ಒಂದೇ ವಾರದಲ್ಲಿ ಬಿಎಚ್ ರಸ್ತೆಗೆ ಒಲಿದ ಟಾರ್ ಭಾಗ್ಯ ..!
ತುಮಕೂರು

ವಿಶೇಷ ವರದಿ:ರಾಕೇಶ್.ವಿ.
ಕೃಷಿ ಸಮ್ಮಾನ್ ಯೋಜನೆಯ 2ನೆ ಹಂತಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಪ್ರಮುಖ ರಸ್ತೆಗಳು ಸುಂದರೀಕರಣಗೊಳ್ಳುತ್ತಿವೆ. ಬಿಎಚ್ ರಸ್ತೆಗೆ ತಾತ್ಕಾಲಿಕ ಟಾರ್ ಭಾಗ್ಯ ದೊರಕಿದೆ.
ಸ್ಮಾರ್ಟ್ ಸಿಟಿಯ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಬಿಎಚ್ ರಸ್ತೆಯನ್ನೂ ತೆಗೆದುಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಯುಟಿಲಿಟಿ ಚೇಂಬರ್‍ಗಳನ್ನು ಮಾಡಲಾಗಿತ್ತು. ಈ ಚೇಂಬರ್‍ಗಳ ಮೂಲಕ ವಿವಿಧ ಕೇಬಲ್‍ಗಳನ್ನು ಸಂಪರ್ಕ ಕಲ್ಪಿಸಲು ಯೋಜಿಸಲಾಗಿತ್ತು. ಇದರ ನಡುವೆ ರಸ್ತೆಯ ಪಕ್ಕದಲ್ಲಿ ನೂತನ ಚರಂಡಿ ವ್ಯವಸ್ಥೆ ಕಾಮಗಾರಿ ಮಾಡಲಾಗುತ್ತಿತ್ತು. ಈ ಕಾರ್ಯ ಇನ್ನೂ ನಡೆಯುತ್ತಿರುವಾಗಲೆ ಪಕ್ಕದಲ್ಲಿ ರಸ್ತೆಗೆ ಟಾರ್ ಹಾಕುವ ಕೆಲಸ ನಡೆಯುತ್ತಿರುವುದು ಗೊಂದಲಮಯವಾಗಿದೆ.
ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಬರುವ ಧೂಳಿನಿಂದ ಅದೆಷ್ಟೋ ಜನರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಕೆಮ್ಮು, ಅಸ್ತಮಾ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದ್ದವು. ಇದೀಗ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಹಗಲು ರಾತ್ರಿ ಎನ್ನದೆ ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಹಾಗಾದರೆ ಕಾಮಗಾರಿಗಳು ವೇಗ ಪಡೆದುಕೊಳ್ಳಲು ಇಲ್ಲಿಗೆ ಪ್ರಧಾನಿಯವರೆ ಬರಬೇಕೆ..?
ರಾಧಾಕೃಷ್ಣ ರಸ್ತೆ ಸ್ಥಿತಿ ಗತಿ..?
ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದ ಪಕ್ಕದಲ್ಲಿನ ರಾಧಾಕೃಷ್ಣ ರಸ್ತೆಯನ್ನು ಸುಮಾರು ತಿಂಗಳುಗಳಿಂದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಈ ರಸ್ತೆಯೂ ಹಿಂದೆಯಿಂದಲೂ ಹಲವು ತಗ್ಗುಗುಂಡಿಗಳಿಂದ ಕೂಡಿದ್ದು, ಅದನ್ನು ಸರಿಪಡಿಸುವ ಜೊತೆಗೆ ಅಗಲೀಕರಣ ಮಾಡಲಾಗುತ್ತಿದೆ. ಇದರ ಭಾಗವಾಗಿ ಮೈದಾನದ ಕಾಂಪೌಂಡ್ ಗೋಡೆಗೆ ಅಂಟಿಕೊಂಡಂತೆ ಒಂದು ಕಡೆಯ ರಸ್ತೆ ಸಿದ್ಧಗೊಂಡಿದ್ದು, ಇನ್ನೊಂದು ಕಡೆಯ ರಸ್ತೆ ಹಾಗೇ ಉಳಿದಿದೆ.
ತಾತ್ಕಾಲಿಕವಾಗಿ ಸಿದ್ದಗೊಳ್ಳುವುದೇ ರಸ್ತೆ..?
ಪ್ರಧಾನಿಯವರ ಕಾರ್ಯಕ್ರಮ ಎಂದಾಗ ರಾಜ್ಯದ ಬಹುತೇಖ ಸಚಿವರು, ವಿವಿಧ ಗಣ್ಯರು ಸಮಾರಂಭಕ್ಕೆ ಪಾಲ್ಗೊಳ್ಳಲು ಬರುವುದು ಸರ್ವೇ ಸಾಮಾನ್ಯ, ಕಾರ್ಯಕ್ರಮಕ್ಕೆ ಬರುವ ಗಣ್ಯರು ಮೈದಾನದ ಪ್ರವೇಶಕ್ಕೆ ರಾಧಾಕೃಷ್ಣ ರಸ್ತೆ ಮೂಲಕ ಅನುವು ಮಾಡಲಾಗಿದೆ.
ಈ ರಸ್ತೆಯಲ್ಲಿ ಹೋಗುವಾಗ ಧೂಳು ಏಳಬಾರದು ಎಂಬ ಕಾರಣಕ್ಕೆ ಹಾಗೂ ಓಡಾಡಲು ಅನುಕೂಲವಾಗುವ ರೀತಿಯಲ್ಲಿ ರಸ್ತೆ ಸಿದ್ದಪಡಿಸಲಾಗಿದೆ. ಟಾರ್ ಹಾಕುವ ಸಿದ್ದತೆಯೂ ನಡೆದಿದೆ. ವರ್ಷದಿಂದಲೂ ಈ ರಸ್ತೆಯಲ್ಲಿ ಜೀವ ಹಿಡಿದು ಓಡಾಡುತ್ತಿದ್ದ, ನರಕಯಾತನೆ ಅನುಭವಿಸುತ್ತಿದ್ದ ನಾಗರಿಕರು ಈ ತರಾತುರಿಯನ್ನು ನೋಡಿ ನಗುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿಯವರು ಐದಾರು ತಿಂಗಳ ಹಿಂದೆಯೇ ಬರಬಾರದಿತ್ತೇ..? ರಸ್ತೆ ಸ್ವಚ್ಛಗೊಳ್ಳುತ್ತಿತ್ತು ಎನ್ನುತ್ತಿದ್ದಾರೆ.
5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಟವಾಡಿಯಿಂದ ಪ್ರಾರಂಭವಾಗಿ ಗುಬ್ಬಿ ಗೇಟ್‍ನ ಮುಕ್ತಾಯದವರೆಗೂ ರಸ್ತೆಗೆ ಟಾರ್ ಹಾಕಲಾಗುತ್ತಿದೆ. ಮೋದಿಯವರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಬಟವಾಡಿಯಿಂದ ಭದ್ರಮ್ಮ ವೃತ್ತದ ವರೆಗೆ ರಸ್ತೆಗೆ ಟಾರ್ ಹಾಕಲಾಗುತ್ತಿದೆ. ಜೊತೆಗೆ ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡಲಾಗುತ್ತಿದೆ. ಇದಕ್ಕೆ 5 ಕೋಟಿ ರೂ ವೆಚ್ಚ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.ರಸ್ತೆ ಪಕ್ಕದ ಕಾಮಗಾರಿ ಸ್ಮಾರ್ಟ್ ಸಿಟಿಯದ್ದು.
ರಸ್ತೆ ಪಕ್ಕದಲ್ಲಿ ಡಕ್ಟಿಂಗ್ ಹಾಗೂ ಯುಜಿಡಿ ಕಾಮಗಾರಿಗಳು ಸ್ಮಾರ್ಟ್ ಸಿಟಿಗೆ ಸೇರಿದ್ದು, ಶಿವಕುಮಾರಸ್ವಾಮಿ ವೃತ್ತದಿಂದ ಭದ್ರಮ್ಮ ವೃತ್ತದವರೆಗೆ ಬಹುತೇಕ ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಣ್ಣನ್ನು ಮುಚ್ಚಿ ನೆಲಸಮ ಮಾಡಲಾಗಿದೆ. ಮೋದಿಯವರ ಕಾರ್ಯಕ್ರಮ ಮುಗಿದ ನಂತರ ಉಳಿದ ಕಾಮಗಾರಿಯನ್ನು ಮಾಡಲಾಗುತ್ತದೆ ಎಂದು ಸ್ಮಾರ್ಟ್ ಸಿಟಿ ಮೂಲಗಳು ತಿಳಿಸಿವೆ.
ಬಿಎಚ್ ರಸ್ತೆ ಕಾಮಗಾರಿಯಲ್ಲಿ ಪಾಲುಗಾರಿಕೆ
ಬಿಎಚ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಯಲ್ಲಿ ಸ್ಮಾರ್ಟ್ ಸಿಟಿ ಹಾಗೂ ರಾಷ್ಟ್ರೀಯ ಪ್ರಾಧಿಕಾರಕ್ಕೆ ಪಾಲುಗಾರಿಕೆ ಇದ್ದು, ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಾಧಿಕಾರದಿಂದ ಮೊದಲು ರಸ್ತೆಗೆ ಟಾರ್ ಹಾಕಲಾಗುತ್ತಿದೆ. ಸ್ಮಾರ್ಟ್ ಸಿಟಿಯಿಂದ ರಸ್ತೆ ಪಕ್ಕದಲ್ಲಿ ಮಾಡಲಾದ ಕಾಮಗಾರಿಯ ಬಳಿ ಸ್ಮಾರ್ಟ್ ಸಿಟಿಯಿಂದ ಟಾರ್ ಹಾಕಿ ಅದನ್ನು ಸಮ ಮಾಡಲಾಗುತ್ತದೆ. ಅದಾದ ಬಳಿಕ ಕಾಮಗಾರಿಯಲ್ಲಿ ರಸ್ತೆಗೆ ಟಾರ್ ಹಾಕಲು ಸ್ಮಾರ್ಟ್‍ಸಿಟಿಗೆ ನೀಡಿz್ದÉೀ ಆದಲ್ಲಿ ಅದನ್ನು ಸ್ಮಾರ್ಟ್ ಸಿಟಿಯಿಂದ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಸ್ಮಾರ್ಟ್ ಕಾಮಗಾರಿಗಳಿಂದ ಸರ್ವೀಸ್ ರಸ್ತೆ ಹಾಳು
ಸ್ಮಾರ್ಟ್ ಸಿಟಿಯ ಚೇಂಬರ್ ಮಾಡುವ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಲಾಗಿದ್ದ ಸರ್ವೀಸ್ ರಸ್ತೆಯು ಹಾಳಾಗಿದ್ದು, ಅದನ್ನು ಮತ್ತೊಮ್ಮೆ ನವೀಕರಣ ಮಾಡಬೇಕಿದೆ. ಕಳೆದ ಎರಡು ವರ್ಷ ಹಿಂದೆಯಷ್ಟೇ ಸರ್ವೀಸ್ ರಸ್ತೆ ಮಾಡಲಾಗಿದ್ದು, ಮತ್ತೊಮ್ಮೆ ಅದೇ ಕೆಲಸ ಸ್ಮಾರ್ಟ್ ಸಿಟಿಯಿಂದ ಮಾಡಬೇಕಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾದರೆ ಸಾರ್ವಜನಿಕರ ಹಣ ಪೆÇೀಲಾಗುವುದಿಲ್ಲವೆ ಎಂಬ ಮಾತು ಕೇಳಿಬರುತ್ತಿವೆ.
ಭದ್ರತೆ ಹಿನ್ನೆಲೆ ತಡೆಗೋಡೆ ನಿರ್ಮಾಣ
ನಗರಕ್ಕೆ ಭೇಟಿ ನೀಡಲಿರುವ ಮೋದಿಯವರು ಮಠಕ್ಕೆ ತೆರಳಿ ಶ್ರೀಗಳ ಗದ್ದುಗೆ ದರ್ಶನ ಮಾಡಿಕೊಂಡು, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ನಂತರ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ನಗರದಾದ್ಯಂತ ಭದ್ರತೆ ವಿಚಾರವಾಗಿ ಬಿದಿರಿನ ಕಟ್ಟಿಗೆಗಳಿಂದ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ಪ್ರಧಾನಿಗಳ ಆಗಮನದಿಂದ ನಗರವು ಸುಂದರವಾಗಿ ಕಂಗೊಳಿಸುವಂತೆ ( ಪ್ರಧಾನಿಯವರು ಹೋಗುವ ಮಾರ್ಗ ) ಮಾಡಲಾಗುತ್ತಿದೆ. ಇದೇ ಕಾಳಜಿ ಇತರೆ ದಿನಗಳಲ್ಲಿಯೂ ಇದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಗಮನ ಹರಿಸಿದಾಗ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅರ್ಥ ಬರುತ್ತದೆಯಲ್ಲವೆ ಎಂಬುದು ಹಲವರ ಆಶಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








