ಜಲಸಂಪತ್ತು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಪೆಟ್ಟು

ಚಿತ್ರದುರ್ಗ:

        ಪ್ರತಿ ಹನಿ ನೀರೂ ಸಹ ಜೀವ ಉಳಿಸುವ ಶಕ್ತಿಯಾಗಿದ್ದು, ನೀರನ್ನು ಹಿತವಾಗಿ, ಮಿತವಾಗಿ ಬಳಸಿ ಜಲ ಸಂರಕ್ಷಿಸಿಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

       ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ, ಇತರೆ ಜಿಲ್ಲೆಗಳಿಗಿಂತ ಅಧಿಕವಾಗಿದ್ದು, ನೀರನ್ನು ಉಳಿಸಲು ಕೇವಲ ಸಂಬಂಧಿಸಿದ ಇಲಾಖೆಗಳು ಮುಂದಾದರೆ ಸಾಲದು. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಅನಗತ್ಯವಾಗಿ ವ್ಯರ್ಥ ಮಾಡದೆ, ನೀರನ್ನು ಉಳಿಸುವ ಮತ್ತು ಮಿತವಾಗಿ ಬಳಸುವ ಕಾರ್ಯಕ್ಕೆ ಮುಂದಾಗಬೇಕು. ನೀರನ್ನು ಸರಬರಾಜು ಮಾಡುವವರು ಪೈಪ್‍ಗಳಲ್ಲಿನ ನೀರಿನ ಸೋರಿಕೆ, ಪೋಲಾಗಿ ಹರಿದುಹೋಗುವುದನ್ನು ತಡೆಗಟ್ಟಬೇಕು. ಪ್ರತಿ ಹನಿ ನೀರು ಅಮೂಲ್ಯವಾಗಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಮಲೆನಾಡಿನಂತಹ ಪ್ರದೇಶಗಳಲ್ಲಿ ಮಳೆಗಾಲದಲ್ಲಿ, ಮಳೆ ನಿಲ್ಲೋದೆ ಗೊತ್ತಿಲ್ಲ. ಅದರೆ ಚಿತ್ರದುರ್ಗದಲ್ಲಿ ಮಳೆ ಬರೋದೆ ಗೊತ್ತಿಲ್ಲ. ಹವಾಮಾನ ವೈಪರಿತ್ಯ ಹಾಗೂ ಭೌಗೋಳಿಕ ವ್ಯತ್ಯಾಸದಿಂದಾಗಿ ಜಿಲ್ಲೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಮಳೆ ಬರದೆ ಬರಗಾಲಕ್ಕೆ ಪ್ರತಿವರ್ಷ ಜನ ಜಾನುವಾರುಗಳು ತೊಂದರೆಗೀಡಾಗುತ್ತಿವೆ.

        ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ನೀರಿನ ಅಭಾವ ಈ ವರ್ಷ ಜಿಲ್ಲೆಗೆ ಆವರಿಸಿದ್ದು, ಇನ್ನಾದರು ನೀರನ್ನು ಸಂರಕ್ಷಿಸಲು, ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮುಖಾಂತರ, ಮರಗಳನ್ನು ಉಳಿಸಿ, ಪೋಷಿಸಿ ಹಸಿರೀಕರಣ ಮಾಡಿದಲ್ಲಿ ಮಳೆ ಬರುತ್ತದೆ. ಕೆಲವು ಹಳ್ಳಿಗಳಲ್ಲಿ ನಿರಂತರ ಜ್ಯೋತಿ ವಿದ್ಯುತ್ ಇರುವ ಕಡೆ ಪ್ರತಿದಿನ 24 ಗಂಟೆ ನೀರನ್ನು ಬಳಸಿ, ವ್ಯರ್ಥವಾಗಿ ಚರಂಡಿಗೆ ಹರಿಯಬಿಡುತ್ತಾರೆ. ಕಲುಷಿತ ನೀರಿನಿಂದ ಶೇ 70 ರಷ್ಟು ರೋಗಗಳು ಬರುತ್ತವೆ ಅದರಿಂದ ನೀರನ್ನು ಶುದ್ಧವಾಗಿ, ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಸ್ವಚ್ಛ ಶನಿವಾರ ಆಚರಣೆ 

       ನರೇಗಾ ಯೋಜನೆಯಲ್ಲಿ ಜಿಲ್ಲೆಯಲ್ಲಿ ಈ ವರ್ಷ ಸಾವಿರ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಈ ಮೂಲಕ ಕೂಲಿಕಾರರಿಗೆ ಹೆಚ್ಚಿನ ಉದ್ಯೋಗ ನೀಡಲಾಗುವುದು. ಸರ್ಕಾರಿ ಕಛೇರಿಗಳು, ಆಸ್ಪತ್ರೆ, ಶಾಲೆ, ಪಶು ಇಲಾಖೆ ಸೇರಿದಂತೆ ಲಭ್ಯವಿರುವ ಕಡೆಗಳಲ್ಲ್ಲಿ ಗಿಡ ನೆಡಲಾಗುವುದು. ಇನ್ನು ಮುಂದೆ ಪ್ರತಿ ಶನಿವಾರದ ದಿನವನ್ನು ಸ್ವಚ್ಛ ಶನಿವಾರ ಎಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಚರಿಸಲಾಗುವುದು. ಅಂದು ಎಲ್ಲ ಹಳ್ಳಿಗಳಲ್ಲಿ ಚರಂಡಿ, ರಸ್ತೆಗಳನ್ನು ವಿಶೇಷವಾಗಿ ಸ್ವಚ್ಛತೆ ಮಾಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

        ಜಲ ತಜ್ಞ ದೇವರಾಜ ರೆಡ್ಡಿ ಮಾತನಾಡಿ, ಪ್ರತಿ ವರ್ಷ ಮಾರ್ಚ್ ವರೆಗೂ ನೀರಿನ ಸಮಸ್ಯೆ ಯಾರಿಗೂ ತಿಳಿಯದು. ನಂತರದಲ್ಲಿ ಮಾತ್ರ ನೀರನ್ನು ಉಳಿಸಲು ಮಹತ್ವ ತೋರಿದರೆ ಯಾವುದೇ ಪ್ರಯೋಜನ ಆಗದು. ನೀರನ್ನು ಸಂರಕ್ಷಿಸುವಲ್ಲಿ ಅರಣ್ಯದ ರಕ್ಷಣೆ ಮುಖ್ಯವಾದುದು. ಮರಗಿಡಗಳನ್ನು ದಟ್ಟವಾಗಿ ಬೆಳಿಸಿ, ಹಸಿರೀಕರಣ ಗೊಳಿಸಿದಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಮಳೆ ಬಂದು ಅಂತರ್ಜಲ ಹೆಚ್ಚಾಗಿ ನೀರನ್ನು ಭವಿಷ್ಯಕ್ಕೆ ಉಳಿಸಿಕೊಳ್ಳಬಹುದು. ಭೂಮಿಯೊಳಗೆ ಯಾವುದೇ ನದಿ, ಕೆರೆ, ಸರೋವರಗಳಿಲ್ಲ, ತಪ್ಪು ಕಲ್ಪನೆಯಿಂದ ದಿನದಿಂದ ದಿನಕ್ಕೆ ಬೋರ್‍ವೆಲ್‍ಗಳನ್ನು ಕೊರೆಸುವುದು ಹೆಚ್ಚಾಗಿದೆ, ಅಂತಹ ಕಾರ್ಯ ಮುಂದುವರೆದರೆ ಭೂಕಂಪನ ಸಂಭವಿಸುವ ಕಾಲ ದೂರವಿಲ್ಲ ಎಂದು ಹೇಳಿದರು.

       ನೀರನ್ನು ಔಷಧಿ ರೂಪದಲ್ಲಿ ಕಾಣಬೇಕಿದೆ, ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನೀರು ಪ್ರತಿಯೊಂದಕ್ಕೂ ವರದಾನವೇ ಸರಿ, ಓಡುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಭೂಮಿಗೇ ಇಂಗಿಸುವ ರೈತರು ಸೇರಿದಂತೆ ಪ್ರತಿಯೊಬ್ಬರೂ ಮಾಡಬೇಕಿದೆ. ಆಮೂಲಕ ನೀರನ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಪೌರಯುಕ್ತ ಸಿ. ಚಂದ್ರಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಕೆ. ಎಚ್ ಓಂಕಾರಪ್ಪ. ಉಪಕಾರ್ಯದರ್ಶಿ ಬಸವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap