ಹಾವೇರಿ :
ಇಲ್ಲಿನ ರಾಜೇಂದ್ರ ನಗರದಲ್ಲಿರುವ ದೇಸಾಯಿ ಅವರ ಮನೆಯಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಯುವ ಪ್ರತಿಭಾ ಸನ್ಮಾನ ಕಾರ್ಯಕ್ರಮ ಜರುಗಿತು.
ಜಿಲ್ಲಾ ಮತ್ತು ತಾಲ್ಲೂಕಾ ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ಈ ಬಾರಿಯ ಎಸ್ .ಎಸ್. ಎಲ್.ಸಿ ಪರೀಕ್ಷೆಯಲ್ಲಿ ಹುಕ್ಕೇರಿಮಠದ ಶಿವಬಸವೇಶ್ವರ ಶಾಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಪಲ್ಲವಿ ಬಾಹುಬಲಿ ಹೋಳಗಿ ಇವಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಡಾ. ವ್ಹಿ. ಪಿ. ದ್ಯಾಮಣ್ಣನವರ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧಿಸಲು ಸಮಯಪ್ರಜ್ಞೆ ಬಹಳ ಮುಖ್ಯ.
ಸಮಯ ಮತ್ತು ತಾಯಿಯನ್ನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ . ಬಡ ಕೂಲಿಕಾರಳ ಮಗಳಾದ ಕುಮಾರಿ ಪಲ್ಲವಿ ಅವರಿಗೆ ವಿಶ್ವ ತಾಯಂದಿರ ದಿನದಂದು ಸನ್ಮಾನಿಸಿದ್ದು ಸೂಕ್ತ ಎಂದರು. ಕುಮಾರಿ ಪಲ್ಲವಿಯನ್ನು ವೇದಿಕೆಯಿಂದ ಸನ್ಮಾನಿಸಿ ಐದನೂರಾ ಒಂದು ರೂಪಾಯಿ ಪ್ರೋತ್ಸಾಹ ಧನವನ್ನು ನೀಡಿದ ಡಾ. ದ್ಯಾಮಣ್ಣನವರ ಮುಂದಿನ 2 ವರ್ಷಗಳ ಕಾಲದ ಪಿ.ಯು.ಸಿ ವಿದ್ಯಾಭ್ಯಾಸಕ್ಕೆ ತಗಲುವ ಕಾಲೇಜು ಶುಲ್ಕವನ್ನು ತಾವು ಭರಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಬಿ. ಬಸವರಾಜ ಮಾತನಾಡಿ ಪ್ರತಿಯೊಬ್ಬ ಹೆಣ್ಣಿನಲ್ಲಿ ತಾಯಿ ಗುಣವಿರುತ್ತದೆ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ. ನಿಜ ಅರ್ಥದಲ್ಲಿ ತಾಯಿ ನೆಲದ ದೇವರು. ಕುಮಾರಿ ಪಲ್ಲವಿ ಮಾತ್ರವಲ್ಲ ಎಲ್ಲ ಬಡ ಮಕ್ಕಳಿಗೆ ಸಮಾಜ ಸಹಾಯ ಮಾಡಬೇಕು ಎಂದರು.
ತಮ್ಮ ಸನ್ಮಾನಕ್ಕೆ ಚುಟುಕಾಗಿ ಕೃತಘ್ನತೆ ಸೂಚಿಸಿ ಮಾತನಾಡಿ ಕುಮಾರಿ ಪಲ್ಲವಿ ನನ್ನನ್ನು ಸಮಾಜ ಗುರುತಿಸಿ ಸನ್ಮಾನಿಸಿದ್ದು ನೈತಿಕ ಬಲ ಬಂದಿದೆ ಎಂದು ಹೇಳಿ ತಾವು ನೀಡಿದ ಸಹಾಯ ಮತ್ತು ಪ್ರೋತ್ಸಾಹಕ್ಕೆ ಚ್ಯುತಿ ಬರದಂತೆ ಹೆಚ್ಚು ಹೆಚ್ಚು ಓದಿ ಗುರಿ ಮುಟ್ಟುವೆ ಎಂದಳು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಸದಸ್ಯೆ ಶ್ರೀಮತಿ ರೇಣುಕಾ ಗುಡಿಮನಿ ಮಾತನಾಡಿ ಕರುಣೆ ಮತ್ತು ಸಹನೆಯ ಪ್ರತಿ ರೂಪವೇ ಪ್ರತಿಯೊಬ್ಬರ ತಾಯಿಯಾಗಿದ್ದು, ನಾವು ನಡೆದಾಡುವ ಭೂಮಿತಾಯಿಯೂ ಕೂಡ ಜೀವ ಸಂಕುಲನದ ಮಹಾ ತಾಯಿ ಎಂದು ಹೇಳಿ ಅಂತಹ ಭೂತಾಯಿಯ ರಕ್ಷಣೆ ಕೂಡಾ ವಿಶ್ವ ತಾಯಂದಿರ ದಿನಾಚರಣೆಯ ಸಂದೇಶವಾಗಬೇಕೆಂದರು.
ಕಲಾವಿದೆ ಶ್ರೀಮತಿ ಶಶಿಕಲಾ ಅಕ್ಕಿ ಅವರು ಮಾತನಾಡಿ ಬಾಲ್ಯದಿಂದ ಹಿಡಿದು ಪ್ರೌಢಾವಸ್ಥೆಯವರೆಗೆ ಸಾಕಿ ಸಲುಹಿದ ತಾಯಂದಿರನ್ನು ವೃದ್ಧಾಶ್ರಮಕ್ಕೆ ಕಳಿಸುವ ಕೆಲಸ ನಿಲ್ಲಬೇಕು. ಅಂದಾಗ ಮಾತ್ರ ವಿಶ್ವ ತಾಯಂದಿರ ದಿನಕ್ಕೆ ಅರ್ಥ ಬರುತ್ತದೆ ಎಂದರು. ಸಭೆಯನ್ನು ಉದ್ದೇಶಿಸಿ ಸರ್ವಶ್ರೀ ಸಿ. ಎಸ್. ಮರಳಿಹಳ್ಳಿ, ಗಂಗಾಧರ ನಂದಿ, ಕುಮಾರ ಮರಳಿಹಳ್ಳಿ, ಎಂ. ಎಸ್. ಯತ್ತಿನಹಳ್ಳಿ , ಪಿ. ಎಫ್ ಗುತ್ತಲ, ಪೃಥ್ವಿರಾಜ ಬೆಟಗೇರಿ . ಆರ್. ಎಫ್ ಕಾಳೆ , ರಾಜು ಭಕ್ಷಿ ಮುಂತಾದವರು ಮಾತನಾಡಿದರು.
ಆರಂಭದಲ್ಲಿ ಡಾ. ಶ್ರ್ರಿಪಾದ ದೇಶಾಯಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಶೋಕ ಎಣ್ಣಿಯವರ ನಡೆಸಿದರು. ಶಿಕ್ಷಕ ಜಿ. ಎಂ ಓಂಕಾರಣ್ಣನವರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕೊನೆಯಲ್ಲಿ ಚಂದ್ರಶೇಖರ ಮಾಳಗಿ ವಂದಿಸಿದರು.