ಲೋಪವೆಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಪಂ ಅಧ್ಯಕ್ಷೆ

ತುಮಕೂರು

   ಸಕಾಲದಲ್ಲಿ ಬಿಲ್ಲು, ದಾಖಲಾತಿ ಸಲ್ಲಿಸದ ಕಾರಣ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸುಮಾರು 1.93 ಕೋಟಿ ರೂ. ಹಣ ಸರ್ಕಾರಕ್ಕೆ ವಾಪಸ್ಸಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷತನವೇ ಕಾರಣ, ಲೋಪ ಮಾಡಿರುವ ಅಧಿಕಾರಿಗಳೇ ಆ ಹಣವನ್ನು ಸರ್ಕಾರದಿಂದ ವಾಪಸ್ ತರಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

   ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿದ್ದ ಲತಾ ರವಿಕುಮಾರ್ ಅವರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಮುಗಿದ ಕೆಲ ಕಾಮಗಾರಿಗಳ ಬಿಲ್ಲು ಪಾವತಿಸುವುದು ಬಾಕಿ ಇದೆ, ಇನ್ನಷ್ಟು ಕಾಮಗಾರಿ ಆರಂಭವಾಗಬೇಕಿದೆ. ಈ ಸ್ಥಿತಿಯಲ್ಲಿ ಇದ್ದ 1.93 ಕೋಟಿ ರೂ. ಹಣ ಸರ್ಕಾರಕ್ಕೆ ವಾಪಸ್ಸು ಹೋದರೆ ಅಭಿವೃದ್ಧಿ ಹೇಗೆ ಸಾಧ್ಯ, ಈ ಲೋಪಕ್ಕೆ ನೀವೇ ಹೊಣೆ ಹೊತ್ತು ಆ ಹಣ ವಾಪಾಸ್ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಕಾರಣ ಈ ಸಮಸ್ಯೆಯಾಯಿತು ಎಂದು ಇಂಜಿನಿಯರ್‍ಗಳು ಕಾರಣ ಹೇಳಿದರು, ಇದನ್ನು ಒಪ್ಪದ ಸಿಇಓ ಶುಭಾ ಕಲ್ಯಾಣ್, ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದು ಮೊದಲೇ ತಿಳಿದಿರುತ್ತದೆ, ಆಗ ಮುನ್ನೆಚ್ಚರಿಕೆ ವಹಿಸಿ ಜನವರಿ ವೇಳೆಗೆ ಸಿದ್ಧ ಮಾಡಿಕೊಂಡು ಖಜಾನೆಗೆ ಅಗತ್ಯ ಬಿಲ್ಲು, ದಾಖಲಾತಿ ಸಲ್ಲಿಸಿದ್ದರೆ ಹಣ ಬಳಕೆ ಮಾಡಿಕೊಳ್ಳಬಹುದಿತ್ತು ಎಂದರು.
ಈ ವರ್ಷ ಅಂತಹ ಲೋಪವಾಗದಂತೆ ವರ್ಷಾರಂಭದಿಂದಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಮುಗಿಸಿ ಸರ್ಕಾರದ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಕ್ಷೆ ಲತಾ ಹೇಳಿದರು.

      ಆದರೆ ಇಂಜಿನಿಯರ್‍ಗಳು ತಾಲ್ಲೂಕವಾರು ಕ್ರಿಯಾ ಯೋಜನೆ ಇನ್ನೂ ಸಿದ್ಧ ಮಾಡದೇ ಇರುವುದು ಅಧ್ಯಕ್ಷರು ಹಾಗೂ ಸಿಇಓ ಅವರನ್ನು ಕೆರಳಿಸಿತು. ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಯಾ ಸದಸ್ಯರೊಂದಿಗೆ ಚರ್ಚೆ ನಡೆಸಿ ಶೀಘ್ರವಾಗಿ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧ ಮಾಡಿ ಎಂದು ಹೇಳಿದರು.
ಹಾಸ್ಟೆಲ್ ಸೀಟು ಕೊಡಿ

     ಹಿಂದುಳಿದ ವರ್ಗದ ಹಾಸ್ಟೆಲ್‍ಗಳ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ, ಹೆಚ್ಚಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಬಿಸಿಎಂ ಇಲಾಖೆ ಅಧಿಕಾರಿ ಸುಬ್ರಾ ನಾಯ್ಕರಿಗೆ ಒತ್ತಾಯ ಮಾಡಿದರು.

     ಈಗ ನಿಗಧಿಪಡಿಸಿರುವ ಅನುದಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಪ್ರವೇಶ ನೀಡಲಾಗಿದೆ. ಜಿಲ್ಲೆಯಲ್ಲಿ ಖಾಲಿ ಇದ್ದ ಇತರೆ ಹಾಸ್ಟೆಲ್‍ಗಳ ಸೀಟುಗಳನ್ನು ಬೇಡಿಕೆ ಇರುವ ಹಾಸ್ಟೆಲ್‍ಗಳಿಗೆ ವರ್ಗಾವಣೆ ಮಾಡಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಮಾಡಲಾಗಿದೆ. ಈಗಿರುವ ಬೇಡಿಕೆಯಂತೆ ಹೆಚ್ಚುವರಿಯಾಗಿ ಐದು ಹಾಸ್ಟೆಲ್‍ಗಳ ಅಗತ್ಯವಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದರು.

     ತಮ್ಮ ಅನುದಾನ ಹಾಗೂ ಕೆಲವು ಜಿಲ್ಲಾ ಪಂಚಾಯ್ತಿ ಸದಸ್ಯರೂ ತಮ್ಮ ಅನುದಾನವನ್ನು ವಿದ್ಯಾರ್ಥಿಗಳ ಹಾಸ್ಟೆಲ್ ಅನುಕೂಲಕ್ಕಾಗಿ ನೀಡಲು ಸಿದ್ಧವಿದ್ದಾರೆ, ಬಳಸಿಕೊಂಡು ಹೇಗಾದರೂ ಮಾಡಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅನುಕೂಲ ಮಾಡಿಕೊಡಿ ಎಂದು ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಹೇಳಿದರು.

      ಸಾಧ್ಯವೇ ಇಲ್ಲ ಮೇಡಂ ಎಂದು ಅಧಿಕಾರಿ ಹೇಳಿದರು. ಅಷ್ಟಕ್ಕೇ ಸುಮ್ಮನಾಗದ ಉಪಾಧ್ಯಕ್ಷರು, ನೀವು ಕೇವಲ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಷ್ಟೇ ಹಾಸ್ಟೆಲ್ ಸೀಟು ಕೊಡುವಿರಿ, ಕಡಿಮೆ ಅಂಕ ಪಡೆದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

       ಇಲಾಖೆ ನಿಯಮಾನುಸಾರ ಪ್ರವೇಶ ನೀಡಬೇಕಾಗಿದೆ ಎಂದ ಸುಬ್ರಾ ನಾಯ್ಕ ಅವರು, ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಸ್ಟೆಲ್‍ಗಳ್ಲಿ ಶೇಕಡ 25ರಂದು ಸೀಟುಗಳನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡಲು ಅವಕಾಶವಿದೆ, ಅವರಲ್ಲಿ ಖಾಲಿ ಇದ್ದರೆ ಪ್ರವೇಶ ನೀಡಬಹುದು ಎಂದು ಬಿಸಿಎಂ ಇಲಾಖೆ ಅಧಿಕಾರಿ ಹೇಳಿದರೆ, ತಮ್ಮ ಇಲಾಖೆ ಹಾಸ್ಟೆಲ್‍ಗಳೂ ಭರ್ತಿಯಾಗಿವೆ, ಹೆಚ್ಚುವರಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಆ ಅಧಿಕಾರಿಗಳೂ ಹೇಳಿದರು.ಮುಂದಿನ ವರ್ಷಕ್ಕಾದರೂ ಹೆಚ್ಚುವರಿ ಹಾಸ್ಟೆಲ್ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸಲಹೆ ಮಾಡಿದರು.

ಶೇಂಗಾ ಬಿತ್ತನೆ ಇಲ್ಲ

       ಸಕಾಲದಲ್ಲಿ ಮಳೆ ಬೀಳದ ಕಾರಣ ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಶೇಂಗಾ ಬಿತ್ತನೆಯಾಗಿಲ್ಲ. 1.2 ಲಕ್ಷ ಎಕರೆಯಲ್ಲಿ ಬಿತ್ತನೆ ಆಗಬೇಕಾಗಿದ್ದ ಶೇಂಗಾವನ್ನು ರೈತರು ಈ ಬಾರಿ 49,504 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಈಗ ಶೇಂಗಾ ಬಿತ್ತನೆ ಅವಧಿ ಮುಗಿದಿರುವ ಕಾರಣ, ರೈತರು ರಾಗಿ ಇಲ್ಲವೆ, ಸಿರಿ ಧಾನ್ಯ ಬಿತ್ತನೆ ಮಾಡಿ, ಎರಡೂ ಸಾಧ್ಯವಾಗದಿದ್ದರೆ ಹುರುಳಿ ಬಿತ್ತನೆ ಮಾಡಿ ಎಂದು ಪ್ರಚಾರ ಮಾಡುತ್ತಿರುವುದಾಗಿ ಜಂಟಿ ಕೃಷಿ ನಿರ್ದೇಕ ಜಯಸ್ವಾಮಿ ಹೇಳಿದರು.

      ಸಿರಿ ಧಾನ್ಯ ಬೆಳೆಯುವ ರೈತರಿಗೆ ಸರ್ಕಾರದಿಂದ ರೈತ ಸಿರಿ ಯೋಜನೆಯಡಿ ಹೆಕ್ಟೇರ್ ಗೆ 10 ಸಾವಿರ ರೂ ಸಹಾಯ ಧನ ನೀಡಲಾಗುತ್ತದೆ. 8 ಸಾವಿರ ರೈತರು ಸಿರಿ ಧಾನ್ಯ ಬೆಳೆಯಲು ಅರ್ಜಿ ಸಲ್ಲಿಸಿ ಮುಂದೆ ಬಂದಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

9 ಕಡೆ ಗೋಶಾಲೆ

    ಎಲ್ಲಾ ಬರಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ತೆರೆಯಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ ಅದರಂತೆ ಗುಬ್ಬಿ ಹೊರತುಪಡಿಸಿ ಉಳಿದ 9 ತಾಲ್ಲೂಕುಗಳಲ್ಲಿ ಗೋಶಾಲೆ ತೆರೆಯಲಾಗಿದೆ. ತುಮಕೂರು ತಾಲ್ಲೂಕಿನಲ್ಲಿ ಕೋರಾ ಹೋಬಳಿಯಲ್ಲಿ ಆರಂಭಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ ಪ್ರಕಾಶ್ ಹೇಳಿದರು.

       ತುಮಕೂರು ತಾಲ್ಲೂಕಿನಲ್ಲಿ ಗೋಶಾಲೆ ತೆರೆಯುವಂತೆ ತಾವೇ ಸಭೆಯಲ್ಲಿ ಒತ್ತಾಯ ಮಾಡಿದ್ದು, ಆದರೆ, ಗೋಶಾಲೆ ಆರಂಭಿಸಿದ್ದ ಬಗ್ಗೆ ತಮಗೆ ಮಾಹಿತಿ ನೀಡಲಿಲ್ಲ, ನನಗೇ ಮಾಹಿತಿ ಇಲ್ಲವೆಂದ ಮೇಲೆ ರೈತರಿಗೆ ಯಾವ ರೀತಿಯ ಪ್ರಚಾರ ಮಾಡಿದ್ದೀರಿ ಎಂದು ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.ಕೋರಾದಲ್ಲಿ ಗೋಶಾಲೆಯ ಅವಶ್ಯಕತೆ ಇರಲಿಲ್ಲ, ಸುಪ್ರೀಂ ಕೋರ್ಟ್ ಆದೇಶದ ಮೇಲೆ ಪ್ರಾರಂಭ ಮಾಡಲಾಗಿದೆ. ಇಲ್ಲಿಗೆ ರಾಸುಗಳು ಬರುತ್ತಿಲ್ಲ ಎಂದು ಡಾ. ಪ್ರಕಾಶ್ ಹೇಳಿದರು.

       ಜಿ.ಪಂ ಉಪಾಧ್ಯಕ್ಷೆ ಮಾತನಾಡಿ ಈಗಾಗಲೇ ಜಿಲ್ಲೆಗೆ ಹೇಮಾವತಿ ನೀರು ಹರಿಸಿದ್ದು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಮಾಹಿತಿ ಕೇಳಿದಾಗ, ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 115.49 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಂತೆ ಕ್ರಿಯಾ ಯೋಜನೆ ರೂಪಿಸಲಾಗಿದೆ. 10 ತಾಲೂಕಿನ 771 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಕೆಲವು ಗ್ರಾಮಗಳಿಗೆ ನೀರು ಹರಿಸಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಕಾರ್ಯಪಾಲಕ ಇಂಜಿನಿಯರ್ ಸಭೆಗೆ ತಿಳಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link