ತುಮಕೂರು
“ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ದಕ್ಷ ಹಾಗೂ ಪ್ರಾಮಾಣಿಕ ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಅವರನ್ನು ರಾಜ್ಯ ಸರ್ಕಾರ ಪುನಃ ನಿಯುಕ್ತಿಗೊಳಿಸುವುದೇ?’’- ಇದು ಈಗ ತುಮಕೂರು ಮಹಾನಗರ ಪಾಲಿಕೆಯ ಒಳಗೆ ಮತ್ತು ಹೊರಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ವಿಷಯವಾಗಿದೆ.
ರಾಜ್ಯದಲ್ಲಿ ಉಪಚುನಾವಣೆ ಮುಕ್ತಾಯವಾಗಿ ಪ್ರಸ್ತುತ ಫಲಿತಾಂಶವೂ ಪ್ರಕಟವಾಗಿರುವುದರಿಂದ ಈಗ ಸಹಜವಾಗಿ ಎಲ್ಲರ ಗಮನ ಪಾಲಿಕೆ ಆಯುಕ್ತರ ಹುದ್ದೆಯ ಮೇಲೆ ಕೇಂದ್ರೀಕೃತವಾಗಿದೆ. ಭೂಬಾಲನ್ ಅವರನ್ನೇ ಮತ್ತೆ ಇಲ್ಲಿಗೆ ವರ್ಗಾಯಿಸ ಲಾಗುವುದೇ? ಯಾವಾಗ ಇಲ್ಲಿಗೆ ಬರಲಿದ್ದಾರೆ? ತುಮಕೂರಿನ ಶಾಸಕರು, ಸಂಸದರು ಏನು ಮಾಡುತ್ತಾರೆ? ಎಂಬ ಪ್ರಶ್ನೆಗಳು ಈಗ “ಟಾಕ್ ಆಫ್ ದಿ ಟೌನ್” ಆಗತೊಡಗಿವೆ. ಜೊತೆಗೇ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೊಳ್ಳಲಾರಂಭಿಸಿದೆ.
ಒಂದು ಮೂಲದ ಪ್ರಕಾರ, “ಸೋಮವಾರ –ಡಿ.9- ಫಲಿತಾಂಶ ಪ್ರಕಟವಾಗಿದೆ. ಚುನಾವಣಾ ಪ್ರಕ್ರಿಯೆಗಳೆಲ್ಲವೂ ಪೂರ್ಣವಾದ ಬಳಿಕ, ಚುನಾವಣಾ ಆಯೋಗವು ವರ್ಗಾವಣೆಗೆ ಸಮ್ಮತಿಸಬೇಕು. ಬಳಿಕ ಈ ಕಡತಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿ ಹಾಕಬೇಕು. ಎಲ್ಲವೂ ನಿರೀಕ್ಷೆಯಂತೆಯೇ ಆದರೆ ಡಿ.16 ರ ಹೊತ್ತಿಗೆ ಭೂಪಾಲನ್ ಅವರು ಇಲ್ಲಿಗೆ ಬರಬಹುದು ಎನ್ನಲಾಗುತ್ತಿದೆ. ಆದರೆ ಈಗಿನ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳಿಗೆ ಈಗ ಸಚಿವ ಸಂಪುಟ ರಚನೆಯ ತಲೆನೋವು ಆರಂಭವಾಗುತ್ತಿದೆ. ಖಾತೆ ಹಂಚಿಕೆಯೂ ಸಮಸ್ಯೆಯಾಗಲಿದೆ. ಅವರ ದೆಹಲಿ ಯಾತ್ರೆಯೂ ಶುರುವಾಗಲಿದೆ. ಇವುಗಳ ಮಧ್ಯೆ ಅವರಿಗೆ ವರ್ಗಾವಣೆ ಕಡತ ನೋಡುವ ಪುರುಸೊತ್ತಾದರೂ ಎಲ್ಲಿರುತ್ತದೆ?” ಎಂದು ಹೇಳಲಾಗುತ್ತಿದೆ.
ಮತ್ತೊಂದು ಮೂಲದ ಪ್ರಕಾರ, “ಈ ವಿಷಯವು ಈಗ ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಸಂಸದ ಜಿ.ಎಸ್.ಬಸವರಾಜು ಅವರಿಗೆ ಪ್ರೆಸ್ಟೀಜ್ ಇಶ್ಯೂ ಆಗಿದೆ. ಏಕೆಂದರೆ ಭೂಬಾಲನ್ ಅವರ ವರ್ಗಾವಣೆ ಆದಾಗ, ಅವರು ಮತ್ತೆ ಇಲ್ಲಿಗೆ ಬರುವರೆಂದು ಜನರನ್ನು ಸಮಾಧಾನಿಸಿದ್ದರು. ಈಗ ಆ ಸಮಯ ಬಂದಿದೆ. ಹೀಗಾಗಿ ಅವರು ಈ ವಿಷಯದಲ್ಲಿ ಸಫಲರಾಗಲೇಬೇಕು. ಇಲ್ಲದಿದ್ದರೆ ಜನರ ಅಪನಂಬಿಕೆಗೆ ಗುರಿಯಾಗಬೇಕಾದೀತು” ಎಂದು ಭಾವಿಸಲಾಗುತ್ತಿದೆ.
ಇವೆಲ್ಲದರ ಮಧ್ಯೆ ಮತ್ತೊಂದು ಬೆಳವಣಿಗೆಯಲ್ಲಿ ಭೂಪಾಲನ್ ಅವರನ್ನು ತುಮಕೂರಿಗೇ ವರ್ಗಾಯಿಸಲು ಸ್ಮಾರ್ಟ್ಸಿಟಿ ಕಂಪನಿ ಛೇರ್ಮನ್ ಶಾಲಿನಿ ರಜನೀಶ್ ಅವರು ಸರ್ಕಾರದ ಹಂತದಲ್ಲಿ ಪ್ರಯತ್ನಿಸುತ್ತಿದ್ದಾರೆಂಬ ವದಂತಿ ಸಹ ಹಬ್ಬಿದೆ. ಪ್ರಸ್ತುತ ಸ್ಮಾರ್ಟ್ಸಿಟಿ ಕಾಮಗಾರಿಗಳು ಭಾರಿ ವಿವಾದ ಸೃಷ್ಟಿಸಿವೆ. ಜನಪ್ರತಿನಿಧಿಗಳೂ ಮುಗಿಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ಚತುರತೆಯಿಂದ ನಿರ್ವಹಿಸಲು ಭೂಪಾಲನ್ ಅವರೇ ಸಮರ್ಥರೆಂದು ಊಹಿಸಿ, ಇಂತಹುದೊಂದು ಪ್ರಯತ್ನ ಮಾಡುತ್ತಿದ್ದಾರೆಂದು ಒಂದು ವಲಯದಲ್ಲಿ ವದಂತಿಯನ್ನು ತೇಲಿಬಿಡಲಾಗಿದೆ.
ಆಗ ನಡೆದಿದ್ದೇನು?
ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತುಮಕೂರು ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಆಯುಕ್ತರಾಗಿ ಬಂದಿದ್ದರು. ಇದಕ್ಕೂ ಮೊದಲು ಉಡುಪಿ ಜಿಲ್ಲೆ ಕುಂದಾಪುರದ ಉಪವಿಭಾಗಾಧಿಕಾರಿ ಆಗಿ ಒಳ್ಳೆಯ ಹೆಸರು ಗಳಿಸಿದ್ದರು. ಅವರನ್ನು ಗುರುತಿಸಿ, ತುಮಕೂರು ಪಾಲಿಕೆಗೆ ನಿಯುಕ್ತಿ ಮಾಡಲಾಗಿತ್ತು. ಜೊತೆಗೆ ತುಮಕೂರು ಸ್ಮಾರ್ಟ್ಸಿಟಿ ಕಂಪನಿಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಪ್ರಭಾರ ವಹಿಸಲಾಗಿತ್ತು. ಇವೆರಡೂ ಕಡೆಗಳಲ್ಲಿ ಅವರು ದಕ್ಷತೆ ಮತ್ತು ಪ್ರಾಮಾಣಿಕತೆ ಮೆರೆದು ಜನಪ್ರಿಯತೆ ಗಳಿಸಿದರು.
ಈ ಮಧ್ಯೆ ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಸೆಪ್ಟೆಂಬರ್ ತಿಂಗಳ ನಡುವಿನಲ್ಲಿ ಹಠಾತ್ತನೆ ಸರ್ಕಾರ ಆದೇಶ ಹೊರಡಿಸಿ, ಮೊದಲಿಗೆ ಸ್ಮಾರ್ಟ್ಸಿಟಿ ಕಂಪನಿಯ ಎಂ.ಡಿ. ಹುದ್ದೆಯಿಂದ ಇವರನ್ನು ಬಿಡುಗಡೆಗೊಳಿಸಿತು. ಇದು ಜನರು ಹುಬ್ಬೇರಿಸುವಂತೆ ಮಾಡಿತು. ಅದಾದ ಮರುದಿನವೇ ಇವರನ್ನು ಅಷ್ಟೇ ಅನಿರೀಕ್ಷಿತವಾಗಿ ಬೆಳಗಾವಿಯ ಗೋಕಾಕ್ಗೆ ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ) ಗಳನ್ನಾಗಿ ವರ್ಗಾಯಿಸಲಾಯಿತು.
ಸರ್ಕಾರದ ಈ ಕ್ರಮವಂತೂ ತುಮಕೂರಿನ ಪ್ರಜ್ಞಾವಂತ ನಾಗರಿಕರನ್ನು ಬೆಚ್ಚಿಬೀಳಿಸಿತು. ಸಾರ್ವಜನಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಅಸಮಾಧಾನ ಹಾಗೂ ಆಕ್ರೋಶವನ್ನು ಹೊರಹಾಕತೊಡಗಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಜನರು ಹಿಗ್ಗಾಮುಗ್ಗ ಪ್ರತಿಕ್ರಿಯಿಸುತ್ತ ಬಿಜೆಪಿ ಜನಪ್ರತಿನಿಧಿಗಳನ್ನು ಹಾಗೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ಇದರಿಂದ ಪೇಚಿಗೆ ಸಿಲುಕಿದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಸಂಸದ ಜಿ.ಎಸ್.ಬಸವರಾಜು ಅವರು ಈ ವರ್ಗಾವಣೆಯಲ್ಲಿ ತಮ್ಮ ಪಾತ್ರ ಇಲ್ಲವೆಂದೂ, ಚುನಾವಣೆ ಕಾರ್ಯಕ್ಕಾಗಿ ಅವರು ವರ್ಗವಾಗಿದ್ದಾರೆಂದೂ, ಭೂಪಾಲನ್ ಅವರನ್ನು ಪುನಃ ಪಾಲಿಕೆಗೆ ನಿಯುಕ್ತಿಗೊಳಿಸಲಾಗು ವುದೆಂದೂ ಪದೇ ಪದೇ ಸ್ಪಷ್ಟಪಡಿಸುವಂತಾಯಿತು. ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದರು. ಈ ವಿವಾದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಹ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ತಮಗೇನೂ ಗೊತ್ತಿಲ್ಲವೆಂದು ಹೇಳಿದ್ದರು. ಇವೆಲ್ಲ ಬೆಳವಣಿಗೆಗಳ ಬಳಿಕ ಇದೀಗ ಭೂಬಾಲನ್ ವಿಷಯ ಮತ್ತೆ ಚಲಾವಣೆಗೆ ಬಂದಿದೆ.
ಸ್ಮಾರ್ಟ್ಸಿಟಿಗೆ ಯಾರು?
ಬಲ್ಲ ಮೂಲಗಳ ಪ್ರಕಾರ, ಭೂಪಾಲನ್ ಅವರನ್ನು ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ನಿಯುಕ್ತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಆನಂತರ ಅವರಿಗೆ ಸ್ಮಾರ್ಟ್ಸಿಟಿ ಕಂಪನಿಯ ಎಂ.ಡಿ. ಹುದ್ದೆಯ ಪ್ರಭಾರ ವಹಿಸಲಾಗುವುದೋ? ಇಲ್ಲವೋ? ಎಂಬುದು ಮಾತ್ರ ಯಾರಿಗೂ ಸ್ಪಷ್ಟವಿಲ್ಲ. ಹಾಗಾದರೆ ಸ್ಮಾರ್ಟ್ಸಿಟಿ ಕಂಪನಿಯ ಎಂ.ಡಿ. ಆಗಿ ಯಾರನ್ನು ನೇಮಿಸಲಾಗುತ್ತಿದೆ? ಎಂಬುದು ಇನ್ನೂ ನಿಗೂಢವಾಗಿದೆ. ಚಿಕ್ಕಮಗಳೂರಿನ ಅಧಿಕಾರಿಯೊಬ್ಬರನ್ನು ನಿಯುಕ್ತಿಗೊಳಿಸಲಾಗುವುದೆಂಬ ಸುದ್ದಿಯನ್ನು ತೇಲಿಬಿಡಲಾಗಿದ್ದರೂ, ಅದಿನ್ನೂ ಖಚಿತವಾಗಿಲ್ಲ.
ಈ ಹಿಂದೆ ಸಹಕಾರ ಇಲಾಖೆಯ ಅಧಿಕಾರಿ ಆದರ್ಶಕುಮಾರ್ ಅವರನ್ನು ನೇಮಿಸಲು ಸರ್ಕಾರ ಮುಂದಾದಾಗ ಅದಕ್ಕೆ ಸಾರ್ವಜನಿಕವಾಗಿ ಪ್ರತಿರೋಧ ವ್ಯಕ್ತವಾಗಿತ್ತು. ಎಂ.ಡಿ. ಹುದ್ದೆಗೆ ಇವರು ಸ್ಮಾರ್ಟ್ಸಿಟಿ ನಿಯಮದ ಪ್ರಕಾರ ಅರ್ಹರಲ್ಲ ಎಂದು ಸ್ವತಃ ಶಾಲಿನಿ ರಜನೀಶ್ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇಷ್ಟೆಲ್ಲ ವಿವಾದದಿಂದಾಗಿ ಆ ಹುದ್ದೆ ಇನ್ನೂ ಖಾಲಿಯಾಗಿಯೇ ಇದೆ. ಭೂಪಾಲನ್ ಅವರಿಗೆ ಪಾಲಿಕೆ ಆಯುಕ್ತರ ಹುದ್ದೆ ನೀಡಿ, ಇಲ್ಲಿಗೆ ಪ್ರಭಾರ ವಹಿಸುವರೇ? ಅಥವಾ ಬೇರೊಬ್ಬರನ್ನು ಎಂ.ಡಿ. ಮಾಡುವರೇ? ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ