ವಾಗ್ಮೀಯ ಕಲೆಯ ಮೂಲಕ ಉತ್ತಮ ಸಂಶೋಧಕರಾಗಲು ಸಾಧ್ಯ.

ಹೊಸಪೇಟೆ

    ಸಂಶೋಧನಾ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಮುಕ್ತ ಚರ್ಚೆ ಮತ್ತು ಸಂವಾದಗಳನ್ನು ಮಾಡುವ ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಲು ಸಾಧ್ಯ. ಆ ಮೂಲಕ ಭವಿಷ್ಯದಲ್ಲಿ ಉತ್ತಮ ವಾಗ್ಮಿಗಳಾಗಬಹುದು ಮತ್ತು ಉತ್ತಮ ಸಂಶೋಧಕರಾಗಲು ಸಾಧ್ಯವಿದೆ ಎಂದು ಕನ್ನಡ ವಿ.ವಿ.ಯ ಕುಲಪತಿ ಡಾ.ಸ.ಚಿ.ರಮೇಶ ತಿಳಿಸಿದರು.

    ಇಲ್ಲಿನ ಕನ್ನಡ ವಿ.ವಿ.ಯಲ್ಲಿ ಹಾಲುಮತ ಅಧ್ಯಯನ ಪೀಠವು ಹಮ್ಮಿಕೊಂಡಿದ್ದ ಹಾಲುಮತ ಮಂಟಪ-1 ಎಂಬ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಮಂಟಪ ಎನ್ನುವ ವಿಚಾರಧಾರೆಯನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಆರಂಭಿಸಿದರು. ಅವರು ವಚನ ಸಾಹಿತ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾಯಕದಲ್ಲಿ ಅನ್ಯ ಜಾತಿಗಳ ಜನರನ್ನು ಒಗ್ಗೂಡಿಸಿ ಅನುಭವ ಮಂಟಪದಲ್ಲಿ ಸಮಸಮಾಜ ನಿರ್ಮಾಣ ಹಾಗೂ ಸಮಾನತೆಯನ್ನು ಕಾಪಾಡಲು ಶ್ರಮಿಸಿದರು. ಅಲ್ಲಿ ಕಲ್ಯಾಣ ಸಮಾಜಕ್ಕೆ ಪೂರಕವಾಗುವಂತಹ  ವಿಚಾರಗಳನ್ನು ಚರ್ಚೆ ಮತ್ತು ಸಂವಾದದ ಮೂಲಕ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದರು ಎಂದರು.

    ವಿದ್ಯಾರ್ಥಿಗಳು ಇಂತಹ ಚರ್ಚಾ ವೇದಿಕೆಗಳನ್ನು ಉಪಯುಕ್ತವಾಗಿ ಬಳಸಿಕೊಂಡು ಹೊಸ ಹೊಸ ಆಲೋಚನೆಗಳನ್ನು, ಚಿಂತನೆಗಳನ್ನು ಮಾಡುವ ಮೂಲಕ ಉತ್ತಮ ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತವೆ. ಉತ್ತಮ ಜೀವನ ನಡೆಸಲು, ಅಂತರ್ಜಲ ಕಾಪಾಡುವ, ಗಿಡಮರಗಳನ್ನು ಬೆಳೆಸುವ ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡುವ ಹೊಣೆ ನಮ್ಮೆಲ್ಲರದ್ದು. ಇಂತಹ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿ ಜನರಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಜಾಗೃತಿ ಮೂಡಿಸಿ ಉತ್ತಮ ಜೀವನ ನಡೆಸಲು ಸಂಶೋಧನಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಹಾಲುಮತ ಮಂಟಪ-1 ಉದ್ಘಾಟನಾ ಕಾರ್ಯಕ್ರಮದಲ್ಲಿ ಕುರುಬ ಸಮುದಾಯ: ಸಾಂಸ್ಕøತಿಕ ಅನನ್ಯತೆ ಎನ್ನುವ ವಿಷಯ ಮಂಡನೆ ಮಾಡಿದ ದಾವಣಗೆರೆಯ ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಎಂ.ಪಾಟೀಲ್ ಮಾತನಾಡಿ, ಹಾಲುಮತ ಸಮುದಾಯದ ಜನರು ಒಂದು ನಿರ್ದಿಷ್ಟ ಸ್ಥಳದ ವಾಸಿಗರಲ್ಲ, ಇವರು ಅಲೆಮಾರಿ ಜೀವನ ಸಾಗಿಸುತ್ತಿದ್ದರು.

     ಇಂತಹ ಸಂದರ್ಭದಲ್ಲಿ ಅನೇಕ ಕಸುಬು(ವೃತ್ತಿ)ಗಳನ್ನು ಮಾಡುವ ಮೂಲಕ ಹೊಸ ಹೊಸ ಉಪಜಾತಿಗಳಾದ ಅಂಬಿಗ, ಗಂಗಾಮತ, ಹಾಲುಮತ, ಕುರುಬ, ಕುಂಚಿಟಿಗ, ಪಂಚಮಸಾಲಿ ಸೇರಿದಂತೆ ಇತರೆ 40ಕ್ಕೂ ಹೆಚ್ಚು ಉಪಜಾತಿಗಳು ಹುಟ್ಟಿಕೊಂಡವು. ಇಂತಹ ವಿಚಾರಗಳನ್ನು ಚರ್ಚಾ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಹೊರತು ಬೇರೆ ಯಾವ ವಿಚಾರಗಳಿಂದಲ್ಲ. ಹಾಲುಮತ ಸಮುದಾಯ ಒಂದು ಬುಡಕಟ್ಟು ಸಮುದಾಯ. ಇಂತಹ ವಿಚಾರಗಳನ್ನು ತಿಳಿದುಕೊಳ್ಳಲು ಸಂಶೋಧಕರು ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಮಾತನಾಡಿದರು.

     ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿ, ಕಳೆದ 10 ವರ್ಷಗಳಿಂದ ಹಾಲುಮತ ಅಧ್ಯಯನ ಪೀಠವು ಚರ್ಚೆ, ಕಾರ್ಯಕ್ರಮ, ಸಂವಾದ, ಪ್ರಕಟಣೆಗಳ ಮೂಲಕ ಜನರಿಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇನ್ನು ಪ್ರತಿ 15 ದಿನಗಳಿಗೊಮ್ಮೆ ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಲುಮತ ಮಂಟಪದಲ್ಲಿ ಚರ್ಚೆ ಮತ್ತು ಸಂವಾದಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದ್ದು, ಇದರ ಉಪಯೋಗವನ್ನು ವಿದ್ಯಾರ್ಥಿಗಳು, ಚಿಂತಕರು ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಿದರು.

     ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ನಿಕಾಯದ ಡೀನರಾದ ಡಾ.ಕೇಶವನ್ ಪ್ರಸಾದ್, ಉಪಕುಲಸಚಿವ ಡಾ.ಎ. ವೆಂಕಟೇಶ, ಹಾಲುಮತ ಸಲಹಾ ಸಮಿತಿಯ ಸದಸ್ಯ ಎನ್.ಎಂ. ಅಂಬಲಿ, ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link