ಹುಳಿಯಾರು
ಚಿಕ್ಕನಾಯಕನಹಳ್ಳಿ ತಾಲೂಕಿನ ಮಾರ್ಗವಾಗಿ ಹಾಸನದಿಂದ ಚರ್ಲಪಲ್ಲಿಗೆ ಪೈಪ್ ಲೈನ್ ಮೂಲಕ ಅನಿಲ ಸಾಗಿಸುವ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಹಾಗೂ ಮರಗಳಿಗೆ ಪರಿಹಾರದ ಮೊತ್ತ ಘೋಷಿಸದೆ ಸರ್ವೆಗೆ ಮುಂದಾದರೆ ಉಗ್ರ ಪ್ರತಿಭಟನೆ ಎದರಿಸಬೇಕಾಗುತ್ತದೆ ಎಂದು ಗ್ಯಾಸ್ ಪೈಪ್ ಲೈನ್ ಹಾದು ಹೋಗುವ ಜಮೀನಿನ ರೈತರ ಎಚ್ಚರಿಕೆ ನೀಡಿದ ಘಟನೆ ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಸರ್ಕಲ್‍ನಲ್ಲಿ ಬುಧವಾರ ನಡೆಯಿತು.
ಈ ಸಂಬಂಧ ಹೊಯ್ಸಲಕಟ್ಟೆ ಸರ್ಕಲ್‍ನಲ್ಲಿ ಗ್ಯಾಸ್ ಪೈಪ್ ಲೈನ್ ಹಾದು ಹೋಗುವ ಜಮೀನಿನ ನೂರಾರು ರೈತರ ಸಭೆ ನಡೆಸಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡರು.ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಅವರು ಈ ಸಭೆಯಲ್ಲಿ ಮಾತನಾಡಿ, 2020ರ ಜನವರಿ 3 ರಂದು ಅನೇಕ ರೈತರು ಹಾಸನಕ್ಕೆ ತೆರಳಿ ಈ ಯೋಜನೆಯ ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿಬಂದಿದ್ದರು. ಪರಿಣಾಮ 2020ರ ಫೆಬ್ರವರಿ 5 ರಂದು ಹುಳಿಯಾರಿನಲ್ಲಿ ಆಕ್ಷೇಪಣೆ ಸಲ್ಲಿಸಿದ್ದ ರೈತರ ಸಭೆ ನಡೆಸಿದ್ದರು. ಆಗಲೂ ಸಹ ನಮ್ಮ ನಿಲುವಿಗೆ ನಾವು ಬದ್ದರಾಗಿ ದಬ್ಬಗುಂಟೆ ಮೇಲೆ ಗ್ಯಾಸ್ ಪೈಪ್‍ಲೈನ್ ಬೇಡವೆಂದು ಮತ್ತೊಂದು ಮನವಿ ಕೊಟ್ಟಿದ್ದೆವು. ಆದರೆ ಅಂದು ಭಾಗವಹಿಸಿದ್ದ ರೈತರಿಂದ ಸಭೆ ನಡೆಸಿರುವುದಕ್ಕೆ ಸಹಿ ಹಾಕಿ ಎಂದು ಮೋಸದಿಂದ ಮುಗ್ಧ ರೈತರಿಂದ ಸಹಿ ಪಡೆದು ಫೆಬ್ರವರಿ 14 ರಂದು ನಮ್ಮ ಆಕ್ಷೇಪಣೆ ಅರ್ಜಿ ವಜಾ ಮಾಡಿ ಈಗ ರೈತರ ಒಪ್ಪಿಗೆ ಇಲ್ಲದೆ ಸರ್ವೆಗೆ ಮುಂದಾಗಿದ್ದಾರೆ ಎಂದು ವಿವರಿಸಿದರು.
ಸರ್ವೆ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಭೂಮಿಗೆ, ತೆಂಗು, ಅಡಿಕೆಮ ಹುಣಸೆ, ಮಾವು, ಕರಿಬೇವು ಹೀಗೆ ವಿವಿಧ ಮರಗಳಿಗೆ, ಕೊಳವೆಬಾವಿಗಳಿಗೆ, ರೇಷ್ಮೆಗೆ, ಮನೆಗೆ ಎಷ್ಟು ಪರಿಹಾರ ಕೊಡುತ್ತೇವೆಂದು ತಿಳಿಸದೆ ಏಕಾಏಕಿ ಸರ್ವೆ ಮಾಡುತ್ತಿದ್ದಾರೆ. ಪರಿಹಾರದ ಸಂಬಂಧ ಪ್ರಶ್ನಿಸಿದರೆ ಭೂಸ್ವಾದೀನ ಮಾಡುವಾಗ ತಿಳಿಸಲಾಗುತ್ತದೆ ಎನ್ನುತ್ತಾರೆ. ಆದರೆ ಹಾಸನ ಮಾರ್ಗದಲ್ಲಿ ಈಗಾಗಲೇ ಭೂಮಿ ಸ್ವಾದೀನ ಪಡಿಸಿಕೊಂಡಿದ್ದರೂ ಪರಿಹಾರ ಹಣ ಕೊಟ್ಟಿಲ್ಲ. ಅವರು ಘೋಷಿಸಿರುವ ಪರಿಹಾರ ಮೊತ್ತವೂ ತೀರ ಕಡಿಮೆಯಿದೆ. ಹಾಗಾಗಿ ನಮ್ಮಲ್ಲಿ ಯಾವುದಕ್ಕೆ ಎಷ್ಟು ಪರಿಹಾರ ಕೊಡುತ್ತೇವೆಂದು ತಿಳಿಸಿದರೆ ಭೂಸ್ವಾದೀನಾಧಿಕಾರಿಗಳ ಮನವೊಲಿಸಿ ಕಡಿಮೆ ಇದ್ದರೆ ಹೆಚ್ಚು ಮಾಡಿಕೊಳ್ಳಬಹುದು.
ಹಾಗಾಗಿ ಪರಿಹಾರದ ವಿಚಾರವಾಗಿ ರೈತರನ್ನು ಕತ್ತಲೆಯಲ್ಲಿಟ್ಟು ಸರ್ವೆ ಮಾಡುವುದು ಬೇಡ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಅವರು ಮಾತನಾಡಿ, ಎರಡ್ಮೂರು ದಶಕಗಳ ಕಾಲ ಹಗಲಿರುಳೆನ್ನದೆ ಆರೈಕೆ ಮಾಡಿ ಕಷ್ಟಪಟ್ಟು ಬೆಳಸಿದ ಮರಗಳನ್ನು ಕಡಿಯುವಾಗ ರೈತನಿಗಾಗುವ ನೋವನ್ನು ಹೇಳಲಾಗುವುದಿಲ್ಲ. ಅಂತಹರದಲ್ಲಿ ಪರಿಹಾರದ ಮೊತ್ತ ಘೋಷಿಸದೆ ರೈತರ ವಿರೋಧದ ನಡುವೆಯೂ ಸರ್ವೆ ಮಾಡುತ್ತಿರುವುದು ಅಕ್ಷಮ್ಯ. ಈ ಹಿಂದೆ ಅರಳೀಕೆರೆಗೆ ಭಾಗದಲ್ಲೂ ಸಹ ಪವರ್ ಗ್ರಿಡ್ ಲೈನ್ ಹಾದುಹೋಗುವಾಗ ಪರಿಹಾರದ ಮೊತ್ತ ತೀರ ಕಡಿಮೆಯಿತ್ತು.
ಆಗ ರೈತ ಸಂಘ ಹೋರಾಟಕ್ಕೆ ಧುಮುಕಿದ ಪರಿಣಾಮ ಎರಡು ಪಟ್ಟು ಪರಿಹಾರ ಹೆಚ್ಚಿಸಿದರು. ಹಾಗಾಗಿ ಮೊದಲು ಪರಿಹಾರ ಮೊತ್ತ ತಿಳಿಸಿದರೆ ರೈತರು ಮುಂದಿನ ತೀರ್ಮಾನ ಕೈಗೊಳ್ಳಲು ಸಹಯವಾಗುತ್ತದೆ. ಅದನ್ನು ಬಿಟ್ಟು ಮೋಸದಿಂದ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ರಾಜ್ಯ ರೈತ ಸಂಘ ಇಲ್ಲಿನ ರೈತರ ಹೋರಾಟಕ್ಕೆ ಕೈ ಜೋಡಿಸಿ ಉಗ್ರ ಸ್ವರೂಪಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಮರೆನಡುಪಾಳ್ಯ, ದಬ್ಬಗುಂಟೆ, ಕಲ್ಲೇನಹಳ್ಳಿ, ಹೊಯ್ಸಲಕಟ್ಟೆ, ಲಕ್ಕೇನಹಳ್ಳಿ ಬಡಕೆಗುಡ್ಲು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು. ಅ.12 ರ ಸೋಮವಾರ ಜಿಲ್ಲಾಧಿಕಾರಿಗಳ ಬಳಿ ತೆರಳಿ ಮನವಿ ಸಲ್ಲಿಸುವಂತೆಯೂ, ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸದಿದ್ದರೆ ಪೊಲೀಸ್ ಇಲಾಖೆಯ ಅನುಮತಿ ಪಡೆದು ಅಹೋರಾತ್ರಿ ಧರಣಿ ನಡೆಸುವಂತೆಯೂ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
