ಅಭ್ಯರ್ಥಿ ಯಾರೇ ಆದರೂ ಒಗ್ಗಟ್ಟಿನಿಂದ ಪ್ರಚಾರ ಮಾಡಬೇಕು : ಕುಮಾರಸ್ವಾಮಿ

ಬೆಂಗಳೂರು

    ಶಿರಾ ಕ್ಷೇತ್ರದ ಉಪಚುನಾವಣೆ ಸಂಬಂಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನಗರದ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.

    ಅಭ್ಯರ್ಥಿ ಯಾರೇ ಆದರೂ ಅವರ ಪರ ಎಲ್ಲರೂ ಒಗ್ಗಟ್ಟಿನಿಂದ ಪ್ರಚಾರ ಮಾಡಬೇಕು. ಜೆಡಿಎಸ್ ಭದ್ರಕೋಟೆಯಾಗಿರುವ ಶಿರಾದಲ್ಲಿ ಪಕ್ಷದ ನೆಲೆ ಉಳಿಸಿಕೊಳ್ಳುವ ಅನಿವಾರ್ಯತೆ ಜೆಡಿಎಸ್ ಗೆ ಎದುರಾಗಿದ್ದು, ಹೀಗಾಗಿ ಅಭ್ಯರ್ಥಿ ಆಯ್ಕೆ ಗೊಂದಲ ಮೂಡಿಸಿದೆ.

    ನಿಧನರಾದ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್ ಗೆ ಟಿಕೆಟ್ ನೀಡಲು ಜೆಡಿಎಸ್ ಬಯಸಿದೆ. ಆದರ ಮತ್ತೊಂದು ಕಡೆ ಸತ್ಯನಾರಾಯಣ್ ಕುಟುಂಬದ ಸದಸ್ಯರತ್ತ ಮೇಲೆ ಬಿಜೆಪಿ ಪ್ರಭಾವ ಬೀರುತ್ತಿದೆ. ಇನ್ನು ಕಾಂಗ್ರೆಸ್ ನಿಂದ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್. ರಾಜಣ್ಣ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಬಿಜೆಪಿ ಕಾಂಗ್ರೆಸ್ ಎದುರುಗಡೆ ಪ್ರಬಲವಾಗಿ ಹೋರಾಡಬಲ್ಲ ಹುರಿಯಾಳು ತೆನೆಹೊತ್ತ ಮಹಿಳೆಗೆ ಅನಿವಾರ್ಯವಾಗಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಮತ್ತು ಕ್ಷೇತ್ರದಲ್ಲಿ ಪಕ್ಷದ ಸ್ಥಿತಿಗತಿ ಬಗ್ಗೆ ಸಭೆಯಲ್ಲಿ ಕುಮಾರಸ್ವಾಮಿ ಅವಲೋಕನ ನಡೆಸಿದರು.

    ಸಭೆಯಲ್ಲಿ ಶಿರಾದಲ್ಲಿ ಈ ಹಿಂದಿನ ಹಿಡಿತ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಕಾರ್ಯಕರ್ತರೆಲ್ಲ ಒಗ್ಗೂಡಿ ಪಕ್ಷ ಸಂಘಟನೆ ಮಾಡಬೇಕು.ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕಿದೆ. ರಾಷ್ಟ್ರೀಯ ಪಕ್ಷಗಳ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಪ್ರಾದೇಶಿಕ ಪಕ್ಷದ ಶಕ್ತಿ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಅದಕ್ಕೆ ಸಹಮತ ವ್ಯಕ್ತಪಡಿಸಬೇಕು. ಯಾರೇ ಅಭ್ಯರ್ಥಿ ಆದರೂ ಕಾರ್ಯಕರ್ತರು ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಕಾರ್ಯಕರ್ತರಿಗೆ ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಯಿತೇ ವಿನಃ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರಸ್ತಾಪವಾಗಲಿಲ್ಲ. ಎಂದಿನಂತೆ ಅಭ್ಯರ್ಥಿ ಆಯ್ಕೆ ಹೆಚ್.ಡಿ.ದೇವೇಗೌಡರ ನಿರ್ಣಯಕ್ಕೆ ಬಿಟ್ಟಿದೆ.

    ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸತ್ಯನಾರಾಯಣ್ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ಎದುರಾಗಿದೆ. ಉಪಚುನಾವಣೆಗೆ ಕಾಂಗ್ರೆಸ್, ಬಿಜೆಪಿ ತೀವ್ರ ಸಿದ್ಧತೆಯಲ್ಲಿ ತೊಡಗಿದೆ. ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಜನರನ್ನು ಸೆಳೆಯಲು ಬಿಜೆಪಿ ಈ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಇದೆ. ಅದು ಈಗಲೂ ಮುಂದುವರೆಸಿದೆ. ಈ ಸಂಬಂಧ ಸುದೀರ್ಘವಾಗಿ ಮುಖಂಡರ ಜೊತೆ ಚರ್ಚಿಸಿದ್ದೇವೆ ಎಂದರು.

    ಕಳೆದೊಂದು ವಾರದಲ್ಲಿ ಸರ್ಕಾರ ಡ್ರಗ್ಸ್ ದಂಧೆ ವಿಚಾರದಲ್ಲಿ ಅಧಿಕಾರಿಗಳ ದೊಡ್ಡಮಟ್ಟದ ತನಿಖೆಗೆ ಆದೇಶ ಹೊರಡಿಸಿದೆ. ಅಧಿಕಾರಿಗಳು ನಿಷ್ಪಕ್ಷ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಡ್ರಗ್ಸ್ ವ್ಯವಸ್ಥೆ ನಿನ್ನೆಮೊನ್ನೆಯದಲ್ಲ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಮುನ್ನಲೆಗೆ ಬಂದಿದೆಯಷ್ಟೆ. ಸರ್ಕಾರ ಈ ಬಗ್ಗೆ ಸೂಕ್ತಕ್ರಮಕೈಗೊಳ್ಳಬೇಕು. ಚಿತ್ರರಂಗವೊಂದೇ ಇದರಲ್ಲಿ ಭಾಗಿಯಾಗಿಲ್ಲ. ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರೂ ಇದ್ದಾರೆ. ಡ್ರಗ್ಸ್ ಒಂದೇ ಕ್ಷೇತ್ರಕ್ಕೆ ಮೀಸಲಾಗಿಲ್ಲ. ಎಲ್ಲಾ ಕಡೆಗಳಲ್ಲಿಯೂ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಡ್ರಗ್ಸ್ ಸಂಪೂರ್ಣ ನಾಶ ಮಾಡಲು ಸಾಧ್ಯವಾಗದೇ ಇದ್ದರೂ, ಸರ್ಕಾರ ತನ್ನ ಮುಂದಿರುವ ಡ್ರಗ್ಸ್ ಕುರಿತಾಗಿನ ಸವಾಲನ್ನು ಸಮರ್ಪಕವಾಗಿ ನಿಭಾಯಿಸೇಕು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

    ಬಿಜೆಪಿ ವರಿಷ್ಠರಿಗೂ ನನಗೂ ಸಂಬಂಧವಿಲ್ಲ. ಯಡಿಯೂರಪ್ಪ ವೈಫಲ್ಯ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ನಾನೇಕೆ ಈ ಸಂಬಂಧ ಬಿಜೆಪಿ ವರಿಷ್ಠರಿಗೆ ಪತ್ರ ಬರೆಯಲಿ. ನನ್ನದು ಜನತಾದಳ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap