ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ.ಜಿನರಾಳ್ಕರ್ ನುಡಿ

ತುಮಕೂರು

      ಮಾನಸಿಕ ಖಿನ್ನತೆಗೆ ಒಳಗಾಗುವ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗುತ್ತಾನೆ. ಮಾನಸಿಕ ಖಿನ್ನತೆಗೆ ತುತ್ತಾದರೆ ಜೀವನ ನಡೆಸುವುದು ದುಸ್ಥರವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ತಿಳಿಸಿದರು.

      ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ನೇಹ ಮನೋವಿಕಾಸ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1992 ರಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇದರ ಉದ್ದೇಶ ಎಲ್ಲರಲ್ಲೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಯಾವುದೇ ವ್ಯಕ್ತಿ ದೈಹಿಕವಾಗಿ ಚೆನ್ನಾಗಿದ್ದರೂ ಮಾನಸಿಕವಾಗಿ ಒತ್ತಡದಲ್ಲಿದ್ದರೆ, ಆ ವ್ಯಕ್ತಿಯ ವರ್ತನೆಗಳು ಬದಲಾಗುತ್ತವೆ. ನಮ್ಮ ದೇಶದಲ್ಲಿ ಶೇ. 6.5 ರಷ್ಟು ಜನ ಮಾನಸಿಕ ರೋಗಗ್ರಸ್ಥರಾಗಿದ್ದಾರೆ ಎಂದು ತಿಳಿಸಿದರು.

     ಜನರಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗುತ್ತದೆ. 14 ರಿಂದ 24 ರ ವರ್ಷದಲ್ಲಿನ ಯುವಕ ಯುವತಿಯರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲವಾರು ಬದಲಾವಣೆಗಳು ಆಗುತ್ತವೆ. ನಂತರದಲ್ಲಿ ವಿವಿಧ ಒತ್ತಡಗಳನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಶೇ.80ರಷ್ಟು ಜನ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅಥವಾ ವೈದ್ಯರ ಬಳಿ ಹೋಗಲು ಕೂಡ ಹಿಂಜರಿಯುತ್ತಾರೆ. ಅವರನ್ನು ಎಲ್ಲಿ ಹುಚ್ಚರಂತೆ ಕಾಣುತ್ತಾರೊ ಎಂಬ ಮನೋಭಾವನೆ ಅವರಲ್ಲಿರುತ್ತದೆ. ಇಂತಹ ಮನೋಭಾವನೆ ಬಿಟ್ಟು ಮನೋವೈದ್ಯರ ಬಳಿ ತೆರಳಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತಾಗಬೇಕು. ಅದಕ್ಕೆ ಎಲ್ಲರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

     ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬಂಡಿ ವೀರಪ್ಪ ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್, ಇಂಟರ್‍ನೆಟ್‍ಗಳಿಗೆ ಮಾರುಹೋಗಿದ್ದಾರೆ. ಇದರಿಂದ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅಲ್ಲದೆ ಮನಸ್ಸಿನ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಸಂಬಂಧಗಳ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ಜೀವನದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಮಾಜದಲ್ಲಿ ಕೆಲ ರೋಗಗ್ರಸ್ಥರನ್ನು ನೋಡುವ ವಿಧಾನ ಬದಲಾಗಬೇಕಿದೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನಿತ್ಯವೂ ಯೋಗ ಮಾಡಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

      ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಮನೋರೋಗಶಾಸ್ತ್ರದ ಮುಖ್ಯಸ್ಥರಾದ ಪ್ರೊ.ಸತ್ಯನಾರಾಯಣ ಮಾತನಾಡುತ್ತ, 1992ರಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಎಂದು ಘೋಷಣೆ ಮಾಡಿದ ನಂತರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯವನ್ನು ರಚನೆ ಮಾಡಿಕೊಂಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ಈ ವರ್ಷದ ಧ್ಯೇಯವಾಕ್ಯ ಯುವ ಪೀಳಿಗೆಗೆ ಸಂಬಂಧಪಟ್ಟಿದ್ದಾಗಿದೆ. ಇಂದಿನ ದಿನಮಾನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಯುವ ಪೀಳಿಗೆಯ ಸಂಖ್ಯೆಯೇ ಹೆಚ್ಚಾಗಿದೆ.

      ವಿದ್ಯಾಭ್ಯಾಸ ಮಾಡುವಾಗ ಯಾವ ವಿಷಯವನ್ನು ಅಧ್ಯಯನ ಮಾಡಬೇಕು ಎಂಬುದರ ಗೊಂದಲಗಳಿರುತ್ತವೆ. ವಿದ್ಯಾಭ್ಯಾಸ ಮುಗಿದ ನಂತರ ಯಾವ ರೀತಿಯ ಕೆಲಸಗಳಿಗೆ ಹೋಗಬೇಕು ಎಂಬುದರ ಗೊಂದಲಗಳು ಶುರುವಾಗುತ್ತವೆ. ಇಂತಹ ಗೊಂದಲಗಳೇ ನಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತವೆ. ನಿಮಾನ್ಸ್ ವರದಿ ಪ್ರಕಾರ ನಮ್ಮ ರಾಜ್ಯದಲ್ಲಿ 13.7 ರಷ್ಟು ಜನ ಮಾನಸಿಕ ಕಾಯಿಲೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅಂತವರು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಕೂಡ ಹಿಂಜರಿಯುತ್ತಾರೆ. ಅಲ್ಲದೆ ಮೂಢನಂಬಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದನ್ನು ಹೋಗಲಾಡಿಸಬೇಕು ಎಂದರು.

      ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕುಲಕರ್ಣಿ ಮಾತನಾಡುತ್ತಾ, ನಾವು ಯಾವುದೇ ಕೆಲಸ ಮಾಡುವಾಗ ಅದನ್ನು ಒತ್ತಡದಿಂದ ಮಾಡಿದರೆ ಅದು ಸಫಲವಾಗುವುದಿಲ್ಲ. ಬದಲಿಗೆ ನಮ್ಮ ಕೆಲಸದ ಸಮಯ ಬಿಟ್ಟು ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು. ಮನೆಯವರೊಂದಿಗೆ ಬೆರೆಯಬೇಕು. ಸ್ನೇಹಿತರೊಂದಿಗೆ ಮಾತುಕತೆ ನಡೆಸಬೇಕು. ಅದನ್ನು ಯಾವ ವೇಳೆಯಲ್ಲಿ ಮಾಡಬೇಕು ಎಂಬುದನ್ನು ನೀವೇ ಯೋಜನೆ ರೂಪಿಸಿಕೊಳ್ಳಬೇಕು.

       ಜೀವನದಲ್ಲಿ ಸಂತೋಷ, ನಗು, ಪ್ರೀತಿ ಎಂಬುದು ಬಂದಾಗ ನಮ್ಮ ಜೀವನವು ನೆಮ್ಮದಿಯಾಗಿರುತ್ತದೆ. ಬರೀ ಕೋಪ, ಗಾಬರಿ, ಆತಂಕದಲಿದ್ದರೆ ಅದೇ ಒತ್ತಡವಾಗಿ ಮಾರ್ಪಾಟಾಗುತ್ತದೆ. ಇದರಿಂದ ನಮಗ ತಿಳಿಯದೆ ಹಾಗೆ ನಾವು ಬದಲಾಗುತ್ತೇವೆ. ಹಾಗಾಗಿ ನಮ್ಮ ಮೇಲಿರುವ ಒತ್ತಡವೇನು? ನಮ್ಮ ಸಮಸ್ಯೆ ಏನು ಎಂಬುದನ್ನು ಅರಿತುಕೊಂಡು ಅದನ್ನು ಪರಿಹರಿಸಿಕೊಂಡರೆ ಯಾವುದೇ ಸಮಸ್ಯೆಗಳಿಲ್ಲದೆ ನಗು ನಗುತ್ತಾ ಜೀವನ ಮಾಡಬಹುದಾಗಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ, ಜಿಲ್ಲಾಸ್ಪತ್ರೆಯ ಮಾನಸಿಕ ರೋಗ ತಜ್ಞರಾದ ಡಾ.ಮಾಲಿನಿ ಗೋವಿಂದನ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಚೇತನ್ ಪ್ರಾಸ್ತಾವಿಕ ನುಡಗಳನ್ನಾಡಿ, ನಿರೂಪಣೆ ಮಾಡಿದರು. ಮನೋವೈದ್ಯ ಡಾ. ಶರತ್ ವಿಶ್ವ್ವರಾಜ್ ಸ್ವಾಗತ ಮತ್ತು ವಂದನಾರ್ಪಣೆ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap