ಆಪರೇಷನ್ ಕಮಲ ನಿಲ್ಲಿಸದಿರಲು ಯಡಿಯೂರಪ್ಪ ತೀರ್ಮಾನ …!!

ಬೆಂಗಳೂರು

       ಲೋಕಸಭಾ ಚುನಾವಣೆಯ ನಂತರ ತಮ್ಮನ್ನು ರಾಜಕೀಯವಾಗಿ ಮುಗಿಸಲು ಪಕ್ಷದ ಹಲವು ನಾಯಕರು ನಡೆಸುತ್ತಿರುವ ತಂತ್ರಗಾರಿಕೆಯಿಂದ ಆಕ್ರೋಶಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ನಿಲ್ಲಿಸದಿರಲು ತೀರ್ಮಾನಿಸಿದ್ದಾರೆ.

        ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಅಗತ್ಯವಾದ ಶಾಸಕರ ಸಂಖ್ಯಾಬಲ ಸಧ್ಯಕ್ಕೆ ಸಿಗದಿದ್ದರೂ ಮುಂದಿನ ದಿನಗಳಲ್ಲಿ ತಮ್ಮ ವಿರುದ್ಧವೇ ಪಕ್ಷದ ನಾಯಕರು ನಡೆಸಲಿರುವ ನಿರ್ಣಾಯಕ ಆಪರೇಷನ್‍ನಿಂದ ಬಚಾವಾಗಲು ಯಡಿಯೂರಪ್ಪ ಈ ತೀರ್ಮಾನಕ್ಕೆ ಬಂದಿದ್ದಾರೆ.

       ಕೆಲ ದಿನಗಳ ಹಿಂದೆ ಸರ್ಕಾರ ಉರುಳಿಸಲು ಅಗತ್ಯವಾಗಿದ್ದ ಶಾಸಕರು ಒಟ್ಟಾಗಿದ್ದರಾದರೂ ಈಗ ಅವರ ಪೈಕಿ ಹಲವರು ಮರಳಿ ತಮ್ಮ ಪಕ್ಷಗಳಿಗೆ ವಾಪಸ್ ಆಗಿರುವ ಬೆಳವಣಿಗೆಯ ಹಿಂದಿನ ರಹಸ್ಯ ಯಡಿಯೂರಪ್ಪ ಅವರಿಗೆ ಅರ್ಥವಾಗಿದೆ.

      ಹೀಗೆ ಶಾಸಕರ ಪೈಕಿ ಅನೇಕರು ಮರಳಿ ತಮ್ಮ ಪಕ್ಷಕ್ಕೆ ಹಿಂತಿರುಗಲು ಬಿಜೆಪಿ ಪಾಳೆಯದ ಹಲವು ನಾಯಕರು ನಡೆಸುತ್ತಿರುವ ಕಾರ್ಯತಂತ್ರ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಯಡಿಯೂರಪ್ಪ, ಪಾರ್ಲಿಮೆಂಟ್ ಚುನಾವಣೆಯ ಒಳಗೆ ಈ ಸರ್ಕಾರ ಉರುಳುವಂತೆ ಮಾಡಲೇಬೇಕು ಎಂದು ಹೈಕಮಾಂಡ್ ವರಿಷ್ಟರ ಎದುರು ಪಟ್ಟು ಹಿಡಿದಿದ್ದಾರೆ.

      ಒಂದು ವೇಳೆ ನನ್ನ ಪ್ರಯತ್ನಕ್ಕೆ ಬೆಂಬಲ ಸಿಗದೆ ಹೋದರೆ ಸಿಎಂ ಹುದ್ದೆಯಲ್ಲಿ ನಾನು ಕೂರದಿರುವಂತೆ ನೋಡಿಕೊಳ್ಳಲು ನಮ್ಮ ಪಕ್ಷದವರೇ ಪ್ರಯತ್ನಿಸಿದರು ಎಂಬ ಅಂಶವನ್ನು ರಾಜ್ಯದ ಜನರ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಹೈಕಮಾಂಡ್ ವರಿಷ್ಟರಿಗೆ ಅವರು ವಿವರಿಸಿದ್ದಾರೆ.

      ಯಡಿಯೂರಪ್ಪ ಅವರ ಈ ನಿರ್ಧಾರದಿಂದ ಹೈಕಮಾಂಡ್ ವರಿಷ್ಟರು ಶಾಕ್ ಆಗಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚಿನ ಡ್ಯಾಮೇಜ್ ಆಗದಿರುವಂತೆ ನೋಡಿಕೊಳ್ಳಲು ಆಪರೇಷನ್ ಕಮಲ ಕಾರ್ಯಾಚರಣೆ ಮುಂದುವರಿಸಲು ಅವರು ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

        ಪಾರ್ಲಿಮೆಂಟ್ ಚುನಾವಣೆಯ ಒಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ತಾವು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವಂತಾಗಬೇಕು. ಇಲ್ಲದೇ ಹೋದರೆ ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದವರು ವರಿಷ್ಟರಿಗೆ ವಿವರಿಸಿದ್ದಾರೆ ಎಂದು ಮೂಲಗಳು ವಿವರ ನೀಡಿವೆ.

     ನಾನಂದುಕೊಂಡ ಪ್ರಕಾರ ಎಲ್ಲವೂ ನಡೆದಿದ್ದರೆ ಇಷ್ಟೊತ್ತಿಗಾಗಲೇ ಆಟ ಮುಗಿದಿರುತ್ತಿತ್ತು. ಹಾಗೆಯೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣ ಗಣನೆ ಆರಂಭವಾಗುತ್ತಿತ್ತು. ವಿಪರ್ಯಾಸವೆಂದರೆ, ನಮ್ಮ ಪಕ್ಷದ ಹಲ ಪ್ರಮುಖ ನಾಯಕರಿಗೆ ನಾನು ಸಿಎಂ ಆಗುವುದು ಇಷ್ಟವಿಲ್ಲ.

      ಹೀಗಾಗಿ ಸಮ್ಮಿಶ್ರ ಸರ್ಕಾರ ಉರುಳಿದರೆ ಮತ್ತೊಂದು ಸಮ್ಮಿಶ್ರ ಸರ್ಕಾರವೇ ಅಸ್ತಿತ್ವಕ್ಕೆ ಬರಲಿ. ಕುಮಾರಸ್ವಾಮಿಯವರೇ ಸಿಎಂ ಆಗಿ ಮುಂದುವರಿಯಲಿ ಎಂದು ಇವರು ಹೇಳಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

       ಆದರೆ ಅವರು ತಡೆಯುತ್ತಿರುವುದು ನನ್ನನ್ನು ಮಾತ್ರವಲ್ಲ,ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಅವರು ತಡೆಯುತ್ತಿದ್ದಾರೆ.ಹೀಗಾಗಿ ನನ್ನನ್ನು ನನ್ನ ಪಾಡಿಗೆ ಬಿಡಿ.ನನಗೆ ಅಗತ್ಯವಾದ ಸಹಕಾರ ನೀಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸುತ್ತೇನೆ ಎಂದು ಯಡಿಯೂರಪ್ಪ ಪಕ್ಷದ ವರಿಷ್ಟರಿಗೆ ಹೇಳಿದ್ದಾರೆ.

      ಹೀಗೆ ಪಾರ್ಲಿಮೆಂಟ್ ಚುನಾವಣೆಯ ನಂತರ ತಮ್ಮನ್ನು ರಾಜಕೀಯವಾಗಿ ಮುಗಿಸುವ ಪಕ್ಷದ ಕೆಲ ನಾಯಕರ ಪ್ರಯತ್ನ ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಉಇದೇ ಕಾರಣಕ್ಕಾಗಿ ಅವರು ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಮುಂದುವರಿಸಲಿದ್ದಾರೆ ಎಂದು ಮೂಲಗಳು ವಿವರ ನೀಡಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap