ಹಿರಿಯೂರು :
ಅಂಬೇಡ್ಕರ್ ಸಂವಿಧಾನ ಇಡೀ ಜಗತ್ತಿಗೆ ಮೆಚ್ಚುಗೆಯಾಗುವಂತಹ ಸಂವಿಧಾನ. ಈ ಸಂವಿಧಾನ ಜಾರಿಯಾಗುವುದಕ್ಕಿಂತ ಪೂರ್ವದಲ್ಲಿನ ನಮ್ಮ ದೇಶದಲ್ಲಿ ಎಂತಹ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎಂಬುದು ಅರ್ಥವಾದರೆ ಮಾತ್ರ. ಇಂದಿನ ನಮ್ಮ ಸಂವಿಧಾನ ಮಹತ್ವ ತಿಳಿಯಲು ಸಾಧ್ಯ ಎಂದು ಅಂಬೇಡ್ಕರ್ ಅಧ್ಯಯನ ಕೇಂದ್ರದ ಡಾ.ಕೃಷ್ಣಮೂರ್ತಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಹಾಗೂ ಸಂವಿಧಾನದ ಆಶಯಗಳು ಮತ್ತು ಪ್ರಸ್ತುತ ಭಾರತ ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಂಸ್ಥೆ ನಿರ್ದಿಷ್ಟ ಕಾನೂನಿನ ವ್ಯಾಪ್ತಿಯಲ್ಲಿ ಆಡಳಿತ ನಡೆಸಬೇಕು. ಆ ಕಾನೂನುಗಳ ಒಟ್ಟು ಮೊತ್ತವೇ ಸಂವಿಧಾನ. ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 90ರಷ್ಟು ಜನರಿಗೆ ಸಂವಿಧಾನದ ಅರಿವೇ ಇಲ್ಲದೆ ಬದುಕುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಸಂವಿಧಾನವು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವವನ್ನು ಒಳಗೊಂಡಿದ್ದು, ಅದನ್ನು ತಿಳಿದುಕೊಂಡಾಗ ಮಾತ್ರವೇ ಸಂವಿಧಾನದ ಆಶಯ ಈಡೇರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ ಜಗತ್ತಿನ ಮಹಾಜ್ಞಾನಿ, ಮಾನವತಾವಾದಿ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯನ್ನು ಇಂದು ಇಡೀ ಜಗತ್ತೇ ಸ್ಮರಿಸುತ್ತದೆ. ಇಂದು ಭಾರತವು ಸದೃಢ ರಾಷ್ಟ್ರವಾಗಿ ನಿಂತಿರುವುದಕ್ಕೆ ನಮ್ಮ ಸಂವಿಧಾನವೇ ಪ್ರಮುಖ ಕಾರಣವಾಗಿದೆ ಎಂದರು.
ಸಮಾಜ ಸೇವಕ ಟಿ.ಡಿ.ರಾಜಗಿರಿ ಮಾತನಾಡಿದರು. ಮುಖಂಡರಾದ ಎಸ್.ಸಿದ್ದಪ್ಪ, ರಾಮಣ್ಣ, ಪರಮೇಶ್ವರಪ್ಪ, ಉಪನ್ಯಾಸಕರಾದ ಆರ್.ರಂಗಪ್ಪ, ಎಚ್.ಆರ್.ಲೋಕೇಶ್, ಈ.ನಾಗೇಂದ್ರಪ್ಪ, ರಜಾಕ್‍ಸಾಬ್, ದೈಹಿಕ ನಿರ್ದೇಶಕ ಮಂಜು ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ