ಹರಪನಹಳ್ಳಿ:
ಮಾಜಿ ಶಾಸಕ, ದಿವಂಗತ ಎಂ.ಪಿ.ರವೀಂದ್ರ ಅವರ 50ನೇ ಜನ್ಮ ದಿನವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಎಂ.ಪಿ.ರವೀಂದ್ರ ಅಭಿಮಾನಿ ಬಳಗದಿಂದ ಏ.5ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ತಿಳಿಸಿದರು.
ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಸಂಜೆ 5ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಎಂ.ಪಿ.ರವೀಂದ್ರ ಅವರು ನಡೆದುಬಂದ ಹಾದಿ, ಅವರ ವಿಚಾರಧಾರೆಗಳ ಕುರಿತು ಪರಿಣತರಿಂದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಪಟ್ಟಣದ ಆಚಾರ ಬಡಾವಣೆಯ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಅಂದು ಬೆಳಗ್ಗೆ ಹಡಗಲಿಯಲ್ಲಿರುವ ಎಂ.ಪಿ.ರವೀಂದ್ರ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 2.30ಕ್ಕೆ ಐಬಿ ವೃತ್ತದಿಂದ ಎಡಿಬಿ ಕಾಲೇಜಿನವರೆಗೆ ಜನಪದ ಕಲಾತಂಡಗಳ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಎಂ.ಪಿ.ರವೀಂದ್ರರ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಇದೊಂದು ರಾಜಕೀಯೇತರ ಕಾರ್ಯಕ್ರಮವಾಗಿದೆ. ಚುನಾವಣೆ ನೀತಿಸಂಹಿತೆ ಇರುವುದರಿಂದ ಅದರ ವ್ಯಾಪ್ತಿಯಲ್ಲೇ ಈ ಎಲ್ಲ ಕಾರ್ಯಕ್ರಮ ನಡೆಯಲಿವೆ. ಲಿಂಗನಾಯಕಹಳ್ಳಿ ಶ್ರೀಗಳು, ಎಂ.ಪಿ.ರುದ್ರಂಬಾ, ಹಂಪಿ ವಿವಿಯ ಎಂ.ಎಂ.ಶಿವಪ್ರಕಾಶ, ಪಿಚ್ಚಳ್ಳಿ ಶ್ರೀನಿವಾಸ, ವಿವಿಎಸ್ ಸಂಘದ ಮೋಹನರೆಡ್ಡಿ, ಮತ್ತಿಹಳ್ಳಿ ಮಲ್ಲಿಕಾರ್ಜುನ ಸೇರಿದಂತೆ ಹೂವಿನ ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ದಾವಣಗೆರೆ ಮುಂತಾದ ಭಾಗಗಳಿಂದ ರವೀಂದ್ರರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಕವಿತಾ ವಾಗೇಶ್, ಗಾಯತ್ರಿ ದೇವಿ, ಟಿ.ಎಚ್.ಎಂ.ಮಂಜುನಾಥ, ಪಿ.ಶಿವಕುಮಾರ, ಭಾಷಾ, ಸಿದ್ದೇಶ್, ಬಸವರಾಜ ಶಿಂಗರಹಳ್ಳಿ, ಚಿಕ್ಕಳ್ಳಿ ಮಂಜಣ್ಣ, ದಾದಾಪೀರ್, ಶ್ರೀಕಾಂತ, ಭರತ, ಕಾಂತರಾಜ, ವಿಜಯಕುಮಾರ, ಮತ್ತಿಹಳ್ಳಿ ಮಂಜುನಾಥ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








