ಸಮಾಜ ಬದಲಾವಣೆಗೆ ಮಹಿಳೆಯರ ಪಾತ್ರ ಮುಖ್ಯ

ಚಿತ್ರದುರ್ಗ:

     ದುಶ್ಚಟಗಳಿಗೆ ಬಲಿಯಾಗಿರುವ ಪುರುಷರನ್ನು ಸರಿದಾರಿಗೆ ತರುವಲ್ಲಿ ಮಹಿಳೆಯರ ಪಾತ್ರ ತುಂಬಾ ಮುಖ್ಯವಾದುದು ಎಂದು ಜನಜಾಗೃತಿ ವೇದಿಕೆ ಸದಸ್ಯೆ ರೂಪಜನಾರ್ಧನ್ ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಕರೆ ನೀಡಿದರು.

      ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನಗರ ಎ.ವಲಯ, ಜ್ಞಾನವಿಕಾಸ ಕೇಂದ್ರದ ಸಹಯೋಗದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವ್ಯಸನಮುಕ್ತ ಕುಟುಂಬ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

     ಮಹಿಳೆಯರು ಆರ್ಥಿಕವಾಗಿ ವ್ಯಸನಿಗಳಾಗಬಾರದೆಂದರೆ ಮೊದಲು ಸ್ವಾವಲಂಭಿಗಳಾಗಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಮಹಿಳೆಯರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ ಎಲ್ಲವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಕುಟುಂಬ ನಿರ್ವಹಣೆಗೆ ಹೆಚ್ಚಿನ ಗಮನ ಕೊಡಿ ಎಂದು ಹೇಳಿದರು.

      ವರ್ಷಕ್ಕೊಮ್ಮೆ ಅ.2 ರಂದು ಗಾಂಧಿಯನ್ನು ಸ್ಮರಣೆ ಮಾಡುವುದರ ಬದಲು ಅವರ ಸರಳ ಜೀವನ, ಆದರ್ಶ, ಸಿದ್ದಾಂತ, ಮೌಲ್ಯಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಪಾಲನೆ ಮಾಡಿದಾಗ ಮಾತ್ರ ನಿಜವಾಗಿಯೂ ಗಾಂಧಿಜಯಂತಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

      ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಉಮೇಶ್ ಮಾತನಾಡಿ ಸರಳತೆಗೆ ಮತ್ತೊಂದು ಹೆಸರು ಯಾವುದಾದರೂ ಇದೆ ಎನ್ನುವುದಾದರೆ ಗಾಂಧಿ ಮಾತ್ರ. ವಿದೇಶಿ ವಸ್ತುಗಳನ್ನು ವಿರೋಧಿಸುತ್ತಿದ್ದ ಮಹಾತ್ಮಗಾಂಧಿ ಸ್ವದೇಶಿ ವಸ್ತುಗಳನ್ನು ಪ್ರೀತಿಸುತ್ತಿದ್ದರು. ಖಾದಿ ಅವರ ಅಚ್ಚುಮೆಚ್ಚಿನ ವಸ್ತ್ರವಾಗಿತ್ತು ಎಂದು ನೆನಪಿಸಿಕೊಂಡರು.

     ಹಳ್ಳಿಗಳ ಅಭಿವೃದ್ದಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎನ್ನುವ ಪರಿಕಲ್ಪನೆ ಗಾಂಧಿಜಿರವರಲ್ಲಿತ್ತು. ಅವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಎಲ್ಲರೂ ಸಾಗಿದಾಗ ಮಾತ್ರ ದೇಶಭಕ್ತಿ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಳ್ಳಬಹುದು ಎಂದರು.

      ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್‍ಸಂಗಂ ಮಾತನಾಡಿ ಭಾರತೀಯರ ಮೇಲೆ ಬ್ರಿಟೀಷರ ದಬ್ಬಾಳಿಕೆ, ಅನ್ಯಾಯವನ್ನು ನೋಡಿ ಸಹಿಸಲು ಆಗದೆ ಗಾಂಧೀಜಿ ಅಹಿಂಸಾ ಮಾರ್ಗದಲ್ಲಿಯೇ ಹೋರಾಡಿ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿರುವುದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

      ದುಶ್ಚಟ ತ್ಯಜಿಸಿದ ಗಾಂಧಿಜಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಹೋರಾಟದಲ್ಲಿ ಸಾಕಷ್ಟು ನೋವು-ಹಿಂಸೆ ಅವಮಾನಗಳನ್ನು ಅನುಭವಿಸಿದ್ದಾರೆ. ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸುವುದಕ್ಕಾಗಿಯೂ ಗಾಂಧಿ ಹೋರಾಡಿದರು.

      ಮದ್ಯಪಾನಕ್ಕೆ ಬಲಿಯಾಗಿರುವ ಪುರುಷನನ್ನು ದುಶ್ಚಟದಿಂದ ಹೊರ ತರುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಮದ್ಯವರ್ಜನ ಶಿಬಿರದಿಂದ ಜಿಲ್ಲೆಯಲ್ಲಿ 1300 ಪುರುಷರನ್ನು ಮದ್ಯವ್ಯಸನದಿಂದ ಹೊರತರಲಾಗಿದೆ. ಗಂಡಸರು ಕೆಟ್ಟ ದಾರಿಯಲ್ಲಿ ಹೋಗದಂತೆ ನೋಡಿಕೊಳ್ಳುವುದು ಮಹಿಳೆಯರ ಕೈಯಲ್ಲಿದೆ ಎಂದು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಕಿವಿಮಾತು ಹೇಳಿದರು.

      ಡಿ.ಡಿ.ಆರ್.ಸಿ.ನೋಡಲ್ ಅಧಿಕಾರಿ ಮಂಜುನಾಥ್‍ನಾಡರ್ ಮಾತನಾಡುತ್ತ ಪುರುಷರು ಮದ್ಯಪಾನಕ್ಕೆ ಬಲಿಯಾಗುವುದರಿಂದ ಕುಟುಂಬಗಳಲ್ಲಿ ಕಲಹಗಳು ಉಂಟಾಗಿ ಮಹಿಳೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಅನುಭವಿಸುವಂತಾಗಿದೆ. ಇದರೆ ಜೊತೆ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆ ಮನೆಬಿಟ್ಟು ಹೋಗುವುದು, ಆತ್ಮಹತ್ಯೆಗೆ ಶರಣಾಗುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಸಂಸಾರ ನೆಮ್ಮದಿಯಿಂದ ಇರಬೇಕಾದರೆ ಮಹಿಳೆಯ ಪಾತ್ರ ಮುಖ್ಯ ಎಂದರು.

        ಮದ್ಯಸೇವಿಸಿ ವಾಹನಗಳನ್ನು ಚಾಲನೆ ಮಾಡುವುದರಿಂದ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುವುದಲ್ಲದೆ. ಅನೇಕ ಸಂದರ್ಭಗಳಲ್ಲಿ ಕೈಕಾಲುಗಳನ್ನು ಕಳೆದುಕೊಂಡು ಜೀವನವಿಡಿ ಜೀವಂತ ಶವವಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದ ದುಶ್ಚಟಗಳಿಗೆ ಬಲಿಯಾಗುವ ಗಂಡ-ಮಕ್ಕಳಿಗೆ ಮಹಿಳೆಯರು ಬುದ್ದಿ ಹೇಳಿ ಹಂತ ಹಂತವಾಗಿ ಸರಿದಾರಿಗೆ ತರಬೇಕು ಎಂದು ತಿಳಿಸಿದರು.
ಜನಜಾಗೃತಿ ವೇದಿಕೆ ಸದಸ್ಯ ಕೆ.ಆರ್.ಮಂಜುನಾಥ್, ಯೋಗ ಶಿಕ್ಷಕ ಹಾಲಸಿದ್ದಪ್ಪ, ಗ್ರಾಮೀಣ ಬ್ಯಾಂಕ್ ನಿವೃತ್ತ ಮ್ಯಾನೇಜರ್ ರವಿಶಂಕರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ವಿದ್ಯಾ, ಮೇಲ್ಪಿಚಾರಕ ಗಣೇಶ್ ಬಾನಪ್ಪನವರ್, ಶಿವಲೀಲ, ನಗರಸಭೆ ಸದಸ್ಯೆ ಶಕೀಲಾಭಾನು, ವಂದೇಮಾತರಂ ಜಾಗೃತಿ ವೇದಿಕೆ ಮಹಿಳಾಧ್ಯಕ್ಷೆ ವೀಣಗೌರಣ್ಣ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link