ಬೆಂಗಳೂರು
ನಿರುದ್ಯೋಗಿ ಯುವಕ-ಯುವತಿಯರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ತರಲು ರಾಜ್ಯ ಸರ್ಕಾರ ರೂಪಿಸಿರುವ `ಐರಾವತ ಯೋಜನೆಯು ಪರಿಣಾಮಕಾರಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಉಬರ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ, ಐರಾವತ ಯೋಜನೆಯ ಫಲಾನುಭವಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ ಸಚಿವರು ಐರಾವತ ಯೋಜನೆಯು ಒಂದು ವಿಶಿಷ್ಟ-ವಿಭಿನ್ನ ಪ್ರಯತ್ನವಾಗಿದೆ ಎಂದರು.
ಪರಿಶಿಷ್ಟಜಾತಿ ವರ್ಗಗಳ(ಎಸ್‍ಸಿಎಸ್‍ಟಿ) ನಿರುದ್ಯೋಗಿಗಳ ಬದುಕು ಹಸನಾಗಿಸಲು ಸಮಾಜ ಕಲ್ಯಾಣ ಇಲಾಖೆಯು ನಗರಗಳಲ್ಲಿ ಮನೆ ಬಾಗಿಲಿಗೆ ಟ್ಯಾಕ್ಸಿ ಸೌಲಭ್ಯ ಒದಗಿಸುತ್ತಿರುವ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಹತ್ವಯುತ ಐರಾವತ ಯೋಜನೆಯನ್ನು ರೂಪಿಸಿದೆ ಎಂದು ತಿಳಿಸಿದರು.
5ಲಕ್ಷ ಸಹಾಯಧನ
ಯುವ ಜನಾಂಗ ಇಂತಹ ಅವಕಾಶಗಳ ಮೂಲಕ ತಮ್ಮ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆಯಡಿ ಗರಿಷ್ಠ 5ಲಕ್ಷ ರೂ.ಸಹಾಯಧನ ನೀಡಲಾಗುವುದು.
ಮೊದಲ ಹಂತವಾಗಿ ಮುಖ್ಯನಗರ ಪ್ರದೇಶಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರಗಳಲ್ಲಿ ಈ ಯೋಜನೆಯನ್ನು ಉಬರ್ ಸಂಸ್ಥೆ ಸಹಯೋಗದೊಂದಿಗೆ ಆರಂಭಿಸಲಾಗಿದೆ.
ಕ್ರಮೇಣ ಉಬರ್ ಹಾಗೂ ಇನ್ನಿತರ ಟ್ಯಾಕ್ಸಿ ಕಂಪೆನಿಗಳ ಸಹಯೋಗದೊಂದಿಗೆ ಇನ್ನಿತರ ನಗರಗಳಿಗೂ `ಐರಾವತ’ ಸೇವೆಯನ್ನು ವಿಸ್ತರಿಸಲಾಗವುದು ಎಂದರು.ಉದ್ಯೋಗ ಭರವಸೆ ನೀಡುವ ಅವಕಾಶ ಈ ಯೋಜನೆಯಡಿ ರೂಪಿಸಲಾಗಿದ್ದು, ಕ್ಯಾಬ್ ಕೊಳ್ಳಲು ಸಹಾಯಧನ ಪಡೆಯುವ ಮೂಲಕ ನಿರುದ್ಯೋಗಿಗಳು ತಾವೇ ಮಾಲಕರಾಗುವ ಉತ್ತಮ ಅವಕಾಶಗಳನ್ನು ಹೊಂದಿದೆ. ಈ ಯೋಜನೆಯಿಂದ ಎಸ್ಸಿ-ಎಸ್ಟಿ ನಿರುದ್ಯೋಗಿಗಳು ಸಾಮಾಜಿಕವಾಗಿ ಸದೃಢ ಹಾಗೂ ಆರ್ಥಿಕವಾಗಿಯೂ ಚೈತನ್ಯ ಹೊಂದಲಿದ್ದಾರೆ ಎಂದು ತಿಳಿಸಿದರು.
175ಕೋಟಿ ಮೀಸಲು
ಎಸ್ಸಿಗಳಿಗೆ 3,500 ವಾಹನಗಳನ್ನು ನೀಡಲಿದ್ದು, 175ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ, ಎಸ್ಟಿಗಳಿಗೆ 1 ಸಾವಿರ ಟ್ಯಾಕ್ಸಿ ಕೊಳ್ಳಲು 50 ಕೋಟಿ ರೂ.ಅನುದಾನ ತೆಗೆದಿರಿಸಲಾಗಿದೆ. ಇಲಾಖೆ ಮೂಲಕ ಈ ವರ್ಷ 4,500ಮಂದಿಗೆ ಟ್ಯಾಕ್ಸಿ ಕೊಳ್ಳಲು 225 ಕೋಟಿ ರೂ. ಸಹಾಯಧನ ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ನಾರಾಯಣ ಸ್ವಾಮಿ, ಶ್ರೀನಿವಾಸ್, ರಾಘುವೇಂದ್ರ, ಉಬರ್ ಕಂಪೆನಿಯ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕಿ ಕನಕಾ ಮಲ್ಹೋತ್ರಾ ಸೇರಿದಂತೆ ಪ್ರಮುಖರಿದ್ದರು.