ಬೆಂಗಳೂರು
ಇತ್ತೀಚೆಗೆ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದ ಕೊಡಗು, ಚಿಕ್ಕಮಗಳೂರು ಮತ್ತು ಸಕಲೇಶಪುರ ಕಾಫಿ ಬೆಲೆಯ ಉತ್ಪಾದನೆಯಲ್ಲಿ ಶೇ. 35 ರಿಂದ 40 ರಷ್ಟು ಅಂದಾಜು 82 ಸಾವಿರ ಟನ್ ಕಾಫಿ ನಷ್ಟವಾಗಿದೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಸಂಘ ಇಂದಿಲ್ಲಿ ಹೇಳಿದೆ.
ಕೊಡಗು ಜಿಲ್ಲೆಯ 26 ಹಳ್ಳಿಗಳಲ್ಲಿ ಕಾಫಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಚಿಕ್ಕಮಗಳೂರು ಮತ್ತು ಸಕಲೇಶಪುರ ಭಾಗದಲ್ಲಿ ಅಲ್ಪ, ಸ್ವಲ್ಪ ನಷ್ಟವಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಟಿ. ಪ್ರಮೋದ್ ತಿಳಿಸಿದರು.
ಸಣ್ಣ, ಅತಿಸಣ್ಣ ಕಾಫಿ ಬೆಳೆಗಾರರು ಸೇರಿದಂತೆ 3.4 ಲಕ್ಷ ಕಾಫಿ ಬೆಳೆಗಾರರ 6 ಸಾವಿರ ಕೋಟಿ ಸಾಲ ರಾಷ್ಟ್ರೀಕೃತ ಬ್ಯಾಂಕ್‍ಗಳಿದ್ದು ಪ್ರವಾಹ, ಭೂಕುಸಿತದಿಂದ ಬೆಳೆಗಾರರು ಬಡ್ಡಿ ಪಾವತಿಸಲು ಹಾಗೂ ಸಾಲ ಪಾವತಿಸಲು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಡ್ಡಿ ಪ್ರಮಾಣ ಕಡಿಮೆ ಮಾಡುವ ಜೊತೆಗೆ ಸಾಲ ಮರುಪಾವತಿ ಅವಧಿಯನ್ನು 5 ರಿಂದ 10ವರ್ಷಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ ಕಾಫಿ ಬೆಳೆ ನಷ್ಟವಾಗಿದೆ. ಭೂಕುಸಿತ ಪ್ರವಾಹದಿಂದಾಗಿ 3750 ಎಕರೆ ಕಾಫಿ ತೋಟ ನಾಶವಾಗಿದ್ದು, ಕಾರ್ಮಿಕರ ಮನೆಗಳು ಸಂಪೂರ್ಣ ನಾಶವಾಗಿದೆ ಎಂದು ಹೇಳಿದರು.
ಕಾಫಿಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಈ ಸಂಬಂಧ ಈಗಾಗಲೇ ಕೇಂದ್ರ ಮತ್ತು ವಾಣಿಜ್ಯ ಸಚಿವ ಸುರೇಶ್ ಪ್ರಭುವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ರಾಜ್ಯದ ಕೊಡಗು, ಚಿಕ್ಕಮಗಳೂರು ಮತ್ತು ಸಕಲೇಶಪುರ ಭಾಗಗಳಲ್ಲಿ ಆಗಿರುವ ಕಾಫಿ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಕಾಫಿ ಬೆಳೆಗಾರರ ಸಂಘದ 60ನೇ ವಾರ್ಷಿಕ ಸಮಾವೇಶ ನಾಳೆ ಮತ್ತು ನಾಡಿದ್ದು ನಗರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಟಿ. ಪ್ರಮೋದ್ ತಿಳಿಸಿದರು.
ನಾಳೆ ನಡೆಯಲಿರುವ ಸಮಾವೇಶದಲ್ಲಿ ಕಾಫಿ ಬೆಳೆಗಾರರು ಭಾಗವಹಿಸಲಿದ್ದು, ಬೆಳೆಯಲ್ಲಿ ಆಗಿರುವ ನಷ್ಟಗಳ ಕುರಿತು ತಜ್ಞರ ವರದಿ ಮಂಡಿಸಲಿದ್ದಾರೆ. ನಾಡಿದ್ದು ನಡೆಯುವ ಸಮಾವೇಶದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಸುರೇಶ್ ಪ್ರಭು, ಸಂಸದ ರಾಜೀವ್ ಗೌಡ, ಕಾಫಿ ಮಂಡಳಿಯ ಅಧ್ಯಕ್ಷ ಎಂ.ಎಸ್. ಬೋಜೇಗೌಡ ಭಾಗವಹಿಸಲಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ