ಬೆಂಗಳೂರು
ಒಂಟಿ ಮಹಿಳೆಯ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಬರೋಬರಿ 6 ವರ್ಷಗಳ ಕಾಲ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಖತರ್ನಾಕ್ ಟೈಲರ್ ಕೊನೆಗೂ ಕೆಂಪೇಗೌಡ ನಗರ ಪೊಲೀಸರ ಅತಿಥಿಯಾಗಿದ್ದಾನೆ.
ಕೆಂಪೇಗೌಡನಗರದ ರಾಘವೇಂದ್ರ(35)ಬಂಧಿತ ಆರೋಪಿಯಾಗಿದ್ದು ಈತನ ಜೊತೆ ಒಂಟಿ ಮಹಿಳೆಯ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಈಗಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ಬಂಧಿತನಿಂದ ಚಿನ್ನಾಭರಣ ನಗದು ವಶಪಡಿಸಿಕೊಳ್ಳಲಾಗಿದೆ
ಕಳೆದ 2013ರಲ್ಲಿ ಕೆಂಪೇಗೌಡ ನಗರದ ಮನೆಯಲ್ಲಿ ಮಾನಸ ಒಂಟಿಯಾಗಿದ್ದಾಗ ಸಂಚು ರೂಪಿಸಿ ನುಗ್ಗಿ ಕಳವಿಗೆ ಯತ್ನಿಸಿದ್ದು ಪ್ರತಿರೋಧ ತೋರಿದ ಮಾನಸ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ 400 ಗ್ರಾಂ ಚಿನ್ನ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.
ಶಾಲೆಗೆ ಹೋಗಿದ್ದ ಮಗು ಮನೆಗೆ ಬಂದ ಬಳಿಕ ಮಾನಸ ಹತ್ಯೆ ಬಗ್ಗೆ ಗೊತ್ತಾಗಿತ್ತು.ಆದರೆ ಯಾವುದೇ ಸುಳಿವು ಕೂಡ ಪ್ರಕರಣದಲ್ಲಿ ಪತ್ತೆಯಾಗಿರಲಿಲ್ಲ.ಪ್ರಕರಣವನ್ನೇ ಕೈಬಿಟ್ಟಿದ್ದ ಪೊಲೀಸರಿಗೆ ಬೇರೊಂದು ಕೊಲೆ ಪ್ರಕರಣವನ್ನು ತನಿಖೆ ಮಾಡುವಾಗ ಸುಳಿವು ಸಿಕ್ಕಿತ್ತು. ನಂತರ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 6 ವರ್ಷದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಇವರಿಬ್ಬರು ರಾಜರಾಜೇಶ್ವರಿನಗರದಲ್ಲಿ ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದು ಬಂಧಿತರಾಗಿದ್ದರೂ ಮಾನಸ ಕೊಲೆ ಮಾಡಿರುವ ವಿಷಯವನ್ನು ಬಾಯ್ಬಿಟ್ಟಿರಲಿಲ್ಲ ಬೇರೊಂದು ಕೊಲೆಯ ಬೆನ್ನತ್ತಿದ ಕೆಂಪೇಗೌಡನಗರ ಪೊಲೀಸರು ತನಿಖೆ ವೇಳೆ ದೊರೆತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟ
ಸಿಲಿಂಡರ್ ಸ್ಫೋಟಗೊಂಡು ತಂದೆ-ಮಗ ಗಂಭೀರವಾಗಿ ಗಾಯಗೊಂಡ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ನ್ಯೂ ಗುಡ್ಡದಹಳ್ಳಿಯಲ್ಲಿರುವ ವೇಮನ ಶಾಲೆಯ ಹಿಂಭಾಗದ ಮನೆಯೊಂದರಲ್ಲಿ ನಡೆದಿದೆ.
ಘಟನೆ ನಡೆಯುತ್ತಿದ್ದಂತೆ ಬೆಂಕಿ ನಂದಿಸಲು ಪಕ್ಕದ ಮನೆಯವರು ಮುಂದಾಗಿದಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ಬಾಲಕ ಸತ್ಯ ಹಾಗೂ ಆತನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಬ್ಬರ ಸ್ಥಿತಿ ಗಂಭೀರವಾಗಿದೆ ಈ ಸಂಬಂಧ ಬ್ಯಾಟರಾಯನಪುರದಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ