ವಿಶ್ವ ಶ್ರವಣ ದಿನ ಆಚರಣೆ

ಬಳ್ಳಾರಿ

        ಆರೋಗ್ಯವಂತ ವ್ಯಕ್ತಿಯ ಕಾರ್ಯಚಟುವಟಿಕೆಗಳಲ್ಲಿ ಶ್ರವಣ ಬಹಳಷ್ಟು ಪ್ರಮುಖವಾಗಿದ್ದು, ಶ್ರವಣ ದೋಷ ನಿವಾರಣೆ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜಯಲಕ್ಷ್ಮೀ ಹೇಳಿದರು.

       ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಮೋಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರ ಆಶ್ರಯದಲ್ಲಿ ಮೋಕಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ, ಅರಿವು ಕಾರ್ಯಕ್ರಮ ಹಾಗೂ ಕಿವಿ, ಮೂಗು, ಗಂಟಲು ತಜ್ಞರಿಂದ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

       ಮಕ್ಕಳು ಶಾಲೆಯಲ್ಲಿ ಪಠ್ಯದ ಕಡೆಗೆ ಗಮನಕೊಡದಿದ್ದರೆ ಆ ಮಗುವಿಗೆ ಶ್ರವಣ ಪರೀಕ್ಷೆಯನ್ನು ಮಾಡಿಸಲು ಸೂಚಿಸಿ, ಮಕ್ಕಳಿಗೆ ಕಿವಿಯ ಆರೈಕೆಯ ಶಿಕ್ಷಣ ನೀಡಿ ಕಿವಿಗಳಲ್ಲಿ ಯಾವುದೇ ವಸ್ತುವನ್ನು ಅಳವಡಿಸುವುದರಿಂದ ಹಾಗೂ ಜೋರಾದ ಶಬ್ಧದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಆಗಬಹುದಾದ ಅನಾಹುತದ ಬಗ್ಗೆ ತಿಳಿವಳಿಕೆ ನೀಡಿ ಎಂದರು.ಮಗುವಿಗೆ ಕಿವಿಯ ಮೇಲೆ ಹೊಡೆಯಬೇಡಿ ಇದರಿಂದ ಮಗುವಿನ ಶ್ರವಣ ಶಕ್ತಿ ಕುಂದಬಹುದು. ಕಿವಿಯಲ್ಲಿ ನೋವು ಹಾಗೂ ಕಿವಿಯಲ್ಲಿ ಸೋರಿಕೆ ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಸಂಪರ್ಕಿಸಿ ಎಂದರು.

        ಮಕ್ಕಳಿಗೆ ಕಿವಿಯೊಳಗೆ ಯಾವುದೇ ವಸ್ತುವನ್ನು ಹಾಕಿಕೊಳ್ಳಬಾರದೆಂದು ತಿಳಿಸಿ ಹೇಳಬೇಕು, ನಿಮ್ಮ ಮಗುವಿಗೆ ಕಿವಿ ನೋವು ಅಥವಾ ಕಿವಿ ಸೋರುವುದು ಅಥವಾ ಕಿವಿ ಮುಚ್ಚಿದೆ ಎಂದು ಕಂಡುಬಂದರೆ ತಕ್ಷಣವೇ ನಿಮ್ಮ ಮಗುವನ್ನು ವೈದ್ಯರ ಬಳಿ ಪರೀಕ್ಷಿಸಿ, ನಿಮ್ಮ ಮಕ್ಕಳನ್ನು ಕೊಳಕು ನೀರಿನಲ್ಲಿ ಈಜಲು ಬಿಡಬೇಡಿ, ಮಗುವಿನ ಕಿವಿಯ ಮೇಲೆ ಹೊಡೆಯಬೇಡಿ, ಜೋರಾದ ಶಬ್ಧದಿಂದ ಮಗುವನ್ನು ದೂರವಿಡಿ, ಸುರಕ್ಷಿತ ಆಡಿಯೋ ಡಿವೈಸ್ ಮೂಲಕ ಕೇಳುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.

         ಜಿಲ್ಲಾಸ್ಪತ್ರೆಯಲ್ಲಿ ಶ್ರವಣದೋಷ ನಿವಾರಣಾ ತಜ್ಞರನ್ನು ನೇಮಕ ಮಾಡಿ ಅಗತ್ಯ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 385 ಆರೋಗ್ಯ ಇಲಾಖೆ ಸಿಬ್ಬಂದಿಗೆ 2239 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, 1496 ಆಶಾ ಕಾರ್ಯಕರ್ತೆಯರು, 831 ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದರು.

        ಕಿವಿ, ಮೂಗು, ಗಂಟಲು ತಜ್ಞ ಡಾ.ಅನಿಲ್‍ಗೌಡ ಹಾಗೂ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಸಿ.ಭಾರತಿ ಮಾತನಾಡಿ ಯಾವುದೇ ವಸ್ತುವನ್ನು ಕಿವಿಯೊಳಗೆ ಹಾಕಬಾರದು, ಗದ್ದಲದ ಸ್ಥಳಗಳಲ್ಲಿ ಕಿವಿಕವಚವನ್ನು ಬಳಸಬೇಕು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ನೀವು ತೆಗೆದುಕೊಳ್ಳುವ ಔಷಧಿಗಳು ನಿಮ್ಮ ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂದು ವೈದ್ಯರಿಂದ ತಿಳಿದುಕೊಳ್ಳಿ, ನೀವು ಕಿವಿಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ, ಸೂಚಿಸಿದ ಶ್ರವಣ ಯಂತ್ರಗಳನ್ನೇ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

          ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿರೇಂದ್ರಕುಮಾರ್, ಮಕ್ಕಳ ತಜ್ಞ ಡಾ.ಸಂಜೀವ್, ದಂತ ತಜ್ಞ ಅಂಜುಮ್ ಮುನ್ನೀಸ್, ಮೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹೊನ್ನೂರ್‍ವಲಿ, ಎನ್‍ಎಸ್‍ಎಸ್ ಅಧಿಕಾರಿ ಮಲ್ಲಿಕಾರ್ಜುನ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯ ಗುರುಗಳಾದ ಅನಸೂಯ, ಎಎಸ್‍ಐ ಬಿ.ಜಿ.ಪ್ರತಾಪ್, ಹಿರಿಯ ಆರೋಗ್ಯ ಸಹಾಯಕ ಬಂಡೆಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದಾ ಬೇಗಂ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link