ಬೆಂಗಳೂರು
ದೇಶದ ಆರ್ಥಿಕ ಹಿಂಜರಿಕೆಯ ಪರಿಣಾಮವಾಗಿ ಕರ್ನಾಟಕವೂ ಸಂಪನ್ಮೂಲ ಸಂಗ್ರಹದಲ್ಲಿ ದು:ಸ್ಥಿತಿಗೆ ತಲುಪಿದ್ದು ಈ ಹಿನ್ನೆಲೆಯಲ್ಲಿ 2020-21 ರ ಬಜೆಟ್‍ಗೆ ಹಣ ಹೊಂದಿಸಲು ಸಿಎಂ ಯಡಿಯೂರಪ್ಪ ಪರದಾಡುವ ಸ್ಥಿತಿ ಬಂದಿದೆ.
ವಾಹನ ಮಾರಾಟಗಳ ಕುಸಿತವಾಗಿರುವ ಬಾಬ್ತಿನಲ್ಲಿ ನಾಲ್ಕು ನೂರಾ ಅರವತ್ತು ಕೋಟಿ ರೂಪಾಯಿಗಳಷ್ಟು ಆದಾಯ ಕಡಿಮೆಯಾಗಿದ್ದು ಇದೇ ರೀತಿ ಅಬಕಾರಿಯನ್ನು ಹೊರತುಪಡಿಸಿ ಬೇರೆಲ್ಲ ಇಲಾಖೆಗಳು ನಿರೀಕ್ಷಿತ ಆದಾಯ ಸಂಗ್ರಹಿಸಲಾಗದೆ ನರಳುತ್ತಿವೆ.
ಇದೇ ಕಾರಣಕ್ಕಾಗಿ ವಿವಿಧ ಇಲಾಖೆಗಳಿಂದ ಬರಬೇಕಿರುವ ತೆರಿಗೆಯನ್ನು ಮಾರ್ಚ್ ಅಂತ್ಯದೊಳಗಾಗಿ ಕಟ್ಟು ನಿಟ್ಟಾಗಿ ಸಂಗ್ರಹಿಸಲೇಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಿಗ್ನಲ್ ನೀಡಿದ್ದಾರೆ.
ಆದರೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಆರ್ಥಿಕ ಹಿಂಜರಿತದ ಹೊಡೆತ ರಾಜ್ಯಕ್ಕೂ ತಟ್ಟಿದೆ ಎಂದು ಹೇಳದೆ,ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 61,245 ಕೋಟಿ ರೂ.ತೆರಿಗೆ ಸಂಗ್ರಹ ಮಾಡಿ ರಾಷ್ಟ್ರದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಸಮರ್ಥಿಸಿಕೊಂಡರಾದರೂ ಮಧ್ಯೆ,ಮಧ್ಯೆ ವಸ್ತುಸ್ಥಿತಿಯ ವಿವರ ನೀಡಬೇಕಾದಾಗ ಅನಿವಾರ್ಯವಾಗಿ ಸಧ್ಯದ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
2019-20ನೇ ಸಾಲಿಗೆ 76,046 ಕೋಟಿ ವಾಣಿಜ್ಯ ಸಂಗ್ರಹದ ಗುರಿಯಿತ್ತು. ಡಿಸೆಂಬರ್ ವೇಳೆಗೆ 55,984 ಕೋಟಿ ಸಂಗ್ರಹವಾಗಿ ಶೇ.73.6ರಷ್ಟು ಗುರಿ ಸಾಧನೆಯಾಗಿದೆ ಎಂದರು.ಜಿಎಸ್‍ಟಿಯಲ್ಲೂ ಶೇ.14.2ರಷ್ಟು ಬೆಳವಣಿಗೆಯಾಗಿದೆ. 2020ರ ಏಪ್ರಿಲ್ 1ರಿಂದ ಜಿಎಸ್‍ಟಿ ಪಾವತಿಯ ಹೊಸ ನಮೂನೆಗಳು ಜಾರಿಗೆ ಬರಲಿವೆ. ಇವುಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಈ ನಮೂನೆಗಳ ಪರಿಕ್ಷಾರ್ಥ ಪ್ರಯೋಗದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಸ್‍ಗಳ ಮೂಲಕ ಸರಕು ಸಾಗಾಣಿಕೆ ಮಾಡಿ ತೆರಿಗೆ ವಂಚಿಸಲಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ತೆರಿಗೆ ವಂಚನೆಯಾಗುತ್ತಿದೆ. ಸರಕು ಸಾಗಾಣಿಕೆ ಮೇಲೆ ಕಳೆದ ತಿಂಗಳು ಸುಮಾರು 2500 ಪರಿಶೀಲನೆಗಳು ನಡೆದಿವೆ. ಇನ್ನು ಮುಂದೆ ಮತ್ತಷ್ಟು ಪರಿಶೀಲನೆ ನಡೆಯಬೇಕು. ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗುಪ್ತಚರ ಮತ್ತು ಕಾರ್ಯಾಚರಣೆ ಪಡೆ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕೆಂದು ಯಡಿಯೂರಪ್ಪ ಸಲಹೆ ನೀಡಿದರು.
ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಶ್ರಮವಹಿಸಿ ಗುರಿ ಮೀರಿದ ತೆರಿಗೆ ಸಂಗ್ರಹ ಮಾಡಿ ಎಂದರು.ಅಬಕಾರಿ ಇಲಾಖೆಯಲ್ಲಿ ಈ ವರ್ಷ 20,950ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿತ್ತು. ಈವರೆಗೂ 16,188 ಕೋಟಿ ರೂ. ಸಂಗ್ರಹವಾಗಿ ಶೇ.77.23ರಷ್ಟು ಸಾಧನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1165.33 ಕೋಟಿಗೂ ಹೆಚ್ಚು ಸಂಗ್ರಹವಾಗಿದ್ದು, ಶೇ.7.76ರಷ್ಟು ಬೆಳವಣಿಗೆ ಕಂಡಿದೆ ಎಂದು ವಿವರಿಸಿದರು.
ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ಗುರಿ ಸಾಧನೆಯಾಗಿದೆ. ಅಬಕಾರಿ ಇಲಾಖೆಯ 39 ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ತರಲಾಗಿದೆ. 25 ಸೇವೆಗಳನ್ನು ಆನ್‍ಲೈನ್ ಮೂಲಕ ಒದಗಿಸಲಾಗಿದೆ. ಚಿಲ್ಲರೆ ಮಾರಾಟ ಲೈಸೆನ್ಸ್, ಮದ್ಯ ಉತ್ಪಾದನಾ ಘಟಕಗಳ ಲೈಸೆನ್ಸ್‍ಗಳನ್ನು ಆನ್‍ಲೈನ್ ಮೂಲಕವೇ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಾರಿಗೆ ಇಲಾಖೆಗೆ 7,100 ಕೋಟಿ ತೆರಿಗೆ ಸಂಗ್ರಹದ ಗುರಿ ಇತ್ತು. 6,602 ಕೋಟಿ ರೂ. ಸಾರಿಗೆ ಸಂಸ್ಥೆಗಳಿಂದ 498ಕೋಟಿ ಆದಾಯದ ಗುರಿ ಇತ್ತು. ಈವರೆಗೂ 4,864 ಕೋಟಿ ಸಂಗ್ರಹವಾಗಿದೆ. ವಾಹನಗಳ ಮಾರಾಟ ಕುಸಿತವಾಗಿರುವುದರಿಂದ 460 ಕೋಟಿ ಕೊರತೆಯಾಗಿದೆ. ವರ್ಷಾಂತ್ಯಕ್ಕೆ ಸುಮಾರು 300 ಕೋಟಿ ಕೊರತೆಯಾಗುವ ಸಾಧ್ಯತೆ ಇದೆ. ಮೋಟಾರು ಕಾಯ್ದೆ ಉಲ್ಲಂಘನೆ ಮತ್ತು ತೆರಿಗೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು. ಕೊರತೆಯ ತೆರಿಗೆ ಸಂಪನ್ಮೂಲಗಳನ್ನು ಬೇರೆ ಮೂಲಗಳಿಂದ ಸಂಗ್ರಹಿಸುವುದಾಗಿ ಹೇಳಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 11,828 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿದ್ದು, ಈವರೆಗೆ 8,297 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 410 ಕೋಟಿ ಹೆಚ್ಚು ಸಂಗ್ರಹವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ ತೃಪ್ತಿದಾಯಕವಾಗಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದಾಗ. ಅಧಿಕಾರಿಗಳು ವಾಣಿಜ್ಯ ಮತ್ತು ವಹಿವಾಟಿನಲ್ಲಿ ಹಿನ್ನಡೆಯಾಗಿರುವುದು ಸಂಪನ್ಮೂಲ ಕ್ರೂಢೀಕರಣಕ್ಕೆ ತೊಡಕಾಗಿದೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದರು.
ಇದರಿಂದ ಸಿಟ್ಟಾದ ಮುಖ್ಯಮಂತ್ರಿಗಳು, ಕುಂಟು ನೆಪ ಹೇಳುವುದನ್ನು ಬಿಟ್ಟು ದಕ್ಷತೆಯಿಂದ ಕೆಲಸ ಮಾಡಿರಿ, ವ್ಯಾಪಾರ ವಹಿವಾಟಿನಲ್ಲಿ ಕುಂಟಿತವಾಗಿದೆ ಎಂಬುದು ನೆಪವಷ್ಟೇ. ತೆರಿಗೆ ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಪ್ರಯತ್ನ ಮಾಡುತ್ತಿಲ್ಲ. ವಸೂಲಿಯಾಗದ ತೆರಿಗೆ ವಿಷಯದಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕಾದರೆ, ಅಭಿವೃದ್ಧಿಯಾಗಬೇಕಾದರೆ ಸಂಪನ್ಮೂಲ ಕ್ರೂಢೀಕರಣ ಉತ್ತಮವಾಗಿರಬೇಕು. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಯಾವ ರೀತಿಯ ಬೆಂಬಲ ಕೊಡಲು ಸಿದ್ಧನಿದ್ದೇನೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಸರ್ಕಾರಿ ಕೆಲಸ ಮಾಡಿ ಮುಗಿಸಿದರೆ ಸಾಕು ಎಂಬ ಧೋರಣೆ ಇರುವವರಿಗೆ ಉಳಿಗಾಲ ಇಲ್ಲ. ಸಂಪನ್ಮೂಲ ಕ್ರೂಢೀಕರಣದಲ್ಲಿ ಯಾವುದೇ ರಾಜಿ ಇಲ್ಲ ಎಂದು ಯಡಿಯೂರಪ್ಪ ನಿಷ್ಟೂರವಾಗಿ ಹೇಳಿದ್ದಾರೆ.
ಅಬಕಾರಿ, ಗಣಿ ಮತ್ತು ಭೂ ಸುಧಾರಣೆ ತೆರಿಗೆಗಳು ನಿರೀಕ್ಷಿತ ಮಟ್ಟದಲ್ಲಿ ವಸೂಲಿಯಾಗುತ್ತಿವೆ. ಆದರೆ, ವಾಣಿಜ್ಯ, ಸಾರಿಗೆ , ನೋಂದಣಿ ಮತ್ತು ಮುದ್ರಾಂಕ ತೆರಿಗೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು.ಸಾರಿಗೆ ಇಲಾಖೆಯಲ್ಲಿ ವಾಹನಗಳ ನೋಂದಣಿಯಲ್ಲಿ ಕುಸಿತ ಕಂಡಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಗೊಳ್ಳುವ ಹಂತದಲ್ಲಿ ಸಹಜವಾಗಿ ತೆರಿಗೆ ಸಂಗ್ರಹ ಕುಂಟಿತಗೊಳ್ಳುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ರಿಯಲ್ ಎಸ್ಟೇಟ್ ಕೂಡ ಬಿದ್ದು ಹೋಗಿದ್ದು, ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲೂ ನಿರೀಕ್ಷಿತ ಗುರಿ ತಲುಪಲು ಕಷ್ಟವಾಗಬಹುದು ಎಂದು ಅಧಿಕಾರಿಗಳು ಹೇಳಿದರು.ಸೋರಿಕೆಯನ್ನು ತಡೆಗಟ್ಟಿ ವಸೂಲಿ ಆಗಬೇಕಾದ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಗುರಿ ತಲುಪುವುದು ಕಷ್ಟವಲ್ಲ. ಆರ್ಥಿಕ ಇಲಾಖೆ ಬಗ್ಗೆ ನನಗೆ ಅನುಭವ ಇದೆ. ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ ಕಠಿಣ ಶಬ್ಧಗಳಲ್ಲಿ ಮುಖ್ಯಮಂತ್ರಿ ಬುದ್ದಿವಾದ ಹೇಳಿದರು.
ಬಜೆಟ್ ವೇಳೆಗೆ ಸಂಪನ್ಮೂಲ ಕ್ರೂಢೀಕರಣದಲ್ಲಿ ಆಶಾದಾಯಕವಾದ ಪ್ರಗತಿ ಆಗದೇ ಇದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಈಗಾಗಲೇ ಪ್ರವಾಹ, ರೈತರ ಸಾಲ ಮನ್ನಾ, ಸರ್ಕಾರಿ ನೌಕರರ ವೇತನ ಆಯೋಗ ಸೇರಿದಂತೆ ಹಲವಾರು ರೀತಿಯ ಖರ್ಚುಗಳಿಂದ ಬೊಕ್ಕಸಕ್ಕೆ ಹೊರೆಯಾಗಿದೆ.
ಜಿಎಸ್‍ಟಿಯಿಂದ ರಾಜ್ಯಕ್ಕೆ ಬರಬೇಕಾದ ಸುಮಾರು 3700ಕೋಟಿ ರೂ. ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ತೀವ್ರವಾಗಿದೆ. ಸ್ವಂತ ಸಂಪನ್ಮೂಲಗಳ ಕ್ರೂಢೀಕರಣದ ಮೇಲೆ ಗಮನ ಕೇಂದ್ರೀಕರಿಸಿ. ಮುಂದಿನ ತ್ರೈಮಾಸಿಕ ವೇಳೆಗೆ ಗುರಿ ಮೀರಿದ ತೆರಿಗೆ ಸಂಗ್ರಹವಾಗಬೇಕೆಂದು ಅವರು ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ