ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ

0
69

ತುಮಕೂರು

      ಇಂದಿನ ಯುವಕರು ಮೊಬೈಲ್‍ಗಳೊಂದಿಗೆ ಮಗ್ನರಾಗಿದ್ದು, ಹಿರಿಯರ ಮಾತುಗಳೆಂದರೆ ಉದಾಸೀನವಾಗಿವೆ ಎಂದು ಪ್ರಜಾಪ್ರಗತಿ ಸಂಪಾದಕ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಆದ ಎಸ್.ನಾಗಣ್ಣ ವಿಷಾಧ ವ್ಯಕ್ತಪಡಿಸಿದರು.

      ನಗರದ ಶ್ರೀದೇವಿ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಭಾರತೀಯ ರೆಡ್‍ಕ್ರಾಸ್ ಘಟಕದ ವತಿಯಿಂದ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭ ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಯುವಕರು ತಮಗೆ ತಿಳಿಯದೆನೆ ರೆಡ್ ಕ್ರಾಸ್ ಘಟಕದ ಸದಸ್ಯರು ಆಗಿರುತ್ತಾರೆ. ಆದರೆ ಅವರಿಗೆ ಅದರ ಅರಿವೇ ಇರುವುದಿಲ್ಲ. ಕಾಲೇಜುಗಳಲ್ಲಿ ಶುಲ್ಕ ಪಾವತಿ ಮಾಡಿದಾಗ ಅದರಲ್ಲಿ ರೆಡ್ ಕ್ರಾಸ್ ಘಟಕ ಎಂದು ನಮೂದಿಸಿರುತ್ತಾರೆ ಅದನ್ನು ಯಾರು ಹಮನ ಹರಿಸುವುದಿಲ್ಲ. ಇಂದು ಯುವಜನಾಂಗವು ಬರೀ ಮೊಬೈಲ್‍ಗಳಲ್ಲಿ ಮಗ್ನರಾಗಿರುವುದು ಬಹಳ ಬೇಸರ ತರುತ್ತದೆ ಎಂದರು.

      ನಮ್ಮ ಜನಸಂಖ್ಯೆಯಲ್ಲಿ ಸುಮಾರು 43%ರಷ್ಟು ಯುವ ಜನಾಂಗ ಇದ್ದಾರೆ. ಅವರು ತಮ್ಮ ವಯಸ್ಸಿನಲ್ಲಿ ಸಾಧನೆ ಮಾಡುವ ಗುರಿಯನ್ನು ಬಿಟ್ಟು ಕೇವಲ ಮೊಬೈಲ್‍ಗಳಿಗೆ ಸೀಮಿತರಾಗಿದ್ದಾರೆ. ಮುಂದೆ ವಯೋವೃದ್ಧರಾದ ನಂತರ ಪಶ್ಚಾತ್ತಾಪ ಪಡುತ್ತಾರೆ. ಅದರಿಂದ ಏನು ಪ್ರಯೋಜನ ವಾಗುವುದಿಲ್ಲ. ಭಾರತೀಯ ರೆಡ್ ಕ್ರಾಸ್ ಸೊಸೈಟಿಯು ಪ್ರತಿಯೊಂದು ಕಾಲೇಜುಗಳಲ್ಲಿ ಪ್ರಾರಂಭ ಮಾಡಿದ್ದು, ಸೇವೆಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಯವ್ವನ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಗಮನ ಕೊಡದೆ ಇದ್ದರೆ ವಯೋವೃದ್ಧರಾದ ಮೇಲೆ ದೇಶಕ್ಕೆ ನೀಡಬಹುದಾದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.

        ನಾವು ಹಿರಿಯರ ಘನತೆ, ಹಿರಿಮೆ, ಚಾರಿತ್ರ್ಯವನ್ನು ಅನುಕರಣೆ ಮಾಡುವಂತಾಗಬೇಕು. ಅವರ ದ್ಯೇಯೋದ್ದೇಶಗಳನ್ನು ತಿಳಿದು ಅದರಂತೆ ನಡೆದುಕೊಳ್ಳಬೇಕು. ಇಂದಿನ ಯುವ ಪೀಳಿಗೆಗೆ ಕಾಲೇಜುಗಳಲ್ಲಿ ನೈತಿಕ ಬೋಧನೆ ಸಿಗುತ್ತಿಲ್ಲ. ಅವರು ನೆಗ್ಲಿಜೆನ್ಸಿಯಲ್ಲಿ ಮುಳುಗಿದ್ದಾರೆ. ದೈಹಿಕ ಶ್ರಮ ವಹಿಸಿ ಕೆಲಸ ಕಾರ್ಯ ಮಾಡುತ್ತಿಲ್ಲ ಅವರಲ್ಲಿ ದೈಹಿಕ ಶಕ್ತಿಯಿದ್ದರೂ ಅದನ್ನು ಹೊರತರುವಲ್ಲಿ ವಿಫಲರಾಗುತ್ತಿದ್ದಾರೆ. ಒಬ್ಬರ ಮೇಲೆ ಅವಲಂಬಿತರಾದರೆ ಮುಂದಿನ ದಿನಗಳಲ್ಲಿ ಆರೋಗ್ಯವು ಹಾಳಾಗುತ್ತದೆ ಈ ಬಗ್ಗೆ ರೆಡ್ ಕ್ರಾಸ್ ಸಂಸ್ಥೆಯು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

         ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಮನೋ ವೈದ್ಯರಾದ ಡಾ.ಅನಿಲ್‍ಕುಮಾರ್ ಮಾತನಾಡುತ್ತ, ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವೂ ಮುಖ್ಯವಾದುದು. ಒಂದು ವೇಳೆ ಮಾನಸಿಕ ಕಾಯಿಲೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಾಗಲಿದೆ. ಯುವ ಜನತೆ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳತ್ತ ಮಾರು ಹೋಗುತ್ತಿದ್ದಾರೆ. ಕ್ರಮೇಣ ಅವರು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಒಳಗಾಗುತ್ತಾರೆ. ಆದ ಕಾರಣ ಯಾವುದೇ ವ್ಯಕ್ತಿಯು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಗೊತ್ತಾದರೆ ಆತನ ಬಗ್ಗೆ ಎಚ್ಚರದಿಂದ ಇರಬೇಕು.

          ಇಂದಿಗೂ ಸಹ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿಯೂ ಕಾಯಿಲೆ ಬಂದರೆ ಯಂತ್ರ ಹಾಕಿಸಿಕೊಳ್ಳುವ, ದೇವರಿಗೆ ಹರಕೆ ಕಟ್ಟುವ ಸಂಸ್ಕøತಿಗಳು ಮುಂದುವರೆದಿವೆ. ದೇವರ ಮೇಲೆ ನಂಬಿಕೆ ಇಡಬೇಡಿ ಎಂದು ಹೇಳುವುದಿಲ್ಲ. ಆದರೆ ಮಾನಸಿಕ ಕಾಯಿಲೆಗಳಿಗೆ ದೇವಸ್ಥಾನಗಳು ಮದ್ದಲ್ಲ ಎಂಬುದನ್ನು ತಿಳಿಯಬೇಕು. ಮನಸ್ಸಿನಲ್ಲಿ ಆಗಿರುವ ಏರುಪೇರುಗಳನ್ನು ಸಮಾಲೋಚನೆಯ ಮೂಲಕವೇ ಬಗೆಹರಿಸಬೇಕು.

          ಅದಕ್ಕಾಗಿ ಮಾನಸಿಕ ವೈದ್ಯರ ಅಗತ್ಯವಿದೆ. ಮಕ್ಕಳು ಹೆಚ್ಚು ಅಂಕ ಪಡೆಯಬೇಕೆಂಬ ಧಾವಂತಕ್ಕೆ ಬೀಳುವ ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ. ಹೀಗಾಗಿ ಮಕ್ಕಳು ಅಂಕ ಪಡೆಯುವ ಯಂತ್ರಗಳಾಗುತ್ತಿದ್ದಾರೆ. ಇದಕ್ಕೆ ಬದಲಾಗಿ ಮಕ್ಕಳಲ್ಲಿ ಜೀವನ ಕೌಶಲ ರೂಪಿಸುವ ಪ್ರಯತ್ನ ಆಗಬೇಕು. ಇಂದಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ ಇದರ ಬಗ್ಗೆ ಅರಿವು ಮೂಡಿಸುವುದು ಮುಖ್ಯಕಾರ್ಯವಾಗಿದ್ದು, ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಯುವಜನತೆಯ ಮಾನಸಿಕ ಆರೋಗ್ಯ ಎಂಬ ಧ್ಯೇಯವಾಕ್ಯದೊಂದಿಗೆ ಆರೋಗ್ಯ ಸಂಸ್ಥೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ ಎಂದು ತಿಳಿಸಿದರು.
ಯುವ ರೆಡ್ ಕ್ರಾಸ್ ಘಟಕದ ನೋಡಲ್ ಆಫೀಸರ್‍ಆದ ಡಾ.ಕೆ.ಜಿ.ಪರಶುರಾಮ ಮಾತನಾಡುತ್ತ, ಇಂದಿನ ಯುವ ಪೀಳಿಗೆಯಲ್ಲಿ ತಾಳ್ಮೆ ಎಂಬುದು ಇಲ್ಲವೇ ಇಲ್ಲ.

          ಯುವ ಪೀಳಿಗೆ ವಿದ್ಯಾಭ್ಯಾಸ ಮಾಡುವ ಸಮಯದಿಂದಲೇ ನಿರ್ದಿಷ್ಠ ಗುರಿಯನ್ನು ಇಟ್ಟುಕೊಂಡಿರಬೇಕು. ಜೊತೆಗೆ ತಾಳ್ಮೆ ಇರಬೇಕು. ನಮ್ಮ ಯುವ ಪೀಳಿಗೆ ಎಜುಕೇಟೆಡ್ ಅನ್‍ಎಂಪ್ಲಾಯ್‍ಮೆಂಟ್ ಯೂತ್ಸ್ ಆಗಿ ಮಾರ್ಪಾಡಾಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿಯುತ್ತಲೇ ಯಾವ ಕೆಲಸ ಮಾಡಬೇಕು. ಎಲ್ಲಿ ಮಾಡಬೇಕು ಎಂಬುದರ ಪರಿಜ್ಞಾನ ಇಲ್ಲದೆ ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ಸ್ವಂತವಾಗಿ ಆಲೋಚನೆ ಮಾಡುವ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಮಥ್ರ್ಯ ಇಲ್ಲದಿದ್ದಾಗ ಮೆದುಳಿನ ಮೇಲೆ ಒತ್ತಡ ಬೀಳುವುದರಿಂದ ಅದನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವು ಬಳಸುವ ಸಾಧನಗಳನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡುವುದರ ಬದಲಾಗಿ ಸುಖಾಸುಮ್ಮನೆ ಅನವಶ್ಯಕವಾಗಿ ಬಳಕೆ ಮಾಡುವ ಮೂಲಕ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಯುವ ಪೀಳಿಗೆಯು ಇದನ್ನು ಅರ್ಥೈಸಿಕೊಂಡು ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

         ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಆರ್.ಹುಲಿನಾಯ್ಕರ್ ಅಧ್ಯಕ್ಷತೆ ªವಹಿಸಿದ್ದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ರೆಡ್ ಕ್ರಾಸ್ ಕಾರ್ಯಕ್ರಮ ಆಯೋಜಕರು ಶ್ರೀನಿವಾಸ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಎಸ್.ನಾಗಣ್ಣ ಹಾಗೂ ಕೆ.ಜಿ.ಪರಶುರಾಮ್ ಮತ್ತು ಡಾ.ಅನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಉಪನ್ಯಾಸಕ ಟಿ.ವಿ.ಸುರೇಂದ್ರ ಸ್ವಾಗತಿಸಿದರೆ, ವಿದ್ಯಾರ್ಥಿ ವೀರೇಂದ್ರಗೌಡ ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸಕಿ ಪಲ್ಲವಿ ವಂದಿಸಿದರು. ಕಾವ್ಯ ನಿರೂಪಣೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here