ಹೊಳಲ್ಕೆರೆ
ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸರಕಾರದ ಯೋಜನೆಗಳು ರೈತರಿಗೆ ಸರಿಯಾದ ರೀತಿಯಲ್ಲಿ ಸದ್ವಿನಿಯೋಗವಾಗುತ್ತಿಲ್ಲ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಕಂದಿಕೆರೆ ಸುರೇಶ್‍ಬಾಬು ಆರೋಪಿಸಿದರು.
ಪಟ್ಟಣದ ಸಹಾಯಕ ಕೃಷಿ ನಿರ್ಧೇಶಕರ ಕಚೇರಿಗೆ ಗುರುವಾರ ಸಂಜೆ ಭೇಟಿ ನೀಡಿ ಲೆಕ್ಕಪತ್ರಗಳ ಪರೀಶೀಲನೆ ನಡೆಸಿ ನಂತರ ತಾಲೂಕಿನ ಚಿತ್ರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಚೆಕ್ ಡ್ಯಾಂ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ನಾಡ್ನುಡಿಯಾಗಬಾರದು, ಅದು ಕಾರ್ಯಗತಗೊಳ್ಳಬೇಕಾದರೆ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಬೇಕು. ರೈತರ ಒಡನಾಡಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ವಿವಿಧ ಯೋಜನೆಗಳಿಗೆ ಸರಿಯಾದ ಕ್ರಿಯಾಯೋಜನೆ ತಯಾರಿಸಿಲ್ಲ. ಸೂಕ್ತ ದಾಖಲೆಗಳಿಲ್ಲ, ತಾಂತ್ರಿಕ ಯೋಜನೆಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿದರು.
ಕೃಷಿ ಸಿಂಚಾಯ ಯೋಜನೆ ನಿರ್ಲಕ್ಷ:
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ರೈತರಿಗೆ ತಲುಪಿಸುವಲ್ಲಿ ನಿರ್ಲಕ್ಷ ವಹಿಸಿದ್ದೀರಿ, ಈ ಯೋಜನೆಯಡಿಯಲ್ಲಿ ಲೆಕ್ಕ ಪತ್ರದ ಪ್ರಕಾರ 17 ಕಾಮಗಾರಿ ಗುರುತಿಸಿ, 60 ಲಕ್ಷ ವೆಚ್ಚವನ್ನು ವ್ಯಯಿಸಬೇಕಾಗಿದ್ದ ನೀವು, ಕೇವಲ 3 ಕಾಮಗಾರಿ ಮಾತ್ರ ಮಾಡಿದ್ದು, ಕೇವಲ 6.38 ಲಕ್ಷ ರೂ ಮಾತ್ರ ಬಳಕೆ ಮಾಡಿದ್ದೀರಿ. ಉಳಿದ ಹಣ ವಾಪಾಸ್ ಹೋಗುವಂತೆ ಮಾಡಿರುವುದು ನಿಮ್ಮ ನಿರ್ಲಕ್ಷತನವನ್ನು ತೋರಿಸುತ್ತಿದೆ ಎಂದರು.
ಜಿಪಂ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ಅಂತರ್ಜಲ ಹೆಚ್ಚಿಸುವಂತಹ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ತಾಲೂಕಿನಲ್ಲಿ ಸದ್ಬಳಕೆ ಮಾಡಲಾಗಿಲ್ಲ. ಆದರೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಹೆಚ್ಚೆಚ್ಚು ಕಾಮಗಾರಿಗಳನ್ನು ಮಾಡಲಾಗಿದೆ. ನಮ್ಮ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳದ ಬಗ್ಗೆ ನಿರ್ಲಕ್ಷ ತೋರಿರುವುದು ನೋವುಂಟು ಮಾಡಿದೆ ಎಂದರು.ಕೃಷಿ ಇಲಾಖೆ ನಿರ್ಧೇಶಕ ಹುಲಿರಾಜ್, ಪ್ರಭಾರೆ ಸಹಾಯಕ ಕೃಷಿ ನಿರ್ದೇಶಕ ಉಮೇಶ್, ಜಿಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಲೋಕೇಶ್ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ