ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಸ್ಪೀಟ್ ದಂಧೆ ಹೆಚ್ಚಾಗಿದ್ದರೂ ಪೋಲೀಸ್ ಇಲಾಖೆ ಕೈ ಕಟ್ಟಿ ಕುಳಿತಿದೆಯೇ. ಯಾವ ಕಾರಣಕ್ಕಾಗಿ ಈ ದಂಧಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಪ್ರಶ್ನಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಹಾಗೂ ನಗರ ಡಿವೈಎಸ್‌ಪಿಯವರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಳಹಂತದ ಅಧಿಕಾರಿಗಳ ವರ್ತನೆಯಿಂದ ಇತ್ತೀಚೆಗೆ ವಿವಿಧ ಪ್ರಕರಣಗಳು ಕಂಡು ಬರುತ್ತಿವೆ. ದೊಡ್ಡತಿಮ್ಮಯ್ಯನಪಾಳ್ಯ, ಬೆಳಗುಂಬ ಸೇರಿದಂತೆ ತುಮಕೂರು ಗ್ರಾಮಾಂತರದಲ್ಲಿ ಇಸ್ಪೀಟ್ ದಂಧೆ, ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಕೊಲೆ, ಸುಲಿಗೆ, ದರೋಡೆ, ಜೂಜು ದಂಧೆ, ಅಕ್ರಮ ಮದ್ಯ ಮಾರಾಟ, ಮರಳು ಮಾಫಿಯಾ ಸೇರಿದಂತೆ ಅಪರಾಧ ಪ್ರಕರಣಗಳು ಮಿತಿ ಮೀರಿದೆ. ಇದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಶಾಸಕರು, ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗುಂಬದಲ್ಲಿ ಇತ್ತೀಚೆಗೆ ರೌಡಿಶೀಟರ್ ಕೊಲೆ, ಹಾಡಹಗಲೇ ಮಹಿಳೆ ಹತ್ಯೆ ನಡೆದಿದೆ. ಇದನ್ನು ಗಮನಿಸಿದರೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೂಡಲೇ ಪೊಲೀಸ್ ಅಧಿಕಾರಿಗಳು ರೌಡಿಶೀಟರ್ ಹತ್ಯೆ ಹಾಗೂ ಭಾಗ್ಯಮ್ಮ ಕೊಲೆ ಪ್ರಕರಣದ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಿ ಆ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರೌಡಿಶೀಟರ್ ಹತ್ಯೆ ಪ್ರಕರಣದ ಹಿಂದೆ ರಾಜ ಕಾರಣಿಗಳ ಕೈವಾಡ ಇದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಇದರ ಹಿಂದೆ ಯರ‍್ಯಾರ ಕೈವಾಡವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರಲ್ಲದೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದ ಪೊಲೀಸ್ ಅಧಿಕಾರಿಗಳ ಅವಧಿಯಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆದಿರಲಿಲ್ಲ. ಆದರೆ ನನಗೆ ಗೊತ್ತಿಲ್ಲದಂತೆ ಮಾಜಿ ಶಾಸಕರ ಶಿಫಾರಸ್ಸಿನ ಪತ್ರದ ಮೇರೆಗೆ ವರ್ಗಾವಣೆಗೊಂಡು ಬಂದಿರುವ ಪೋಲೀಸ್ ಅಧಿಕಾರಿಗಳ ಈ ಅವಧಿಯಲ್ಲಿ ಇಂಥ ಅಹಿತಕರ ಘಟನೆಗಳು ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು
ಇನ್ನು ಮುಂದೆ ಇಂಥ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಪೋಲೀಸ್ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ. ಕ್ಯಾತ್ಸಂದ್ರ, ಗ್ರಾಮಾಂತರ ಠಾಣೆ ವ್ಯಾಪ್ತಿ ಸೇರಿದಂತೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಎಗ್ಗಿಲ್ಲದೆ ಜೂಜಾಟ, ಮರಳು ಮಾಫಿಯಾ ನಡೆಯುತ್ತಿದೆ. ಇದಕ್ಕ ಕಡಿವಾಣ ಹಾಕಲು ಪೋಲೀಸರಿಗೆ ಸಮಯವಿಲ್ಲ ಆದರೆ ಅಕ್ರಮ ಚಟುವಟಕೆಗಳಿಂದ ಕಮೀಷನ್ ಪಡೆಯಲು ಸಮಯವಿದೆ ಎಂದು ದೂರಿದರು
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಉಪವಿಭಾಗದ ಡಿವೈಎಸ್ಪಿ ಇಬ್ಬರು ಉತ್ತಮ ಅಧಿಕಾರಿಗಳು. ಇವರಿಬ್ಬರ ಬಗ್ಗೆ ನನಗೆ ಗೌರವ ಇದೆ. ಆದರೆ ಇವರ ಕೈಕೆಳಗಿನ ಅಧಿಕಾರಗಳು ಇವರ ಮಾತಿಗೂ ಸ್ಪಂದಿಸದೆ ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಿರುವುದರಿಂದ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದರು.
ವರ್ಗಾವಣೆ ದಂಧೆ
ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. ಸೋತಿರುವ ಮಾಜಿ ಶಾಸಕರ ಶಿಫಾರಸ್ಸು ಪತ್ರದ ಮೇಲೆ ಮುಖ್ಯಮಂತ್ರಿಗಳು ವರ್ಗಾವಣೆಗೆ ಆದೇಶ ನೀಡುತ್ತಾರೆ. ಕಾನೂನಿನಲ್ಲಿ ಸೋತವರ ಪತ್ರದ ವರ್ಗಾವಣೆಗೆ ಅವಕಾಶ ಇದೆಯೋ, ಇಲ್ಲವೋ ಎಂಬುದು ನನಗೂ ಗೊತ್ತಿಲ್ಲ. ಈ ಎಲ್ಲದರ ಬಗ್ಗೆಯೂ ಕಾನೂನು ತಜ್ಞರ ಜತೆ ಚರ್ಚಿಸಿ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಚಿ.ನಾ.ಹಳ್ಳಿಗೆ ಸೀಮಿತವಾದ ಜಿಲ್ಲಾ ಸಚಿವರು
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಚಿಕ್ಕನಾಯಕನಹಳ್ಳಿಯನ್ನೇ ತುಮಕೂರು ಜಿಲ್ಲೆ ಎಂದುಕೊಂಡಿದ್ದಾರೆ. ಯಾವುದೇ ಅಭಿವೃದ್ಧಿ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರೂ ಮೊದಲು ಚಿಕ್ಕನಾಯಕನಹಳ್ಳಿಯೇ ಅವರ ಬಾಯಲ್ಲಿ ಬರುತ್ತದೆ. ಈ ಬಗ್ಗೆ ಖುದ್ಧು ಅವರ ಪಕ್ಷದ ಶಾಸಕರೇ ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು.
ಬಗರ್‌ಹುಕುಂ ಅವ್ಯವಹಾರ: ಎಸಿಬಿ ತನಿಖೆ
ಗ್ರಾಮಾಂತಕ ಕ್ಷೇತ್ರದಲ್ಲಿ ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆಯಲ್ಲಿ ಅವ್ಯವಹಾರ ನಡೆದಿರುವುದು ಜಗಜ್ಜಾಹೀರಾಗಿದೆ. ಈ ಅವ್ಯವಹಾರದಲ್ಲಿ ಹಿಂದಿನ ತಹಶೀಲ್ದಾರ್ ತಪ್ಪಿತಸ್ಥರೆಂದು ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳ ವರದಿ ನೀಡಿದ್ದಾರೆ. ಆದರೆ ಕಂದಾಯ ಇಲಾಖೆ ಕಾರ್ಯದರ್ಶಿಗಳು ಸದರಿ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳದಂತೆ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಅವರು ಪ್ರಭಾವ ಬೀರಿದ್ದಾರೆ. ಹಾಗಾಗಿ ಇಲಾಖೆಯ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ. ಇದರ ವಿರುದ್ಧವೂ ಎಸಿಬಿ ತನಿಖೆ ನಡೆಸುವಂತೆ ತಮ್ಮ ವಕೀಲರೊಂದಿಗೆ ಚರ್ಚಿಸಿ ದಾಖಲಾತಿ ನೀಡಿರುವುದಾಗಿ ಹೇಳಿದರು.
೪೦ ಕೋಟಿ ಅನುದಾನಕ್ಕೆ ತಡೆ
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶ ನೀಡಿರುವ ಎಸ್‌ಎಸ್‌ಡಿಪಿಯ ಒಟ್ಟು ೪೦ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುದಾನ ತಡೆ ಹಿಡಿಯಲಾಗಿದೆ. ಈ ಅನುದಾನ ತಡೆ ಹಿಡಿಸಿರುವ ಮಾಜಿ ಶಾಸಕರಿಗೆ ಕನಿಷ್ಠ ಕಾನೂನು ಪ್ರಜ್ಞೆಯೂ ಇಲ್ಲ. ಯಾವುದೇ ಕಾರಣಕ್ಕೂ ಈ ಅನುದಾನ ವಾಪಸ್ಸಾಗಲು ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾದರ್ಶಿ ಟಿ.ಆರ್. ನಾಗರಾಜರಾವ್, ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವ ಘಟಕ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರಯ್ಯ, ಎಸ್‌ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ