ತುಮಕೂರು
ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ನಾಯಕರೇ ಕಾರಣ ಹೊರತು, ಕಾರ್ಯಕರ್ತರಲ್ಲ, ನಾಯಕರ ನಡುವಿನ ಸಮಸ್ಯೆಯನ್ನು ಮೊದಲು ನಿವಾರಣೆ ಮಾಡಿ, ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ಅವರಿಗೆ ಸೂಚಿಸಿ ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರು ಕೆಪಿಸಿಸಿಯ ಸತ್ಯ ಶೋಧನಾ ಸಮಿತಿ ನಾಯಕರೆದುರು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸೋಲಿಗೆ ಕಾರಣ ಹುಡುಕಲು ಬಂದಿದ್ದ ಸಮಿತಿ ನಾಯಕರಿಗೆ ಈ ಆಕ್ರೋಶ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿಗೆ ಕನ್ನಡಿ ಹಿಡಿದಂತೆ ಕಂಡುಬಂದಿತು. ಇಲ್ಲಿ ಒಬ್ಬೊಬ್ಬ ನಾಯಕರದ್ದೂ ಪ್ರತ್ಯೇಕ ಗುಂಪುಗಳಿವೆ, ಒಬ್ಬರನ್ನೊಬ್ಬರು ಸೋಲಿಸುವ ನಾಯಕರ ಮನಸ್ಥಿತಿ, ಗುಂಪುಗಾರಿಕೆಯಿಂದಲೇ ಪಕ್ಷ ಈ ಸ್ಥಿತಿಗೆ ತಲುಪಲು ಕಾರಣ ಎಂದು ಗುಂಪಿನಲ್ಲಿ ಕೆಲವರು ಕೂಗಿ ಹೇಳಿದರು.
2018ರ ವಿಧಾನಸಭಾ ಚುನಾವಣೆ ಹಾಗೂ 2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ತಿಳಿದು ವರದಿ ಸಲ್ಲಿಸಲು ಕೆಪಿಸಿಸಿ ನೇಮಕ ಮಾಡಿದ್ದ ಸತ್ಯ ಶೋಧನಾ ಸಮಿತಿ ನಾಯಕರು ಕಚೇರಿಗೆ ಬಂದಾಗ ಕಾರ್ಯಕರ್ತರು ಪಕ್ಷದಲ್ಲಿರುವ ಗೊಂದಲ ನಿವಾರಿಸುವ, ಆತ್ಮವಿಶ್ವಾಸ ತುಂಬುವ ಪ್ರಯತ್ನದ ಮಾತುಗಳಾಡುತ್ತಾರೆ ಎಂದು ನಿರೀಕ್ಷೆ ಮಾಡಿದಂತಿತ್ತು. ಆದರೆ ಅಂತಹ ಲಕ್ಷಣ ಕಾಣದಿದ್ದಾಗ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಯಿತು.
ಸತ್ಯ ಶೋಧನಾ ಸಮಿತಿ ಸಂಚಾಲಕ ಬಸವರಾಜ ರಾಯರೆಡ್ಡಿ ಅವರು ಕೆಪಿಸಿಸಿ ಉಪಾಧ್ಯಕ್ಷ ವಿ ಆರ್ ಸುದರ್ಶನ್, ಮಾಜಿ ಸಂಸದ ಧ್ರುವಕುಮಾರ್ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು, ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ಕೊನೆ ಹಂತವಾಗಿ ತುಮಕೂರು ಜಿಲ್ಲೆಗೆ ಬಂದಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿರಾ, ಪಾವಗಡ ತಾಲ್ಲೂಕಿನ ಅಭಿಪ್ರಾಯ ಸ್ವೀಕರಿಸಿ, ಉಳಿದ 9 ತಾಲ್ಲೂಕುಗಳ ಮುಖಂಡರು, ಕಾರ್ಯಕರ್ತರ ಸಲಹೆ, ಸಮಸ್ಯೆ, ಅಭಿಪ್ರಾಯ ಸ್ವೀಕರಿಸಲು ಬಂದಿದ್ದರು.
ಬಸವರಾಜ ರಾಯರೆಡ್ಡಿ ಮಾತು ಆರಂಭಿಸಿ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ ಪ್ರಸ್ತಾಪಿಸುತ್ತಾ, ದೇಶಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ಹೊಸದಾಗಿ ದೇಶ ಕಟ್ಟಲು ಪಕ್ಷದ ನಾಯಕರು ತ್ಯಾಗ ಮಾಡಿದರು. ಒಂದು ಬೆಂಕಿ ಪೊಟ್ಟಣದ ಕಾರ್ಖಾನೆಯೂ ಆಗ ದೇಶದಲ್ಲಿ ಇರಲಿಲ್ಲ ಅಂತಹ ಸಂದರ್ಭದಲ್ಲಿ ಬೃಹತ್ ಕೈಗಾರಿಕೆಗಳು, ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನಿರುದ್ಯೋಗ ನಿವಾರಣೆಗೆ ಉದ್ಯೋಗ ಸೃಷ್ಟಿ ಮಾಡಿ, ನಿರಾವರಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಮಾದರಿ ದೇಶವಾಗಿ ಬೆಳೆಯಲು ಬೂನಾದಿಯಾಗಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಆದರೆ ಕಾಂಗ್ರೆಸ್ ಕೊಡಿಗೆ ಗೊತ್ತಿಲ್ಲದ ಬಿಜೆಪಿಯವರು ಅಧಿಕಾರದ ದುರಾಸೆ, ಹಣದ ಅಹಮ್ಮಿನಿಂದ ಕಾಂಗ್ರೆಸನ್ನು ಟೀಕೆ ಮಾಡುತ್ತಾರೆ, ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರಬಹುದು, ಆದರೆ ಪಕ್ಷ ಜನಪ್ರಿಯತೆ ಕಳೆದುಕೊಂಡಿಲ್ಲ, ಕಾರ್ಯಕರ್ತರನ್ನು ಕಳೆದುಕೊಂಡಿಲ್ಲ ಎಂದು ರಾಯರೆಡ್ಡಿ ಹೇಳಿದರು.
ಕಾಂಗ್ರೆಸ್ ಸಾಧನೆ ಹೇಳುತ್ತಾ, ಬಿಜೆಪಿಯನ್ನು ಟೀಕಿಸುತ್ತಾ ಬಹಳ ಹೊತ್ತು ಭಾಷಣ ಮಾಡಿದ ಬಸವರಾಜ ರಾಯರೆಡ್ಡಿ ಮಾತಿನಿಂದ ತಾಳ್ಮೆ ಕಳೆದುಕೊಂಡ ಮುಖಂಡರು, ಕಾರ್ಯಕರ್ತರು ಭಾಷಣ ಸಾಕುಮಾಡಿ ಎಂದು ಕೂಗಾಡಿದರು. ಆಗ ಗೊಂದಲ ಉಂಟಾಗಿ ರಾಯರೆಡ್ಡಿ ಭಾಷಣ ನಿಲ್ಲಿಸಿ, ತಾಳ್ಮೆಯಿಂದ ಇರಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು, ಸಭೆ ನಿಯಂತ್ರಣಕ್ಕ ಬಾರದಿದ್ದಾಗ, ಸಿಟ್ಟಿಗೆದ್ದ ಅವರು, ಇಂತಹ ಕೂಗಾಟಕ್ಕೆಲ್ಲಾ ತಾವು ಕೇರ್ ಮಾಡುವುದಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸಿನ ಇತಿಹಾಸ ನಮಗೂ ಗೊತ್ತು, ಕಾಂಗ್ರೆಸ್ ಸಮಸ್ಯೆಗಳ ಬಗ್ಗೆ ಮಾತನಾಡಿ, ಈ ಜಿಲ್ಲೆ ನಾಯಕರಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲ, ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲಿಲ್ಲ. ಚುನಾವಣೆಯಲ್ಲಿ ಪಕ್ಷ ಸೋಲಲು ನಾಯಕರು ಕಾರಣ ಹೊರತು, ಕಾರ್ಯಕರ್ತರು, ಮುಖಂಡರು ಕಾರಣವಲ್ಲ, ಇದನ್ನೇ ಕೆಪಿಸಿಸಿಗೆ ವರದಿ ಮಾಡಿ ಎಂದು ಕೆಲವರು ಕೂಗಿ ಹೇಳುತ್ತಿದ್ದರು. ಗಲಾಟೆಯಲ್ಲಿ ಯಾರ ಮಾತು ಯಾರಿಗೂ ಕೇಳಿಸುವ ಸ್ಥಿತಿ ಇರಲಿಲ್ಲ.
ವೇದಿಕೆ ಮೇಲಿದ್ದ ಮುಖಂಡರು ಹಲವು ಬಾರಿ ಮನವಿ ಮಾಡಿಕೊಂಡ ನಂತರ ಸಭೆ ಶಾಂತವಾಯಿತು. ನಂತರ ರಾಯರೆಡ್ಡಿ ಮಾತು ಮುಂದುವರೆಸಿ, ಏನೇ ಅಭಿಪ್ರಾಯಗಳಿದ್ದರೂ ಲಿಖಿತ ರೂಪದಲ್ಲಿ ಮೂರು ನಾಲ್ಕು ದಿನಗಳಲ್ಲಿ ಕಳುಹಿಸಿ, ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ವಿ ಆರ್ ಸುದರ್ಶನ್ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವೇನು, ಆಗಿರುವ ಲೋಪವೇನು ಎಂಬ ಮಾಹಿತಿ, ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಅದರ ನಿವಾರಣೆ ಪ್ರಯತ್ನ ಮಾಡಲಾಗುವುದು. ಲೋಪ ಸರಿಪಡಿಸಲು, ಪಕ್ಷದ ಪರಂಪರೆ ಉಳಿಸಲು, ಪಕ್ಷ ಜನರ ಧ್ವನಿಯಾಗಲು ಸಲಹೆಗಳನ್ನೂ ನೀಡಬಹುದು ಎಂದು ಹೇಳಿದರು
ಮಾಜಿ ಸಂಸದ ಧ್ರುವನಾರಾಯಣ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಿಂದೆಂದೂ ಕಾಣದ ಸೋಲು ಕಂಡಿದೆ. ಸೋಲಿಗೆ ಕಾರಣವೇನು ಎಂಬುದರ ವರದಿ ಸಿದ್ಧಪಡಿಸಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕೆಪಿಸಿಸಿಗೆ ಸಲ್ಲಿಸುವುದಾಗಿ ಹೇಳಿದರು.
ಹಿಂದಿನ ಸಂಸದ ಎಸ್ ಪಿ ಮುದ್ದಹನುಮೇಗೌಡರು ಒಳ್ಳೆ ಕೆಲಸ ಮಾಡಿದ್ದರು, ಅಧಿವೇಶನದಲ್ಲೂ ಒಳ್ಳೆಯ ವಿಷಯಗಳನ್ನು ಪ್ರಸ್ತಾಪಿಸಿ ಉತ್ತಮ ನಾಯಕರಾಗಿದ್ದರು, ಹಾಲಿ ಸಂಸದರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕೆಂದು ತಾವು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಲ್ಲಿ ಮನವಿ ಮಾಡಿದ್ದರೂ ಪಕ್ಷ ತೀರ್ಮಾನ ಮಾಡಿದಂತೆ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲು ಸಾಧ್ಯವಾಗಲಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ, ಮಾಜಿ ಶಾಸಕರಾದ ಷಫಿ ಅಹಮದ್, ಡಾ. ರಫಿಕ್ ಅಹಮದ್, ಕೆಪಿಸಿಸಿ ವಕ್ತಾರ ಮುರಳಿಧರ ಹಾಲಪ್ಪ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್ ರಾಜೇಂದ್ರ, ಮುಖಂಡರಾದ ಶಿವಮೂರ್ತಿ, ಗೀತಾ ರುದ್ರೇಶ್, ಟಿ ಬಿ ಮಲ್ಲೇಶ್ ಮೊದಲಾದವರು ಭಾಗವಹಿಸಿದ್ದರು.ನಂತರ ಪ್ರತ್ಯೇಕವಾಗಿ ತಾಲ್ಲೂಕುವಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಒಳಗೊಂಡಂತೆ ಮುಖಂಡರ ಅಭಿಪ್ರಾಯಗಳನ್ನು ಸತ್ಯ ಶೋಧನಾ ಸಮಿತಿ ನಾಯಕರು ಪಡೆದುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
