ದಾವಣಗೆರೆ:
ವಿದ್ಯಾರ್ಥಿಗಳು ನೈತಿಕತೆ, ಬದ್ಧತೆ ಹಾಗೂ ಕೌಶಲ್ಯ ಬೆಳೆಸಿಕೊಳ್ಳುವುದರ ಜೊತೆಗೆ ಕಠಿಣ ಪರಿಶ್ರಮದ ಹಾದಿಯಲ್ಲಿ ಮುನ್ನಡೆದರೆ, ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಬೆಂಗಳೂರಿನ ಕೆಎಸ್‍ಪಿಎಚ್ ಮತ್ತು ಐಡಿಸಿ ಲಿಮಿಟೆಡ್‍ನ ಛೇರ್ಮನ್ ರಾಘವೇಂದ್ರ ಔರಾದ್ಕರ್ ಅಭಿಪ್ರಾಯಪಟ್ಟರು.
ಸಮೀಪದ ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಕ್ಯಾಂಪಸ್‍ನ ಜ್ಞಾನಸೌಧದ ಆವರಣದಲ್ಲಿ ಬುಧವಾರ ನಡೆದ ವಿವಿಯ 11ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸಿನ ಹಾದಿ ಪರಿಶ್ರಮದಿಂದ ಕೂಡಿರುತ್ತದೆ. ಹೊರತು, ಅಡ್ಡದಾರಿಯನ್ನು ಹಿಡಿಯುವುದರಲ್ಲಿ ಇಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ನೀವು ಕಾಣುವ ಕನಸುಗಳು ನನಸಾಗಬೇಕಾದರೆ, ಸಂವಹನ ಕಲೆಯನ್ನು ರೂಢಿಸಿಕೊಳ್ಳುವುದು ಮುಖ್ಯವಾಗುತ್ತದೆ. ಏಕೆಂದರೆ, ನೀವು ಹೇಗೆ ಮಾತನಾಡುತ್ತೀರಿ ಎಂಬುದರ ಜೊತೆಗೆ ನಿಮ್ಮ ಸಕಾರಾತ್ಮಕ ನಿಲುವನ್ನು ವ್ಯಕ್ತಪಡಿಸುವುದೂ ಅತಿ ಮುಖ್ಯವಾಗಿದೆ. ಒಳ್ಳೆಯ ಸಂವಹನಕಾರನಿಗೆ ಮಾತ್ರ ಬೇರೆಯವರ ಮಾತುಗಳನ್ನು ಉತ್ತಮವಾಗಿ ಆಲಿಸುವ ಗುಣ ಇರುತ್ತದೆ. ಈ ಎಲ್ಲಾ ಸಂಶಗಳು ನಿಮ್ಮ ಕನಸನ್ನು ಸಾಕಾರಗೊಳಿಸಲು ಮುಖ್ಯವಾಗಲಿದೆ ಎಂದು ಹೇಳಿದರು.
ವಿಶ್ವಕ್ಕೆ ದಾರಿ ಮಾಡಿಕೊಡುವ ವಿದ್ಯಾ ದೇಗುಲವೇ ವಿಶ್ವವಿದ್ಯಾನಿಲಯವಾಗಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯವು ಬಹಳ ಕಡಿಮೆ ಸಮಯದಲ್ಲಿ ಸಾಮೂಹಿಕ ಪ್ರಯತ್ನದೊಂದಿಗೆ ಮುಂದೆ ನಡೆದು ಬಂದಿದೆ. ಈ ವಿವಿಯ ವ್ಯಾಪ್ತಿಯಲ್ಲಿ ಎರಡು ಸ್ನಾತಕೋತ್ತರ ಕೇಂದ್ರಗಳು ಹಾಗೂ 124 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಿವಿಯಲ್ಲಿ ಉತ್ತಮ ಕಟ್ಟಡಗಳಿದ್ದು, ಭಾಷಾ ಪ್ರಯೋಗಾಲಯಗಳನ್ನು ಸಹ ಸ್ಥಾಪಿಲಾಗಿದ್ದು, ಇದು ಪರಿಶ್ರಮದ ಸಾಧ್ಯವಾಗಿದೆ. ಒಂದು ಮನೆ ಕಟ್ಟಿಸುವಷ್ಟರಲ್ಲೇ ರಕ್ತದೊತ್ತಡಕ್ಕೆ ತುತ್ತಾಗಿಬಿಡುತ್ತೇವೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಇಷ್ಟು ದೊಡ್ಡ ಪ್ರಮಾಣದ ನಿರ್ಮಾಣ ಕಾರ್ಯದ ಹಿಂದಿನ ಪರಿಶ್ರಮ ಎಷ್ಟಿರುತತ್ದೆ ಎಂಬುದನ್ನು ಊಹಿಸಬಹುದಾಗಿದೆ. ಈ ವಿಶ್ವವಿದ್ಯಾನಿಲಯದ ಕರ್ನಾಟಕಕ್ಕೆ ದೊಡ್ಡ ಕೊಡುಗೆಯಾಗಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕಗಳ ಸಂಸ್ಕøತಿಗಳ ಸಂಗಮ ತಾಣವಾಗಿರುವ ದಾವಣಗೆರೆ, ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂಬುದಾಗಿಯೇ ಖ್ಯಾತಿ ಪಡೆದಿತ್ತು ಎಂದು ಸ್ಮರಿಸಿದರು.
ಮೂಲಭೂತ ಸೌಲಭ್ಯಗಳನ್ನು ಹಾರ್ಡ್‍ವೇರ್‍ಗೆ ಹೋಲಿಸಬಹುದು. ಈ ಮೂಲಭೂತ ಸೌಲಭ್ಯಗಳು ನಂಬಿಕಾರ್ಹವಾಗಿದ್ದರೆ ಮಾತ್ರ ಬೆಳವಣಿಗೆ ಸಾಧ್ಯವಾಗಲಿದೆ. ಆದರೆ, ಇಲ್ಲಿರುವ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಾಫ್ಟ್‍ವೇರ್ ಇದ್ದಂತೆ. ಸಾಫ್ಟ್‍ವೇರ್‍ನಲ್ಲಿ ಒಂದು ಸಣ್ಣ ತಪ್ಪಾದರೂ ಕಂಪ್ಯೂಟರ್ ಕ್ರಾಶ್ ಆಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆಯುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ನಾನು ಐದು ವರ್ಷಗಳ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥನಾಗಿದ್ದಾಗ, ಬಿ.ಎಸ್ಸಿ, ಎಂ.ಎಸ್ಸಿ, ಎಂ.ಕಾಂ ಸೇರಿದಂತೆ ವಿವಿಧ ಸ್ನಾತಕೋತ್ತರ ಪದವಿ ಪಡೆದು, ಪಿಎಸ್‍ಐ ಹುದ್ದೆಯ ಮೌಖಿಕ ಪರೀಕ್ಷೆಗೆ ಬರುವ ನಗರ ಮತ್ತು ಪಟ್ಟಣ ಪ್ರದೇಶದ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನವೇ ಇರುವುದಿಲ್ಲ. ಅವರು ಓದಿರುವ ಸಿಲಬಸ್‍ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೂ ಮರೆತು ಹೋಗಿದೆ ಎಂಬ ಉತ್ತರ ನೀಡುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಿಂದ ಬಡತನದಲ್ಲಿಯೇ ಬಂದಿರುವ ಅಭ್ಯರ್ಥಿಗಳು ಸಾಮಾನ್ಯ ಜ್ಞಾನದಲ್ಲಿ ಮುಂದಿರುತ್ತಾರೆ. ಹೆಚ್ಚಿನ ಪ್ರಮಾಣದ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಹೀಗಾಗಿ ಸಾಕಷ್ಟು ಕಂಪನಿಗಳು ಹಳ್ಳಿಗಳ ಹಿನ್ನೆಲೆ ಹೊಂದಿ, ನಗರದಲ್ಲಿ ಅಧ್ಯಯನ ಮಾಡಿರುವರನ್ನು ನೇಮಕ ಮಾಡಿಕೊಳ್ಳುತ್ತಿವೆ ಎಂದು ಅವರು ವಿಶ್ಲೇಷಿಸಿದರು.
ಯಾವುದೇ ವ್ಯಕ್ತಿ ಉನ್ನತ ಹುದ್ದೆಗೆ ಬರಬೇಕಾದರೆ ವಿಶೇಷ ಪರಿಣಿತಿ ಹೊಂದಿರುತ್ತಾನೆ. ಅದಕ್ಕಾಗಿ ಪರಿಶ್ರಮಪಟ್ಟಿರುತ್ತಾರೆ. ಹೀಗಾಗಿ ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ಅಸೂಯೆಯಿಂದ ಮಾತನಾಡುವುದನ್ನು ಬಿಡಬೇಕು. ರಾಜಕಾರಣಿಗಳಾಗುವುದೂ ಸುಮ್ಮನೆ ಅಲ್ಲ. ನಾಲ್ಕು ಜನ ಬಂದು ಏನೇನೋ ಮಾತನಾಡಿದರೆ ಸಹವಾಸ ಬೇಡ ಎಂಬುದಾಗಿ ಎದ್ದು ಹೋಗುತ್ತೇವೆ. ಅಂತಹದರಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗುವುದು ಸುಲಭದ ಮಾತಲ್ಲ ಎಂದರು.
ಕುವೆಂಪು ವಿವಿಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ದಾವಣಗೆರೆ ಹಾಗೂ ಕುವೆಂಪು ವಿಶ್ವವಿದ್ಯಾನಿಲಯ ಸಹೋದರ ವಿಶ್ವವಿದ್ಯಾನಿಲಗಳಿದ್ದಂತೆ. ಹೀಗಾಗಿ ಈ ಎರಡೂ ವಿಶ್ವವಿದ್ಯಾನಿಲಯಗಳು ಜೊತೆಯಾಗಿ ಮುಂದೆ ಸಾಗಬಹುದಾಗಿದೆ. ಕುವಂಪು ವಿಶ್ವವಿದ್ಯಾನಿಲಯ ಸಾಕಷ್ಟು ಮುಂದಿದೆ. ದೇಶದ 800 ವಿಶ್ವವಿದ್ಯಾನಿಲಯಗಳ ಪೈಕಿ 73ನೇ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದಲ್ಲಿ 43 ನೇ ಸ್ಥಾನದಲ್ಲಿದೆ. ಈ ಮಣ್ಣಿನ ಮಗನಾಗಿರುವ ನಾನು ಪರಿಶ್ರಮದಿಂದಾಗಿ ಈ ಹಂತ ತಲುಪಲು ಸಾಧ್ಯವಾಗಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಬಂದು ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ನೋಡಬೇಕಿದೆ. ಖರೀದಿ, ಹಣಕಾಸು, ಐಕ್ಯೂಎಸಿ ಅಲ್ಲಿ ಎಲ್ಲುವೂ ವ್ಯವಸ್ಥಿತ, ಪಾರದರ್ಶಕವಾಗಿದೆ. ನಾವು ಏಕೆ ಇಲ್ಲಿ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ? ಈ ಬಗ್ಗೆ ಇಲ್ಲಿನ ಕುಲಪತಿಗಳು ಪರಿಶೀಲನೆ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ದಾವಣಗೆರೆ ವಿವಿಯ ಕುಲಪತಿ ಪ್ರೊ.ಎಸ್.ವಿ ಹಲಸೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಉಕ್ತಿಯಂತೆ, ಕಾಯಕದಲ್ಲಿ ತೊಡಗಿಸಿಕೊಂಡರೆ ಮಾತ್ರ ಬೆಳವಣಿಗೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಪಾಠ-ಪ್ರವಚನವನ್ನು ಸರಿಯಾಗಿ ಮಾಡಿದರೆ ಮಾತ್ರ ಅಧ್ಯಾಪಕರು ಎತ್ತರಕ್ಕೆ ಏರಲು ಸಾಧ್ಯವಾಗಲಿದೆ. ವ್ಯಕ್ತಿಯು ಸತ್ಯ, ಶುದ್ಧ ಕಾಯಕ ಮಾಡಿದರೆ, ಆ ದೇವರು ಮೆಚ್ಚಿ, ಎತ್ತರಕ್ಕೆ ಕೊಂಡ್ಡೊಯ್ಯಲಿದ್ದಾನೆ ಎಂದರು.
ವಿದ್ಯಾರ್ಥಿಗಳು ವೇಳಾಪಟ್ಟಿ ಹಾಕಿಕೊಂಡು ಶಿಸ್ತಿನಿಂದ ಅಧ್ಯಯನ ಮಾಡಬೇಕು. ಮೊಬೈಲ್ ಬಳಕೆಯಿಂದ ಆದಷ್ಟು ದೂರ ಉಳಿಯಬೇಕು. ಮಾನವೀಯ ಮೌಲ್ಯ ಆಧರಿತ ಶಿಕ್ಷಣ ಪಡೆಯುವ ಮೂಲಕ ವಿದ್ಯಾರ್ಥಿಗಳು ಜೀವನವನ್ನು ಸರಿಯಾರಿ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ದಾವಣಗೆರೆ ವಿವಿ ಹೋರಾಟ ಸಮಿತಿಯ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿದ, ಈಗಾಗಲೇ ಸ್ಥಗಿತವಾಗಿರುವ ಯಲ್ಲಮ್ಮ ಮಿಲ್‍ನ ಜಾಗವನ್ನು ದಾವಣಗೆರೆ ವಿವಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಹೋರಾಟ ರೂಪಿಸಲಾಗುವುದು. ಈ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡಿ, ಎಲ್ಲರೂ ಚಿನ್ನದ ಪದಕ ಪಡೆಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಜೆ.ಕೆ.ರಾಜ್ಯ ಉಪಸ್ಥಿತರಿದ್ದರು. ವಿವಿಯ ಕುಲಸಚಿವ ಪ್ರೊ.ಪಿ.ಕಣ್ಣನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಶಿಶುಪಾಲ್ ವಿವಿ ಬೆಳೆದು ಬಂದ ದಾರಿ ಮತ್ತು ದಶಮಾನೋತ್ಸವದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಬಸವರಾಜ್ ಬಣಕಾರ್ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು.








