ಬಳ್ಳಾರಿ:
ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಕಾರ್ಮಿಕ ವರ್ಗದ ಹಕ್ಕುಗಳ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಹಾಗೂ ಅತ್ಯಂತ ಆತಂಕಕಾರಿ ಬೆಳವಣಿಗೆಗಳ ನಡುವೆ “ಮೇ ದಿನ”-“ಅಂತರರಾಷ್ಟ್ರೀಯ ಕಾರ್ಮಿಕರ ದಿನ” ಆಚರಿಸಬೇಕಾಗಿದೆ.
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಿಎಸ್‍ಎನ್‍ಎಲ್ 54,000 ನೌಕರರನ್ನು ಮನೆಗೆ ಕಳುಹಿಸಲು ಸಜ್ಜಾಗಿದೆ. ಸುಮಾರು 1.76 ಲಕ್ಷ ನೌಕರರ ಸಂಬಳ ಬಾಕಿ ಉಳಿಸಿಕೊಂಢಿದೆ. ಎಚ್.ಎ.ಎಲ್ ತನ್ನ ನೌಕರರಿಗೆ ಸಂಬಳ ನೀಡಲು 1,000 ಕೋಟಿ ಸಾಲ ಪಡೆದಿದೆ. ಜೆಟ್ ಏರ್‍ವೇಸ್ ಹಠಾತ್ತಾಗಿ 20 ಸಾವಿರ ನೌಕರರನ್ನು ಬೀದಿಮಾಲು ಮಾಡಿದೆ. ಇವು ಕೆಲವು ಉದಾಹರಣೆಗಳಷ್ಟೇ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಪರಿಸ್ಥಿತಿ ಹೀಗಿರುವಾಗ ಇನ್ನು ಅಸಂಘಟಿತ ವಲಯದ ಕಾರ್ಮಿಕರ ಪರಿಸ್ಥಿತಿ ನಿತ್ಯನರಕ ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ರವರು ತಿಳಿಸಿದರು.
ಕಾರ್ಮಿಕ ವರ್ಗದ ಅನೇಕ ತ್ಯಾಗ ಹಾಗೂ ಬಲಿದಾನಗಳಿಂದ ಗಳಿಸಿಕೊಂಡ ಕಾರ್ಮಿಕರ ಹಕ್ಕುಗಳಾದ 8 ಗಂಟೆ ದುಡಿತದ ಅವಧಿ, ಮುಷ್ಕರದ ಹಕ್ಕು, ಖಾಯಂ ಉದ್ಯೋಗದ ಹಕ್ಕು ಮುಂತಾದವುಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಇರುವಾಗ, ಮುಷ್ಕರವನ್ನು ಘೋಷಿಸುವುದೇ ‘ಕಾನೂನು ಬಾಹಿರ’ವೆಂದು ಹೇಳಲಾಗುತ್ತಿದೆ. ದಿನಕ್ಕೆ 8 ಗಂಟೆಗಳಿಗೆ ಸೀಮಿತವಾಗಿದ್ದ ಕಾರ್ಮಿಕರ ದುಡಿತದ ಅವಧಿಯನ್ನು 12-14 ಗಂಟೆಗಳಿಗೆ ಏರಿಸಲಾಗಿದೆ. ಗುತ್ತಿಗೆ ಪದ್ಧತಿಯನ್ನು ನಿಯಂತ್ರಿಸಿ ಕ್ರಮೇಣ ನಿಷೇಧಿಸುವ ಬದಲಾಗಿ ಅದನ್ನೇ ನಿಯತಗೊಳಿಸಲಾಗಿದೆ.
ಸರ್ಕಾರಿ ಇಲಾಖೆಗಳಲ್ಲೂ ಸಹ ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ಯಾವ ಅಡೆತಡೆ ಇಲ್ಲದೆ ಸಾಗುತ್ತಿದೆ. ಆಶಾ-ಅಂಗನವಾಡಿ-ಬಿಸಿಯೂಟ ಮುಂತಾದ ಸರ್ಕಾರಿ ಯೋಜನೆಗಳಡಿ ದುಡಿಯುವ ಲಕ್ಷಾಂತರ ಸ್ಕೀಂ ವರ್ಕರ್ಸ್‍ಗಳಿಗೆ ‘ಕಾರ್ಮಿಕ’ರ ಸ್ಥಾನಮಾನ, ಕನಿಷ್ಟ ವೇತನ, ಇತರೆ ಸೌಲಭ್ಯಗಳನ್ನು ನೀಡದೆ ಬಿಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ಇಂದು ದೇಶದ ಉದ್ದಗಲಕ್ಕೂ ಕಾರ್ಮಿಕರ ಶೋಷಣೆ ಮುಂದುವರಿದಿದೆ, ದಿನ ಕಳೆದಂತೆ ತೀವ್ರವಾಗುತ್ತಿದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಕಾಮ್ರೇಡ್ ಆರ್.ಸೋಮಶೇಖರ್ ಗೌಡರು ತಿಳಿಸಿದರು.
ವಿಶ್ವ ಕಾರ್ಮಿಕರ ದಿನದ ಅಂಗವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೂರಾರು ಕಾರ್ಮಿಕರ ಮೆರವಣಿಗೆ ಮಾಡಿ ರಾಯಲ್ ವೃತ್ತದಲ್ಲಿ “ಕಾರ್ಮಿಕ ವಿರೋಧಿ ನೀತಿಗಳ” ಪ್ರತಿಕೃತಿ ದಹನ ಮಾಡಲಾಯಿತು. ಈ ಸಂದಭದಲ್ಲಿ ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯರಾದ ಶರ್ಮಾಸ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಂತಾ, ಹನುಮಪ್ಪ, ಗೋವಿಂದ್. ಗೀತಾ, ಯಶೋಧ, ಈಶ್ವರಿ, ಯರ್ರಿಸ್ವಾಮಿ, ಸುರೇಶ್, ಶಂಕ್ರಪ್ಪ, ಹೊಸಗೇರಪ್ಪ, ರಾಮಣ್ಣ, ನಿಂಗಪ್ಪ, ತಿಪ್ಪೇಸ್ವಾಮಿ ಮತ್ತಿರರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.