ಬೆಂಗಳೂರು:
ಬಿ.ಎಸ್.ಯಡಿಯೂರಪ್ಪ ಆಡಿಯೋ ವಿಚಾರವನ್ನ ಸ್ಪೀಕರ್ ಗಂಭೀರವಾಗಿ ಪರಿಗಣಿಸಿದ್ದಾರೆ.ಸ್ಪೀಕರ್ ಹೆಸರು ಸಹ ಆಡಿಯೋದಲ್ಲಿ ಪ್ರಸ್ತಾಪ ಆಗಿದೆ. ಹೀಗಾಗಿ ಸ್ಪೀಕರ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಕೆಡವುವ ಪ್ರಯತ್ನಗಳು ನಡೆದಿವೆ. ಸಮ್ಮಿಶ್ರ ಸರ್ಕಾರ ಮತ್ತು ಗೃಹ ಇಲಾಖೆ ಬಿಎಸ್‍ವೈ ಆಡಿಯೋ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದ್ದು, ಆಡಿಯೋ ಟೇಪ್‍ನ್ನ ಎಫ್ ಎಸ್‍ಎಲ್‍ಗೆ ಕಳಿಸಲಾಗುವುದು. ಎಫ್‍ಎಸ್‍ಎಲ್ ವರದಿ ಬಂದಾಗ ಯಾವುದು ಸತ್ಯ ಎಂಬುದು ತಿಳಿಯಲಿದೆ ಎಂದರು.
ಬಜೆಟ್ ಮಂಡನೆ ಆಗಿದೆ, ಅನುಮೋದನೆಯೂ ಸಿಗಲಿದೆ. ನಾಲ್ಕು ಜನ ಕಾಂಗ್ರೆಸ್ ಶಾಸಕರು ಗೈರಾದರೆ ಬಜೆಟ್ ಅನುಮೋದನೆಗೆ ತೊಂದರೆ ಆಗುವುದಿಲ್ಲ. ಅತೃಪ್ತ ಶಾಸಕರನ್ನು ಹೋಟೆಲ್‍ನಲ್ಲಿ ಕೂಡಿ ಹಾಕಿದ್ದಾರೆ. ಅವರ ಮೊಬೈಲ್ ಸಹ ಕಿತ್ತುಕೊಂಡಿದ್ದಾರೆ. ಅವರು ಎಲ್ಲೂ ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.