ಎಲ್ಲರೂ ಮತದಾನ ಮಾಡಿ ಸಂವಿಧಾನ ಗೌರವಿಸಿ: ಡಿಸಿ ರಾಕೇಶ್ ಕುಮಾರ್.

ತುಮಕೂರು

        ಮುಂಬರುವ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಶೇ. 100ರಷ್ಟು ಮತದಾನ ಮಾಡಿ ಡಾ: ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಗೌರವಿಸಿ ಮಾದರಿ ಪ್ರಜೆಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಕರೆ ನೀಡಿದರು.

         ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿಂದು ನಡೆದ ಡಾ: ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಅಂಬೇಡ್ಕರ್ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದ್ದು, ಚುನಾವಣೆಯ ನಂತರ ಎಲ್ಲರೂ ಒಗ್ಗೂಡಿ ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

          ಡಾ: ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಒತ್ತು ನೀಡಿದ್ದರೂ, ಅದರಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಶಿಕ್ಷಣವಿಲ್ಲದೆ ಸಂಘಟನೆ ಹಾಗೂ ಹೋರಾಟ ಹೆಚ್ಚಿನ ಯಶಸ್ಸು ಸಿಗುವುದಿಲ್ಲ ಎಂಬುದನ್ನು ಅವರು ಹೇಳಿದರು. ಸಾಕ್ಷರತೆಯಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಬದಲಾವಣೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತಿದ್ದ ವಿಶ್ವರತ್ನ ಡಾ: ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ನಡೆಸಿದ ವಿಷಯಗಳು ಇಂದಿಗೂ ಸಂಶೋಧನೆಗಳಿಗೆ ಆಧಾರವಾಗಿವೆ ಎಂದು ಅವರು ತಿಳಿಸಿದರು.

          ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ 6ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಾಬಾ ಸಾಹೇಬ ಜಿನರಾಳ್ಕರ್ ಅವರು, ಡಾ: ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ, ಅಸ್ಪøಶ್ಯತೆ, ಸಾಮಾಜಿಕ ನ್ಯಾಯ, ಸಮಾನತೆಯನ್ನು ತಂದು ಕೊಟ್ಟಿದ್ದಲ್ಲದೆ ನಮ್ಮ ದೇಶದ ಇತಿಹಾಸ ಬದಲಿಸಿದ ಯುಗ ಪುರುಷ, ವಿಶ್ವ ಮಾನ್ಯ ಸಂವಿಧಾನವನ್ನು ನೀಡಿದ ಮಹಾಪುರುಷ, ಭಾರತ ಸಂವಿಧಾನ ಜಾರಿಗೆ ಬಂದ ನಂತರ ರಚನೆಯಾದ ಆಫ್ರಿಕನ್, ಎಷಿಯನ್, ನೇಪಾಳ ದೇಶಗಳ ಸಂವಿಧಾನಕ್ಕೆ ಭಾರತೀಯ ಸಂವಿಧಾನ ಆಧಾರವಾಗಿದೆ ಎಂದು ಅವರು ತಿಳಿಸಿದರು.

         ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ: ಶೋಭಾರಾಣಿ, ಉಪವಿಭಾಗಾಧಿಕಾರಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ: ಜಿ.ಪಿ. ದೇವರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳು, ಮುಖಂಡರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link