ಬೆಂಗಳೂರು
ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯ ಕೇವಲ ಅವರೊಬ್ಬರೇ ಹೇಳಿಕೆಯಲ್ಲ. ಹಿಂಸೆಯ ವಿಚಾರಧಾರೆ ಹೊಂದಿರುವ ಆರ್‍ಎಸ್‍ಎಸ್ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಆರೋಪಿಸಿದ್ದಾರೆ.
ಯತ್ನಾಳ್ ಹೇಳಿಕೆಯನ್ನು ಖಂಡಿಸಿ ನಗರದ ಗಾಂಧಿಭವನದಲ್ಲಿಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅನಂತ್ ಕುಮಾರ್, ಯತ್ನಾಳ ಅವರು ಮಾತ್ರ ನಮ್ಮ ಕಣ್ಣಿಗೆ ಕಾಣುತ್ತಾರೆ. ಆದರೆ ಅವರ ಹೇಳಿಕೆಯ ಹಿಂದೆ ವ್ಯವಸ್ಥಿತವಾದ ಯೋಜನೆಯಿದೆ. ಯಾರು ಏನು ಮಾತನಾಡಬೇಕು ಎಂಬುದನ್ನು ಆರ್‍ಎಸ್‍ಎಸ್‍ನಿಂದ ಸೂಚನೆ ಬರುತ್ತದೆ. ಅದರಂತೆ ಅವರು ಮಾತನಾಡುತ್ತಾರೆ. ಅವರ ಗುರಿ ಗಾಂಧಿ ಅಥವಾ ದೊರೆಸ್ವಾಮಿ ಅಲ್ಲ. ಅವರ ಗುರಿ ಅಹಿಂಸೆಯಾಗಿದೆ. ಅವರು ಅಹಿಂಸೆಯನ್ನು ವಿರೋಧಿಸುತ್ತಾರೆ. ಅವರಿಗೆ ಅಹಿಂಸೆ ದೊಡ್ಡ ಶತ್ರು. ಗಾಂಧೀಜಿ, ದೊರೆಸ್ವಾಮಿಯಂತಹವರು ಅಹಿಂಸೆಯನ್ನು ಪ್ರತಿಪಾದಿಸುತ್ತಿರುವುದರಿಂದ ಅವರನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯುವ ಸಮುದಾಯದ ಮನಸ್ಸನ್ನು ಪ್ರಚೋದಿಸಿ ಅವರನ್ನು ಹಿಂಸೆಗೆ ಇಳಿಸುವುದು ಆರ್‍ಎಸ್‍ಎಸ್‍ನ ಕೆಲಸ. ಒಂದು ವೇಳೆ ಯುವಕರಲ್ಲಿ ಅಹಿಂಸಾ ಮನೋಭಾವ ಬೆಳೆದರೆ ಹಿಂಸೆಯನ್ನು ಪೋಷಿಸಲು ಯಾರೂ ಸಿಗಲಾರರು. ಆದ್ದರಿಂದ ಆರ್‍ಎಸ್‍ಎಸ್ ಇಂತಹ ಹೇಳಿಕೆಗಳನ್ನು ಕೆಲವರ ಮೂಲಕ ನೀಡುತ್ತಿದೆ ಎಂದು ನೇರವಾಗಿ ಅವರು ಆರೋಪಿಸಿದರು.
ಆರ್‍ಎಸ್‍ಎಸ್ ಹೇಳುವ ಹಿಂದೂ ರಾಷ್ಟ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಶೂದ್ರರನ್ನು ಹೊರತುಪಡಿಸಲಾಗುತ್ತದೆ. ಇದನ್ನು ನೈಜ ಹಿಂದುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಶಿಕ್ಷಣ ತಜ್ಞ ಪಿ.ವೂಡೆ ಕೃಷ್ಣ ಮಾತನಾಡಿ, 9 ದಶಕಗಳಿಂದ ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ದೊರೆಸ್ವಾಮಿಯವರ ವಿರುದ್ಧ ಲಘುವಾಗಿ ಮಾತನಾಡಿರುವುದು ಖಂಡನೀಯ. ಯತ್ನಾಳ್ ಅವರ ಈ ಹೇಳಿಕೆಯನ್ನು ಒಳ್ಳೆಯ ಮನಸ್ಸು ಇರುವ ಯಾರು ಕೂಡ ಒಪ್ಪಲಾರರು.
ಅವರ ಪಕ್ಷದಲ್ಲೆ ಹಲವರು ಈ ಹೇಳಿಕೆಯನ್ನು ಒಪ್ಪುವುದಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡುವುದೇ ನಿಜವಾದ ಗಾಂಧಿ ಮಾರ್ಗವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳ ವಿರುದ್ಧ ನಿರಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಮಾತನಾಡಿ, ಮಾನವೀಯತೆ ಇರುವ ಯಾರು ಕೂಡ ಯತ್ನಾಳ್ ಹೇಳಿಕೆಯನ್ನು ಒಪ್ಪುವುದಿಲ್ಲ. ಅವರ ಹೇಳಿಕೆಯನ್ನು ಖಂಡಿಸಿ ರೈತ ಸಂಘದಿಂದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅವರ ವಿರುದ್ಧ ಸ್ಪೀಕರ್ ಹಾಗೂ ಮುಖ್ಯಮಂತ್ರಿ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ನಾಡಿನ ಜನರೇ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರೇ ದೇಶಬಿಟ್ಟು ತೊಲಗಿರಿ ಎಂಬ ಘೋಷಣೆ ಕೂಗಲಾಗಿತ್ತು. ಈಗ ಬಿಜೆಪಿಯನ್ನು ದೇಶದಿಂದ ತೊಲಗಿಸಬೇಕಾಗಿದೆ. ಇದಕ್ಕಾಗಿ ನಾವೆಲ್ಲಾ ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು.
ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೆರೆ ಮಾತನಾಡಿ, ಗಾಂಧಿ ತತ್ವವನ್ನು ಉಳಿಸಬೇಕಾದರೆ ದೊರೆಸ್ವಾಮಿಯವರನ್ನು ಉಳಿಸಬೇಕು. ಅವರ ವ್ಯಕ್ತಿತ್ವಕ್ಕೆ ಅಪಮಾನ ಮಾಡುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಕಂಡಲ್ಲಿ ಗುಂಡು ಹಾರಿಸಲಾಗುವುದು ಎಂದು ಹೇಳಿದವರ ವಿರುದ್ಧ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ದೇಶದಲ್ಲಿ ಸರ್ವಾಧಿಕಾರ ಬೆಳೆದಿದೆ. ಅದು ನಮ್ಮನ್ನು ತಣ್ಣಗೆ ಆಕ್ರಮಿಸಿಕೊಳ್ಳುತ್ತಿದೆ. ಮತ್ತೊಮ್ಮೆ ದೇಶವನ್ನು ಗುಲಾಮಗಿರಿಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿರುವುದು ಇಡೀ ಭಾರತಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ಧರ್ಮದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ನಮ್ಮ ಧರ್ಮ ಸಂಕಟದಲ್ಲಿ ಸಿಲುಕಿಕೊಂಡಿದೆ. ಆಂಜನೇಯನ ಮುಖವನ್ನು ಕೋಪಿಷ್ಠನನ್ನಾಗಿ ಮಾಡುವುದು ಧರ್ಮವೇ ?. ರಾಮನನ್ನು ಸೀತೆಯಿಂದ ಬೇರ್ಪಡಿಸಿರುವುದು ಧರ್ಮವೇ ? ಎಂದು ಪ್ರಶ್ನಿಸಿದ ಅವರು, ನಾವು ಇದೀಗ ಧರ್ಮಯುದ್ಧವನ್ನು ಪ್ರೀತಿ ಮತ್ತು ಶಾಂತಿಯಿಂದ ಆರಂಭಿಸಬೇಕು. ಹಿಂದೂ ಧರ್ಮ, ರಾಮನ ಘನತೆ, ಗೌರವವನ್ನು ಎತ್ತಿ ಹಿಡಿಯೇಬೇಕು ಎಂದರು.
ಹಿಂದುತ್ವ ಹೆಸರಿನಲ್ಲಿ ನಡೆಯುತ್ತಿರುವ ಧರ್ಮ ರಾಜಕಾರಣವನ್ನು ಖಂಡಿಸುತ್ತೇನೆ. ಯತ್ನಾಳ, ಅನಂತ ಕುಮಾರ್ ಹೆಗ್ಡೆ ತೋರಿಸುತ್ತಿರುವುದು ನಿಜವಾದ ಹಿಂದೂ ಧರ್ಮ ಅಲ್ಲ. ಅನೇಕ ಸಂತರು, ಸಾಧುಗಳು ತೋರಿಸಿದ ಮಾರ್ಗ ಮಾತ್ರ ಹಿಂದೂ ಧರ್ಮ. ಬಡವರನ್ನು ಸಲಹುವುದು, ಬಡವರನ್ನು ರಕ್ಷಣೆ ಮಾಡುವುದು, ಕಾಯಕ ಪರಂಪರೆ ಹಿಂದೂ ಧರ್ಮದ ಸಾರಗಳು. ಆದ್ದರಿಂದ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಯನ್ನು ನಾವು ಧಾರ್ಮಿಕವಾಗಿಯೇ ಎದುರಿಸಬೇಕು ಎಂದು ಹೇಳಿದರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಇಡೀ ದೇಶ ತಲೆತಗ್ಗುವಂತೆ ಕೊಳಚೆಯ ದೇಶವಾಗಿ ಮಾಡಲಾಗುತ್ತಿದೆ. ಸ್ವಚ್ಛ ಭಾರತದಿಂದ ದೇಶ ಸ್ವಚ್ಛವಾಗಲಿಲ್ಲ. ದೇಶದ ಜನರ ಮನಸ್ಸನ್ನು ಕೊಳಚೆಯಾಗಿಸಲಾಗುತ್ತಿದೆ. ಕೋಮುವಾದಿ ಕೊಳಕನ್ನು ಯುವ ಜನತೆಯ ಮನಸ್ಸಿಗೆ ತುಂಬಲಾಗುತ್ತಿದೆ ಎಂದು ಹೇಳಿದರು.
ಗೋಡ್ಸೆಯನ್ನು ಹೊಗಳಿದವರು, ಗಾಂಧಿಯ ಚಿತ್ರಕ್ಕೆ ಗುಂಡಿಟ್ಟವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಸಂಸತ್‍ಗೆ ಕಳುಹಿಸಲಾಗಿದೆ. ನಾಡಿನ, ದೇಶದ ಸಾಕ್ಷಿ ಪ್ರಜ್ಞೆಯಂತಿರುವ ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡುವುದರ ಹಿಂದೆ ಆ ಪಕ್ಷದ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಎನ್. ನಾಗರಾಜ್, ಮಾಜಿ ಶಾಸಕ ಬಿ.ಆರ್. ಪಾಟೀಲ್, ಮೈಕಲ್ ಫೆರ್ನಾಂಡಿಸ್, ಮಾವಳ್ಳಿ ಶಂಕರ್, ಮಾಜಿ ಸಂಸದ ನಾಡಗೌಡ ಮತ್ತಿತರರು ಪಾಲ್ಗೊಂಡಿದ್ದರುಬಳಿಕ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಯ ವರಿಗೆ ಮನವಿ ಸಲ್ಲಿಸಲಾಯಿತು.
