ಬೆಂಗಳೂರು
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಭಾರಿ ಹೋರಾಟದ ಮೂಲಕ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ ದ್ವೇಷದ ರಾಜಕಾರಣವನ್ನು ಮುಂದುವರೆಸಿರುವುದಕ್ಕೆ ಕಿಡಿಕಾರಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಗೊಳಿಸಿರುವ ತೀರ್ಮಾನವನ್ನು ಶನಿವಾರದೊಳಗೆ ವಾಪಸ್ ಪಡೆಯದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಅಮರಣಾಂತ ಉಪವಾಸ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ದ್ವೇಷದ ರಾಜಕಾರಣ ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪರವನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಹಿಂದಿನ ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಮಂಜೂರಾಗಿದ್ದ ಯೋಜನೆಗಳನ್ನು ತಡೆಹಿಡಿಯಲಾಗಿದೆ.ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು.ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಅವರು ಗುಡುಗಿದರು.
ಕನಕಪುರ ತಾಲ್ಲೂಕಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕು ಎಂಬುದು ತಮ್ಮ ಜೀವನದ ಆಸೆಯಾಗಿತ್ತು.ಅದರಂತೆ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್‍ಗಾಂಧಿ ಅವರಲ್ಲಿ ಮನವಿ ಮಾಡಿ ವೈದ್ಯಕೀಯ ಖಾತೆ ಪಡೆದು ಕುಮಾರಸ್ವಾಮಿ ಅವರಿಗೆ ಎಲ್ಲವನ್ನು ಮನವರಿಕೆ ಮಾಡಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿಸಿಕೊಂಡೆ.ಈ ಕಾಲೇಜಿನ ಕಾಮಗಾರಿಗಳನ್ನು ಆರಂಭಿಸಲು ಟೆಂಡರ್ ಅಂತಿಮಗೊಂಡು ಕಾರ್ಯಾದೇಶ ಆಗಿದ್ದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟದಲ್ಲಿ ಕನಕಪುರ ವೈದ್ಯಕೀಯ ಕಾಲೇಜು ಮಂಜೂರಾತಿಯನ್ನು ರದ್ದುಪಡಿಸಿದ್ದಾರೆ ಎಂದು ದೂರಿದರು.
ಕನಕನಪುರ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲಾಗಿದೆ.ಇದಕ್ಕೆ ನನ್ನ ಅಭ್ಯಂತರವಿಲ್ಲ. ಎಲ್ಲಿ ಬೇಕಾದರೂ ಹೊಸ ವೈದ್ಯಕೀಯ ಕಾಲೇಜು ಮಾಡಲಿ ಆದರೆ ಕನಕಪುರಕ್ಕೆ ಮಂಜೂರಾಗಿದ್ದನ್ನು ರದ್ದು ಮಾಡಿರುವುದು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಇಂದು ದೆಹಲಿಗೆ ತೆರಳುತ್ತಿದ್ದೇನೆ. ನಾಳೆ ದೆಹಲಿಯಿಂದ ವಾಪಸ್ ಬರುತ್ತೇನೆ. ಶನಿವಾರದವರೆಗೂ ಕಾಯುತ್ತೇನೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ತೀರ್ಮಾನವನ್ನು ಹಿಂಪಡೆಯದಿದ್ದರೆ ಗಣೇಶ್-ಗೌರಿ ಹಬ್ಬವನ್ನು ಲೆಕ್ಕಿಸದೆ ವಿಧಾನಸೌಧದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತೇನೆ. ನನ್ನ ಜೀವ ಹೋದರೂ ಚಿಂತೆಯಿಲ್ಲ. ಉಸಿರು ಇರುವವರೆಗೂ ಧರಣಿ ಕೂರುತ್ತೇನೆ ಎಂದು ಅವರು ಹೇಳಿದರು.
ಈ ಹಿಂದೆ ನಾನು ಸಚಿವನಾಗಿದ್ದಾಗ ಯಡಿಯೂರಪ್ಪ ಅವರ ಕ್ಷೇತ್ರದ ಯೋಜನೆಗಳು, ಅವರ ಪುತ್ರ, ಸಂಸದ ರಾಘವೇಂದ್ರ ಅವರ ಕ್ಷೇತ್ರಕ್ಕೆ ಅನುದಾನ, ಮಂಜೂರಾತಿ ಎಲ್ಲವನ್ನು ನೀಡಿದ್ದೇನೆ. ನಾನು ಎಂದೂ ಈ ರೀತಿಯ ದ್ವೇಷದ ರಾಜಕಾರಣ ಮಾಡಿಲ್ಲ ಎಂದರು.
ಅಧಿಕಾರದಲ್ಲಿರುವವರು ಹೃದಯ ವೈಶ್ಯಾಲ್ಯತೆ ಹೊಂದಿರಬೇಕು.ಎಲ್ಲರನ್ನು ಸಮಾನವಾಗಿ ಕಾಣಬೇಕು.ಅಖಂಡ ಕರ್ನಾಟಕ ಒಂದೇ ಎಂಬ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದ ಅವರು, ಈಗಲಾದರೂ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದನ್ನು ಬಿಡಲಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ