ಹಾನಗಲ್ಲ :
ಹದಿನೆಂಟರ ಹರೆಯದ ಯುವತಿಯೋರ್ವಳ ಸಾವು ಸಂಶಯಾಸ್ಪದವಾಗಿದ್ದು, ತಡವಾಗಿ ಬೆಳಕಿಗೆ ಬಂದಿರುವುದಲ್ಲದೆ ಪಾಲಕರು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶುಕ್ರವಾರ ಆಶಾ ಪುಟ್ಟಪ್ಪ ಗೊಲ್ಲರ(18). ಹಾನಗಲ್ಲ ತಾಲೂಕಿನ ಹೀರೂರ ಗ್ರಾಮದ ಗೊಲ್ಲರ ಬಿಡಾರದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಂದೆ ತಾಯಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಂದೆ ಪುಟ್ಟಪ್ಪ ಶನಿವಾರ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪುಟ್ಟಪ್ಪ ಹಾಗೂ ಕುಟುಂಬದ ಸದಸ್ಯರಿಗೆ ಗೊಲ್ಲರ ಬಿಡಾರದ ಸಮುದಾಯ ತಿಂಗಳುಗಳ ಹಿಂದೆಯೇ ಬಹಿಷ್ಕಾರ ಹಾಕಿತ್ತು ಎನ್ನಲಾಗಿದೆ. ಈ ಕುಟುಂಬದ ಸದಸ್ಯರನ್ನು ಊರಿನ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ತಾಕೀತು ಮಾಡಲಾಗಿದೆ. ಸಂಶಯಾಸ್ಪದ ಸಾವಿಗೊಳಗಾದ ಆಶಾ ಎಂಬ ಯುವತಿ ಗ್ರಾಮ ಹಾಗೂ ಗ್ರಾಮದ ಹೊರ ಊರುಗಳಲ್ಲಿಯೂ ಗ್ರಾಮಸ್ಥರೊಂದಿಗೆ ಮಾತನಾಡದಂತೆ ತಾಕೀತು ಮಾಡುತ್ತಿದ್ದರು ಎನ್ನಲಾಗಿದೆ.
ಅಲ್ಲದೆ ಗುರುವಾರ ರಾತ್ರಿ ನಡೆದ ಊರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ ಆಶಾಳನ್ನು ಮರಳಿ ಕಳಿಸಲಾಗಿತ್ತೆಂದು ಹಾಗೂ ಇದರಿಂದ ತನ್ನ ಮಗಳು ಮನನೊಂದಿದ್ದಳೆಂದು ಹೇಳುತ್ತಾರೆ. ಅಲ್ಲದೇ ತನ್ನ ಮಗಳ ಸಾವು ಆತ್ಮ ಹತ್ಯೆಯೋ ಏನೋ ಎಂಬ ಬಗ್ಗೆ ನಿಖರವಾಗಿ ಹೇಳಲಾಗುತ್ತಿಲ್ಲ ಎಂದು ಪುಟ್ಟಪ್ಪ ಗೊಲ್ಲರ ಅಳಲು ತೋಡಿಕೊಳ್ಳುತ್ತಾರೆ.
ಈ ಬಗ್ಗೆ ಸಮಗ್ರ ತನಿಖೆಯಾಗಿ ನಮಗೆ ನ್ಯಾಯ ಸಿಗಬೇಕು ಎಂಬುದು ಪುಟ್ಟಪ್ಪ ಗೊಲ್ಲರ ಅವರ ಒತ್ತಾಸೆಯಾಗಿದೆ. ಊರಿನಲ್ಲಿ ನಮ್ಮ ಕುಟುಂಬಕ್ಕೆ ಒಂದು ಜಾಗೆಯ ವಿಷಯಕ್ಕೆ ಬಹಿಷ್ಕಾರ ಹಾಕಿರುವುದು ನೋವಿನ ಸಂಗತಿ. ಇದನ್ನು ಕಾನೂನು ತೀರ್ಮಾನಿಸಲಿ ಎಂದು ತಿಳಿಸಿದ್ದಾರೆ.