ತುಮಕೂರು :
ಮಾರ್ಚ್ 27 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಹತ್ತರ ಘೋಷಣೆ ಹೊರಡಿಸಿ ಬ್ಯಾಂಕುಗಳ ಸಾಲದ ಮಾಸಿಕ ಕಂತು(ಇಎಂಐ) ಪಾವತಿಸುವಿಕೆಯನ್ನು 3 ತಿಂಗಳ ಕಾಲ ಮುಂದೂಡಿತು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಇಎಂಐ ಕಂತು ಸಲ್ಲಿಸುವುದನ್ನು ಜೂನ್ ತಿಂಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಿತು. ಕೊರೊನಾದಿಂದ ಕಂಗೆಟ್ಟ ಜನತೆಗೆ ಇದೊಂದು ಆಶಾದಾಯಕ ಬೆಳವಣಿಗೆ ಎಂದೇ ಕಂಡು ಬಂದಿತು. ಆರ್.ಬಿ.ಐ ನ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಬಹಳಷ್ಟು ಜನ ಖುಷಿಪಟ್ಟರು.
ಬ್ಯಾಂಕುಗಳ ಸಾಲದ ಹೊರೆ ಮೂರು ತಿಂಗಳ ವರೆಗೆ ಮುಂದೆ ಹೋಯಿತಲ್ಲ ಎಂದೇ ಭಾವಿಸಿದರು. ಆದರೆ ಅದರ ಸಾಧಕ-ಬಾಧಕಗಳನ್ನು ಗಮನಿಸುತ್ತಾ ಹೋದರೆ ಜನ ಅಂದುಕೊಂಡಷ್ಟರ ಮಟ್ಟಿಗೆ ಇದು ನೆಮ್ಮದಿ ನೀಡುವ ಯೋಜನೆಯಂತೂ ಅಲ್ಲ. ಆರ್ಥಿಕ ವಲಯದ ಪರಿಣಿತರಿಗೆ, ಲೆಕ್ಕ ಪರಿಶೋಧಕರು ಹಾಗೂ ಕೆಲವೇ ಉದ್ಯಮ ವಲಯದ ಮಂದಿಗೆ ಮಾತ್ರವೆ ಈ ಯೋಜನೆಯ ನೈಜತೆ ಅರ್ಥವಾಗುತ್ತಿದೆ. ಉಳಿದವರೆಲ್ಲಾ ನಿರಾಳರಾಗಿದ್ದಾರೆ. ಹೇಗೂ 3 ತಿಂಗಳ ಅವಕಾಶ ಸಿಕ್ಕಿದೆ. ಮುಂದೆ ನೋಡೋಣ ಎಂದು ಕೈ ಕಟ್ಟಿ ಕುಳಿತರೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾದೀತು.
ಗ್ರಾಹಕರು ಮೌನವಹಿಸಿ ಕುಳಿತರೆ 3 ತಿಂಗಳ ನಂತರ ಮತ್ತಷ್ಟು ಹೊರೆ ಅನುಭವಿಸಬೇಕು ಎಂಬುದು ಮಾತ್ರ ನಿಶ್ಚಿತ. ಮುಂದೆ ಹೆಚ್ಚು ಹಣ ಒಗ್ಗೂಡಿಸಿ ಪಾವತಿಸುವ ಸಂಕಷ್ಟಕ್ಕೆ ಗ್ರಾಹಕರು ಸಿಲುಕಬೇಕಾಗುತ್ತದೆ ಎಂಬುದು ಮಾತ್ರ ಶತಸಿದ್ಧ.
ಆರ್‍ಬಿಐ ಘೋಷಣೆಯ ನಂತರ ಕೆಲವು ಬ್ಯಾಂಕುಗಳು ಗ್ರಾಹಕರಿಗೆ ಮೂರು ರೀತಿಯ ಆಯ್ಕೆಯ ಅವಕಾಶಗಳನ್ನ ತಿಳಿಸಿ ನಿಗಧಿತ ವಾಯ್ದೆಯೊಳಗೆ ಆಯ್ಕೆ ಯಾವುದೆಂಬುದನ್ನು ತಿಳಿಸುವಂತೆ ಈಗಾಗಲೇ ಮಾಹಿತಿ ರವಾನಿಸುತ್ತಿದೆ.
ಮುಂದೂಡುವಿಕೆಯ ಈ ಅವಧಿಯನ್ನು ಆಯ್ಕೆ ಅವಕಾಶವನ್ನು ಮಾಡಿಕೊಳ್ಳದೇ ಇರುವುದು, ತಮ್ಮ ಇಎಂಐ ಪಾವತಿಸುವ ಅವಧಿಯಲ್ಲಿ ಬಡ್ಡಿ ಒಳಗೊಂಡಂತೆ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳುವುದು ಹಾಗೂ ಮೂರು ತಿಂಗಳ ಬಡ್ಡಿ ಗಣನೆಗೆ ತೆಗೆದುಕೊಂಡು ಮಾಸಿಕ ಇಎಂಐ ಜೋಡಿಸಿ ಮರುಪಾವತಿಸುವ ಸೌಲಭ್ಯ. ಈ ಮೂರರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಬ್ಯಾಂಕುಗಳಿಗೆ ಗ್ರಾಹಕರು ನಿಗದಿತ ಅವಧಿಯಲ್ಲಿ ತಿಳಿಸಬೇಕು. ಈ ಹೊಣೆಗಾರಿಕೆಯನ್ನು ಗ್ರಾಹಕನ ಮೇಲೆ ಹಾಕಲಾಗಿದೆ. ಗ್ರಾಹಕರು ಹೇಗೆ ಮಾಹಿತಿ ರವಾನಿಸಬೇಕು ಎಂಬುದೇ ಅದೆಷ್ಟೋ ಜನರಿಗೆ ಇನ್ನೂ ತಿಳಿದಿಲ್ಲ. ಹೀಗಿರುವಾಗ ಬ್ಯಾಂಕ್‍ನಿಂದ ರವಾನೆಯಾಗುವ ಮಾಹಿತಿ ಅವಲೋಕಿಸಿ ಪ್ರತಿಕ್ರಯಿಸುವ ವಿಧಾನಗಳು ಎಲ್ಲರಿಗೂ ಸಾಧ್ಯವೇ? ಈ ಬಗ್ಗೆ ಪರ್ಯಾಯ ಮಾರ್ಗಗಳೇನು ಎಂಬ ಮಾಹಿತಿಯು ಇಲ್ಲ.
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಇಎಂಐ ಪಾವತಿಸುವಿಕೆಯ ಅವಧಿ ಮಾತ್ರ ಮುಂದೂಡಲಾಗಿದೆ. ಬಡ್ಡಿ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿಲ್ಲ. ಅಥವಾ ವಜಾಗೊಳಿಸಿಲ್ಲ. ಬ್ಯಾಂಕುಗಳು ಈ ಅವಧಿಯಲ್ಲಿನ ಬಡ್ಡಿ ಪಾವತಿಸುವಂತೆ ಕೇಳುವುದಿಲ್ಲ ಎಂದು ಯಾರಾದರೂ ತಿಳಿದಿದ್ದರೆ ಅದು ತಪ್ಪು ಗ್ರಹಿಕೆಯೆ ಹೊರತು ಬ್ಯಾಂಕ್‍ಗಳಂತು ಈ ವಿಷಯದಲ್ಲಿ ಯಾವುದೆ ಮುಲಾಜು ತೋರುವುದಿಲ್ಲ. ಈವರೆಗೆ ತಿಳಿದುವಂತೆ ಯಾವುದೇ ಬ್ಯಾಂಕ್ 3 ತಿಂಗಳ ಬಡ್ಡಿಯನ್ನು ಮನ್ನಾ ಮಾಡಿಲ್ಲ. ಈ ಬಗ್ಗೆ ಆರ್‍ಬಿಐ ಸಹಾ ಸ್ಪಷ್ಟಪಡಿಸಿಲ್ಲ. ಕೆಲವು ಗೊಂದಲಗಳು ಹಾಗೆಯೇ ಮುಂದುವರೆದಿವೆ. ಹೀಗಾಗಿ ಸಾಲಗಾರರಾಗಿರುವ ಗ್ರಾಹಕರು ಇಎಂಐ ಜೊತೆಗೆ ಬಡ್ಡಿಯನ್ನೂ ಒಟ್ಟಿಗೆ ಪಾವತಿಸುವ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಖಾತೆಯಲ್ಲಿ ಹಣ ಇದ್ದು, ಇಎಂಐ ಕಟ್ಟದಿದ್ದರೆ, ಬೇರೆ ಮೂಲಗಳಿಂದ ಹಣಕಾಸಿನ ಸೌಲಭ್ಯಗಳಿದ್ದೂ ಮುಂದೆ ಪಾವತಿಸಿದರಾಯಿತು ಎಂದು ನಿರ್ಲಕ್ಷಿಸಿದರೆ, ಅಂತಹವರಿಗೆ ಈ ನೀತಿ ದುಬಾರಿ ಕೊಡುಗೆಯಾಗಿ ಪರಿಣಮಿಸಲಿದೆ. ಅದರಲ್ಲೂ ಹೆಚ್ಚಿನ ಬಡ್ಡಿ ದರ ಇರುವ ಕ್ರೆಡಿಟ್ ಕಾರ್ಡ್ ಸಾಲ, ವೈಯಕ್ತಿಕ ಸಾಲ ಇರುವವರು ಪಾವತಿ ಆಯ್ಕೆಯನ್ನು ಮುಂದೂಡುವುದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಗೃಹ ಸಾಲ, ವಾಹನ ಸಾಲ ಇತ್ಯಾದಿ ಟರ್ಮ್ ಲೋನ್‍ಗಳ ಅವಧಿಯನ್ನು ಬ್ಯಾಂಕ್‍ಗಳು 3 ತಿಂಗಳ ಅವಧಿ ತಡೆದು ನಂತರ ಮುಂದುವರಿಸುವದರಿಂದ ಉಳಿಸಿಕೊಂಡ ಬಾಕಿ ಸಾಲದ ಜೊತೆಗೆ ಆಗ ಪಾವತಿಸಬೇಕಾಗಿರುವ ಹಣದ ಕೊರತೆ ಎದುರಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಇಎಂಐ ಪಾವತಿಸಬೇಕಾದ ಹೊಣೆಗಾರಿಕೆಗೆ ಒಂದು ಉದಾಹರಣೆ ನೀಡಬಹುದಾದರೆ: ಒಬ್ಬ ಗ್ರಾಹಕ 100 ತಿಂಗಳ ಇಎಂಐ ಕಟ್ಟಬೇಕಾಗಿರುತ್ತದೆ ಎಂದಿಟ್ಟುಕೊಳ್ಳಿ. ಈಗಿನ 3 ತಿಂಗಳ ಅವಧಿ ಗಣನೆಗೆ ತೆಗೆದುಕೊಂಡರೆ 103ಕ್ಕೆ ವಿಸ್ತರಣೆಯಾಗುತ್ತದೆ. 3 ತಿಂಗಳ ಇಎಂಐ ಜೊತೆಗೆ ನಿಗದಿತ ಬಡ್ಡಿ ಪಾವತಿಸಬೇಕು. ಇಲ್ಲಿ ಎದುರಾಗುವ ಮತ್ತೊಂದು ಸಮಸ್ಯೆಯೆಂದರೆ, ಬ್ಯಾಂಕುಗಳೊಂದಿಗೆ ವ್ಯವಹರಿಸುವ ಗ್ರಾಹಕ ತನ್ನ ಸಿಬಿಲ್ ಕ್ರೆಡಿಟ್ ರೇಟಿಂಗ್ (ಹಣಕಾಸಿನ ವಹಿವಾಟು ನಡೆಸುವ ಸಾಮಥ್ರ್ಯ ಅಳೆಯುವ ಒಂದು ಮಾನದಂಡ) ಕೂಡಾ ಕಳೆದುಕೊಳ್ಳಬೇಕಾಗುತ್ತದೇನೋ..? ಎನ್ನುವ ಆತಂಕವೂ ಇದ್ದೇ ಇದೆ.
ಕೊರೊನಾ ಬಿಕ್ಕಟ್ಟಿನ ಪರಿಣಾಮ ಎದುರಿಸುತ್ತಿರುವವರು ಅಂದರೆ, ಈ ಸಂದರ್ಭದ ದೈನಂದಿನ ವಹಿವಾಟಿನ ಕೊರತೆ ಉಂಟಾಗಿ ನಗದು ವ್ಯವಹಾರ ಸ್ಥಗಿತಗೊಂಡಿರುವವರು ಅಥವಾ ತಕ್ಷಣಕ್ಕೆ ನನ್ನ ಬಳಿ ಯಾವುದೇ ಹಣ ಇಲ್ಲ, ಏನು ಮಾಡಲಿ..? ಎಂದು ಚಿಂತಿಸುವವರು ಈ 3 ತಿಂಗಳ ಮುಂದೂಡಿಕೆ ಅವಧಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಉಳಿದವರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಣಕಾಸಿನ ಸಮಸ್ಯೆ ಇಲ್ಲದವರು, ಮನೆ ಸಾಲ, ಕಾರು ಸಾಲ ಇತ್ಯಾದಿ ಪಡೆದಿರುವವರು ನಿಗದಿತವಾಗಿ ಇಎಂಐ ಪಾವತಿಸುವುದರಿಂದ ಮುಂದೆ ಎದುರಾಗುವ ಹಣ ಕಾಸು ಮುಗ್ಗಟ್ಟಿನಿಂದ ಪಾರಾಗಬಹುದು. ಇಲ್ಲವಾದರೆ ಮತ್ತಷ್ಟು ಬಿಕ್ಕಟ್ಟು ಎದುರಾಗಿತ್ತದೆ ಎನ್ನುತ್ತಾರೆ ಹಣಕಾಸು ಪರಿಣಿತರು.
ಆರ್‍ಬಿಐ ಘೋಷಿಸುರುವ ಇಎಂಐ ಮುಂದೂಡಿಕೆ ಸಂಬಂಧಿಸಿದಂತೆ ಎದುರಾಗುತ್ತಿರುವ ಗೊಂದಲಗಳಿಗೆ ಬ್ಯಾಂಕುಗಳು ಸಮಂಜಸ ಮತ್ತು ಸೂಕ್ತ ಮಾಹಿತಿ ನೀಡುತ್ತಿಲ್ಲ. ಸಾಲ ವಸೂಲಿ ಮಾಡುವ, ಬಡ್ಡಿ ಪಾವತಿಸಿಕೊಳ್ಳುವ ಕಡೆಗಷ್ಟೇ ಗಮನಹರಿಸುತ್ತಿವೆ. ಆರ್‍ಬಿಐ ನ ಸುತ್ತೋಲೆಯಲ್ಲಿನ ಕೆಲವು ಗೊಂದಲಗಳನ್ನು (ಬಡ್ಡಿ ಇತ್ಯಾದಿ) ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿಲ್ಲ. ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಸಂದೇಶ ರವಾನಿಸುತ್ತಿವೆ. ಇದರ ಪರಿಣಾಮ ಸಾಲಗಾರರು ಗೊಂದಲಕ್ಕೀಡಾಗಿದ್ದಾರೆ. ಇಎಂಐ ಕಟ್ಟಲು ಬೇಕಾದಷ್ಟು ಬ್ಯಾಲೆನ್ಸ್ ಇಟ್ಟುಕೊಳ್ಳುವಂತೆ ಕೆಲವು ಬ್ಯಾಂಕ್‍ಗಳು ಸಂದೇಶ ರವಾನಿಸುತ್ತಿದ್ದರೆ ಇನ್ನು ಕೆಲವು ಬ್ಯಾಂಕ್‍ಗಳು ನಿಗದಿತ ಅವಧಿಯೊಳಗೆ ತಮ್ಮ ಆಯ್ಕೆ ತಿಳಿಸುವಂತೆ ಮಾಹಿತಿ ಕಳುಹಿಸುತ್ತಿವೆ. ಈ ನಿರ್ಬಂಧದ ಅವಧಿಯನ್ನು ಆಯ್ಕೆ ಮಾಡಿಕೊಂಡರೆ ಬಡ್ಡಿ ಸಮೇತ ಮುಂದೆ ಅಷ್ಟೂ ಕಂತು ಪಾವತಿಸಬೇಕಾಗಿರುವ ಎಚ್ಚರಿಕೆಯನ್ನು ನೀಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ