ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ತಿರುಮಲ ವೈನ್ಸ್ ಶಾಪ್‍ನ ಶೀನಪ್ಪನವರಿಗೆ ಫೆ. 29 ರಂದು ಇದೇ ಗ್ರಾಮದ ಎಸ್.ಸಿ. ಕಾಲನಿಯ ಯುವಕರು ನಮ್ಮ ಗ್ರಾಮದ ಎಸ್.ಸಿ. ಕಾಲನಿ ಸೇರಿದಂತೆ ಇನ್ನಿತರ ಕಡೆ ಅಕ್ರಮ ಮದ್ಯ ಮಾರಾಟಕ್ಕೆ ನೀವು ಮದ್ಯ ಸರಬರಾಜು ಮಾಡಿದ್ದೆ ಆದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ಮದ್ಯ ಸೇವನೆಯಿಂದ ಬಹಳಷ್ಟು ಯುವಕರು ಅಕಾಲಿಕ ಮರಣ ಹೊಂದುತ್ತಿದ್ದಾರೆ. ನಾಲ್ಕಾರು ಕಡೆ ಅಕ್ರಮ ಮದ್ಯ ಮಾರಾಟ ಹಗಲಿರುಳೆನ್ನದೆ ರಾಜಾರೋಷವಾಗಿ ನಡೆಯುತ್ತಿದೆ. ಇತ್ತೀಚೆಗೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಕೆಲ ಮಹಿಳೆಯರು ಸಹ ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಆದರೂ ಸಹ ಸರ್ಕಾರದ ಜೀಪಿನಲ್ಲಿ ಅಬಕಾರಿ ಅಧಿಕಾರಿಗಳವರು ತಾಲ್ಲೂಕಿನ ಪರವಾನಗಿ ಪಡೆದಿರುವಂತಹ ವೈನ್ಸ್ ಶಾಪ್‍ಗಳಿಗೆ ಭೇಟಿ ನೀಡಿ ತಮ್ಮ ಕರ್ತವ್ಯ ಮುಗಿಯಿತೆಂದು ಕಾಲ್ಕೀಳುತ್ತಾರೆ. ಬಸ್ ನಿಲ್ದಾಣದ ಬಳಿಯೆ ಬೆಳಗ್ಗೆ ಐದು ಗಂಟೆಗೆ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ಪೋಲೀಸ್ ಠಾಣೆಗೆ ಕೇವಲ ಐದು ನೂರು ಮೀಟರ್ ದೂರದಲ್ಲಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವೈನ್ಸ್ ಶಾಪ್‍ನವರಿಗೆ ಎಚ್ಚರಿಕೆ ತಿಳಿಸಿದ ಯುವಕರು ಪೊಲೀಸ್ ಠಾಣೆಗೂ ಭೇಟಿ ನೀಡಿ, ಠಾಣೆಯಲ್ಲಿ ಕರ್ತವ್ಯ ನಿರತ ಎ.ಎಸ್.ಐ. ತಾರಾಸಿಂಗ್, ಪೇದೆ ಪ್ರಕಾಶ್‍ರವರಿಗೂ ಅಕ್ರಮ ಮದ್ಯ ಗ್ರಾಮದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಇನ್ನು ಮುಂದೆ ಗ್ರಾಮದ ಯಾವುದೇ ಭಾಗದಲ್ಲಿ ಅಕ್ರಮ ಮದ್ಯಮಾರಾಟ ಕಂಡು ಬಂದಲ್ಲಿ ರಸ್ತೆ ತಡೆ ಹಾಗೂ ಪೊಲೀಸ್ ಠಾಣೆಯ ಮುಂಭಾಗ ಉಗ್ರ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿರುತ್ತಾರೆ. ವಿಷಯವನ್ನು ಠಾಣಾಧಿಕಾರಿಯ ಗಮನಕ್ಕೆ ತರುವುದಾಗಿ ಎ.ಎಸ್.ಐ. ಪ್ರತಿಭಟನಾಕಾರರಿಗೆ ತಿಳಿಸಿದರು.
ಮಧುಗಿರಿ ತಾಲ್ಲೂಕಿನಲ್ಲಿ ಪರವಾನಗಿ ಪಡೆದಿರುವ ವೈನ್ ಶಾಪ್‍ಗಳು ಎರಡುನೂರರ ಒಳಗಡೆಯಿವೆ. ಆದರೂ ತಾಲ್ಲೂಕಿನಾದ್ಯಂತ ಮೂರುನೂರಕ್ಕೂ ಅತ್ಯಧಿಕ ಅಕ್ರಮ ಮದ್ಯ ಮಾರಾಟಗಾರರು ಇದ್ದಾರೆ. ಅವರನ್ನು ಬಂಧಿಸಿ ಠಾಣೆಗೆ ಕರೆ ತಂದಲ್ಲಿ, ಕೆಲವು ಪಟ್ಟ ಭದ್ರ ಹಿತಾಸಕ್ತಿಯ ರಾಜಕಾರಣಿಗಳು ಅಬಕಾರಿ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿ, ಅವರ ಬಿಡುಗಡೆಗೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಮೌಖಿಕವಾಗಿ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿರುವ ವಿಷಯ ಗುಪ್ತವಾಗೇನೂ ಇಲ್ಲ. ಆದ್ದರಿಂದ ಯುವಕರು ತಾಲ್ಲೂಕಿನಲ್ಲಿನ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಒತ್ತಾಯಿಸಿದ್ದಾರೆ. ತಂಡದಲ್ಲಿ ಎಸ್ ಸಿ ಕಾಲನಿಯ ಯುವಕರುಗಳಾದ ಬಾಬು, ಮೂರ್ತಿ, ಹನುಮಂತರಾಯ, ರಘು, ನಾಗಭೂಷಣ್, ರಮೇಶ್, ಗ್ರಾಪಂ ಸದಸ್ಯ ಆದಿನಾರಾಯಣ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ