಳಿಸಿದರು.
ಆಗ ಪ್ರಾಣೇಶ್ ಮಾತನಾಡಿ, ಕಾಂಗ್ರೆಸ್‌ನವರಿಗೆ ಮಹಾತ್ಮಾಗಾಂಧಿ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ರಾಹುಲ್ ಗಾಂಧಿ ಮಾತ್ರ ಎಂದು ಕುಟುಕಿದಾಗ ಮತ್ತೆ ಧರಣಿಗದ್ದಲ ಮುಂದುವರೆಯಿತು.ಈ ವೇಳೆ ಸಭಾಪತಿ ಎಸ್.ಆರ್.ಪಾಟೀಲ್ ಮಾತನಾಡಿ, 242 ಬಿ ನಿಯಮದ ಅಡಿ ಚರ್ಚೆಯ ನೀತಿ ನಿರೂಪಣಾ ಸಮಿತಿಗೆ ವರ್ಗಾಯಿಸಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ನೀತಿ ನಿರೂಪಣಾ ಸಮಿತಿ ಅಡಿ ಬರಲಿ. ಇಲ್ಲಿಗೆ ಧರಣಿ ಹಿಂಪಡೆಯುತ್ತೇವೆ ಎಂದರು.
ಎಸ್.ಆರ್.ಪಾಟೀಲ್ ಮಾತಿಗೆ ಧರಣಿ ನಿರತರೆಲ್ಲ ಹೋಗಿ ತಮ್ಮತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ಆಗಲೂ ರವಿಕುಮಾರ್ ಸಾವರ್ಕರ್ ಬಗ್ಗೆ ಮಾತನ್ನೇ ಮುಂದುವರೆಸಿ ದೊರೆಸ್ವಾಮಿ ರಾಜಕಾರಣ ಮಾಡಿದ್ದಾರೆ. ಪ್ರಜಾಪ್ರಭುತ್ವ ವಿರೋಧಿಗಳನ್ನು ಮುಗಿಸಬೇಕು ಎಂದರು. ಆಗ ಕಾಂಗ್ರೆಸ್‌ನ ಪ್ರಕಾಶ್ ರಾಠೋಡ್ ಮಾತನಾಡಿ ರವಿಕುಮಾರ್ ಮಾತುಗಳು ಕಡತಕ್ಕೆ ಹೋಗಬಾರದು ಎಂದರು. ಆಗ ರವಿಕುಮಾರ್ ಮತ್ತೆ ದೊರೆಸ್ವಾಮಿ ಹೇಳಿಕೆಗೆ ಯತ್ನಾಳ್ ಕ್ಷಮೆ ಕೇಳುವ ಅವಶ್ಯಕತೆಯಿಲ್ಲ. ರಾಜಕಾರಣಿಯಂತೆ ನಡೆದುಕೊಳ್ಳುತ್ತಿರುವ ದೊರೆಸ್ವಾಮಿಗೆ ನಾಚಿಕೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ರವಿಕುಮಾರ್ ಮಾತುಗಳನ್ನು ಕಡತದಿಂದ ತೆಗೆದುಹಾಕಲು ಸಭಾಪತಿಗಳು ಸೂಚಿಸಿದರು.
342ಅಡಿ ಚರ್ಚೆಯಾಗುತ್ತಿದ್ದ ದೊರೆಸ್ವಾಮಿ ವಿರುದ್ಧ ಬಿಜೆಪಿ ನಾಯಕರ ಹೇಳಿಕೆ ಕುರಿತ ಚರ್ಚೆಯನ್ನು ನೀತಿ ನಿರೂಪಣಾ ಸಮಿತಿಗೆ ತೆಗೆದುಕೊಳ್ಳಬಾರದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದಾಗ, ಸಿಡಿಮಿಡಿಗೊಂಡ ಸಭಾಪತಿಗಳು ನೀತಿನಿರೂಪಣಾ ಸಮಿತಿಗೆ ಅವಕಾಶ ಮಾಡಿಕೊಡಲಾಗುವುದು. ಸಮಿತಿಗೆ ಏನು ಕೊಡಬೇಕು ಏನು ಕೊಡಬಾರದು ಎಂಬುದು ತಮ್ಮಿಂದ ಕಲಿಯಬೇಕಾಗಿಲ್ಲ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿ , ರಾಜ್ಯಪಾಲರ ಭಾಷಣದ ಪ್ರಸ್ತಾಪದ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಬೋಸರಾಜ್ ಮಾತನಾಡಲು ಮುಂದಾದಾಗ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅದಕ್ಕೆ ಅವಕಾಶ ಮಾಡಿಕೊಡದೇ ಕರೋನಾ ಹಾವಳಿ ಪ್ರಸ್ತಾಪಿಸಿದರು. ಕರೋನಾ ದಿಂದ ರಾಜ್ಯದ ಜನ ಬೆಚ್ಚಿಬಿದ್ದಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಆಗ ಸಚಿವ ಗೋವಿಂದ ಕಾರಜೋಳ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣ ಪಟ್ಟಿಯನ್ನು ನೀಡಿದೆ ಎಂದರು. ಆಗ ಎಸ್.ಆರ್.ಪಾಟೀಲ್ ಸ್ಟೇಟ್ ಮೆಂಟ್ ವಿಪಕ್ಷನಾಯಕರಿಗೆ ನೀಡಿಲ್ಲ ಎಂದರೆ ಇದು ಎಂತಹ ಬೇಜವಾಬ್ದಾರಿ ಸರ್ಕಾರ ಎಂದು ಪ್ರಶ್ನಿಸಿದರು.ಬಳಿಕ ವೈದ್ಯಕೀಯ ಸಚಿವ ಸುಧಾಕರ್ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ವಿವರ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ