ಹಾವೇರಿ
ಎಚ್.ಐ.ವಿ. ಹಾಗೂ ಏಡ್ಸ್ ಸೋಂಕು ತಡೆಯುವಲ್ಲಿ ಯುವಜನರ ಪಾತ್ರ ಪ್ರಮುಖವಾಗಿದೆ ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು.
ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಡ್ಸ್ ಹರಡುವಿಕೆಯಲ್ಲಿ 2017ರಲ್ಲಿ 25ನೇ ಸ್ಥಾನದಲ್ಲಿದ್ದ ಹಾವೇರಿ ಜಿಲ್ಲೆ ಇದೀಗ 28ನೇ ಸ್ಥಾನಕ್ಕೆ ಇಳಿಮುಖವಾಗಿದೆ. ಜಾಗೃತಿ ಕೆಲಸ ಹೆಚ್ಚಳವಾಗಿ ಜನರಲ್ಲಿ ಅರಿವು ಮೂಡಿದ ಪರಿಣಾಮ ಎಚ್.ಐ.ವಿ. ಏಡ್ಸ್ ಪ್ರಕರಣಗಳು ಇಳಿಮುಖವಾಗಿದೆ. ಸಂಕೋಚ ಸ್ವಭಾವವನ್ನು ಬಿಟ್ಟು ಸಕಾಲದಲ್ಲಿ ಪರೀಕ್ಷೆ, ಚಿಕಿತ್ಸೆಗಳನ್ನು ಪಡೆದರೆ ಇಂತಹ ಮಾರಕ ಸೋಂಕುಗಳಿಂದ ದೂರ ಉಳಿಯಬಹುದು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಚ್.ಐ.ವಿ. ಏಡ್ಸ್ ನಿಯಂತ್ರಣಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ಎಂಟು ಜನ ಸಿಬ್ಬಂದಿಗಳನ್ನು ಸನ್ಮಾನಿಸಿ ಸ್ಮರಣಿಕೆಗಳನ್ನು ನೀಡಲಾಯಿತು.
ತಾಲೂಕು ಪಂಚಾಯತಿ ಅಧ್ಯಕ್ಷ ಕರಿಯಪ್ಪ ಯಲ್ಲಪ್ಪ ಉಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಜ ಇತರರು ಉಪಸ್ಥಿತರಿದ್ದರು.
ಜಾತಾ: ಇದಕ್ಕೂ ಮುನ್ನ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಏಡ್ಸ್ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಜಾತಾವನ್ನು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ವೈ.ಎಲ್.ಲಾಡಖಾನ್ ಅವರು ಚಾಲನೆ ನೀಡಿದರು. ಕೃಷ್ಣ ಪರಿಜಾತ ಹಾಗೂ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಎಚ್.ಐ.ವಿ.ಏಡ್ಸ್ ಕುರಿತ ಜಾಗೃತಿ ಮೂಡಿಸಿದವು.
ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದರ್ಶಿ ಪಿ.ಎಂ.ಬನ್ನೂರ, ವಕೀಲರಾದ ಎಸ್.ಪಿ.ದೇವಸೂರ, ಎಸ್.ಸಿ.ಪಾಟೀಲ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ