ಬೆಂಗಳೂರು:
ಹಾಲಿ ಲೋಕಸಭಾ ಚುನಾವಣೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ ನೇತೃತ್ವದ INDIA ಕೂಟ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಖಾತೆಗೆ 1 ಲಕ್ಷ ರೂ ಜಮೆ ಮಾಡಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ನಗರದ ವಿವಿಧ ಅಂಚೆ ಕಚೇರಿ ಮುಂದೆ ಜನ ಸಾಲುಗಟ್ಟಿ ನಿಲ್ಲಲಾರಂಭಿಸಿದ್ದಾರೆ.
ಪ್ರಚಾರದಲ್ಲಿ ರಾಹುಲ್ ಗಾಂಧಿ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ.
ರಾಹುಲ್ ಗಾಂಧಿ ಘೋಷಣೆ ಪರಿಣಾಮ, ಪೋಸ್ಟ್ ಆಫೀಸ್‌ಗಳಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಇವರಲ್ಲಿ ಹೆಚ್ಚಾಗಿ ಮುಸ್ಲಿಂ ಮಹಿಳೆಯರೇ ಕಂಡು ಬರುತ್ತಿದ್ದಾರೆ. ಪ್ರತಿ ತಿಂಗಳು 8500 ರೂ. ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.
ಇನ್ನು ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಕಚೇರಿ ಮುಂದೆ ಮುಗಿಬೀಳುತ್ತಿರುವ ಸುತ್ತಮುತ್ತಲಿನ ಶಿವಾಜಿನಗರ, ವಸಂತನಗರ ಮುಂತಾದೆಡೆಗಳ ಮಹಿಳೆಯರು, ಅವರ ಜೊತೆಗೆ ಬರುತ್ತಿರುವ ಪುರುಷರು ಅಂಚೆ ಕಚೇರಿ ಆವರಣವನ್ನು ಅಕ್ಷರಶಃ ಸಂತೆಯಾಗಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ