ಶಿರಾ
ಗೊರೂರು ಡ್ಯಾಂನಲ್ಲಿ ಸುಮಾರು 10 ಟಿ.ಎಂ.ಸಿ. ನೀರಿಟ್ಟುಕೊಂಡು ಒಂದು ಹನಿ ನೀರನ್ನೂ ಹರಿಸದೆ ವಿನಾ ಕಾರಣ ರೈತರು ಹಾಗೂ ಸಾರ್ವಜನಿಕರನ್ನು ಸತಾಯಿಸಿ ನೋವುಂಟು ಮಾಡಿದ ಸರ್ಕಾರದ ಆಡಳಿತ ವೈಖರಿಗೆ ಏನನ್ನಬೇಕೋ ತಿಳಿಯದಾಗಿದೆ. ಬರದ ನೋವು ತಿಳಿಯದ ಜಿಲ್ಲಾ ಮಂತ್ರಿಗಳ ಇಂತಹ ನಿರ್ಲಕ್ಷ್ಯ ಕ್ರಮಗಳು ಖಂಡನೀಯ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದಲೂ ತುಮಕೂರು, ಕಳ್ಳಂಬೆಳ್ಳ ಹಾಗೂ ಶಿರಾ ಭಾಗದ ಕೆರೆಗಳಿಗೆ ಕುಡಿಯುವ ನೀರಿನ ಸಲುವಾಗಿ ಹೇಮಾವತಿಯನ್ನು ಹರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಲೆ ಬರಲಾಗುತ್ತಿದೆ. ಆದರೆ ಶನಿವಾರದಿಂದ ತುಮಕೂರು ನಾಲಾ ವಲಯಕ್ಕೆ ನೀರನ್ನು ಹರಿಯಬಿಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಡ್ಯಾಂನಲ್ಲಿ ಶೇಖರಣೆಗೊಂಡಿದ್ದ ನೀರನ್ನು ಇಷ್ಟೊತ್ತಿಗೆ ಖಾಲಿ ಮಾಡಬೇಕಿತ್ತು. ಜೂನ್ ತಿಂಗಳವರೆಗೆ ಯಾವುದೇ ಕಾರಣಕ್ಕೂ ಸ್ಟೋರೇಜ್ ನೀರನ್ನು ಇಟ್ಟುಕೊಳ್ಳಬಾರದಿತ್ತು. ನಮ್ಮದೇ ನೀರಾದರೂ ಡ್ಯಾಂನಲ್ಲಿ ನೀರಿದ್ದರೆ ತಮಿಳುನಾಡಿಗೆ ನಾವೆ ಲೆಕ್ಕ ಕೊಡಬೇಕಾಗುತ್ತದೆ ಎಂಬ ಅರಿವು ಕೂಡ ಈ ಸರ್ಕಾರಕ್ಕೆ ಹಾಗೂ ಜಿಲ್ಲಾ ಮಂತ್ರಿಗಳಿಗೆ ಇಲ್ಲವಾಯಿತು ಎಂದರು.
ನೀರು ಬಿಟ್ಟರೆ ಕಲಹ ಆರಂಭವಾಗುತ್ತದೆ ಎಂಬ ಸರ್ಕಾರದ ಕುಂಟು ನೆಪ ಬೇಡ. ಗುಬ್ಬಿ, ತುರುವೇಕೆರೆ, ಶಿರಾ ಯಾವುದೇ ಭಾಗಕ್ಕಾಗಲಿ ಇರುವ ನೀರನ್ನು ಬಳಸಿಕೊಳ್ಳುವ ಜಾಣತನವನ್ನು ಸರ್ಕಾರ ಮೆರೆಯಬೇಕಿತ್ತು. ಆದರೆ ಒಂದು ನಿಗದಿತ ಸಮಯವೂ ಇಲ್ಲದೆ ಮನಸೋ ಇಚ್ಚೆ ನೀರನ್ನು ಹರಿಯಬಿಡುವ ಈ ಸರ್ಕಾರಕ್ಕೆ ಏನೆನ್ನಬೇಕೋ ತಿಳಿಯದಾಗಿದೆ ಎಂದು ಜಯಚಂದ್ರ ಹೇಳಿದರು.
ಚೀನಾದಲ್ಲಿ ಕೊರೋನಾ ಸೋಂಕು ಕಂಡ ಕೂಡಲೆ ದೇಶವನ್ನು ಲಾಕ್‍ಡೌನ್ ಮಾಡಬೇಕಿತ್ತು. ಲಾಕ್‍ಡೌನ್ ಮಾಡುವ ಸಂದರ್ಭದಲ್ಲೂ ಕೇಂದ್ರ ಯಾಮಾರಿದ ಪರಿಣಾಮವಾಗಿ ಇಂದು ಸೋಂಕಿನ ಸಂಖ್ಯೆ ಮಿತಿ ಮೀರಲು ಕಾರಣವಾಗಿದೆ ಎಂದು ಮಾಜಿ ಸಚಿವರು ತಿಳಿಸಿದರು.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ